Categories
ಕರಾವಳಿ ಸುದ್ದಿ

ಅತೀ ಹೆಚ್ಚಿನ ಬಿಜೆಪಿ ಸದಸ್ಯತ್ವದ ಬಗ್ಗೆ ಹರ್ಷ

ಉಡುಪಿ : ಭಾರತೀಯ ಜನತಾ ಪಾರ್ಟಿ ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನದ ಕಾರ್ಯಗಾರ ಆಯೋಜಿಸಲಾಗಿದ್ದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಕಿಶೋರ್ ಕುಮಾರ್ ಕುಂದಾಪುರ ವಹಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಸಂಸದ ಭಗವಂತ ಖೂಭಾ ಅವರ ಉಪಸ್ಥಿತಿಯಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನದ ಕಾರ್ಯಗಾರ ಬಗ್ಗೆ ಸವಿಸ್ತಾರವಾಗಿ ಮಾತನಾಡಿ ಮಂಗಳೂರು ವಿಭಾಗದಲ್ಲಿಯೆ ವೈಯಕ್ತಿಕವಾಗಿ ಅತಿ ಹೆಚ್ಚಿನ ಸದಸ್ಯತ್ವ ನೊಂದಾವಣಿ ಮಾಡಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದ.ಅವರು ಈವರೆಗಿನ ತನಕ ಸರಿಸುಮಾರು 1950 ರಷ್ಟು ಬಿಜೆಪಿ ಸದಸ್ಯತ್ವ ಮಾಡಿರುವ ಭಾರತೀಯ ಜನತಾ ಪಾರ್ಟಿಯ ಕುಂದಾಪುರ ಮಂಡಲದ ಪ್ರಧಾನ ಕಾರ್ಯದರ್ಶಿ ಸುಧೀರ್ ಕೆ.ಎಸ್. ಇವರನ್ನು ಅತ್ಯಂತ ಗೌರವಪೂರಕವಾಗಿ ಅಭಿನಂದಿಸಿದರು.

Categories
ಹೊಂಗಿರಣ

ಸಾಲು ಸಾಲು ಸೋಲುಗಳು- ಯಶಸ್ಸಿನ ಮೂಲ ಮಂತ್ರ 

ತಾಯಿಯ ಗರ್ಭದಿಂದ ಹೊರಗಡೆ ಬಂದು ಜೀವನ ಏನು ಎಂಬುದನ್ನು ಅರಿತಾಗ ಕಷ್ಟಗಳ ಮಹಾಪೂರಗಳು ನಮ್ಮನ್ನು ಆವರಿಸಿಕೊಂಡು ಬಿಡುತ್ತವೆ.ಗೆಲುವು ಆಕಾಶದಷ್ಟು ದೂರವಿದ್ದರೂ  ಮನಸ್ಸನ್ನು ಸಂಕುಚಿತವನ್ನಾಗಿ ಮಾಡಿ ಬಿಡುತ್ತವೆ.ಅವಿರತ ಪ್ರಯತ್ನ ನಿರಂತರ ಛಲವಿದ್ದರೂ ಗೆಲುವು ಸಿಗದಿದ್ದಾಗ ಪ್ರಯತ್ನ ಇಷ್ಟೇ ಸಾಕು ಎಂದು ಮನದಲ್ಲಿ ಮೂಡುವುದು ಸಾಮಾನ್ಯ.ಜೀವನ ಸೋಲುಗಳು ಸುಖ ದುಃಖಗಳು ಪ್ರತಿಯೊಬ್ಬನ ಜೀವನದ ಪ್ರಧಾನ ಅಂಗಗಳು.

ಕುರುಕ್ಷೇತ್ರದಲ್ಲಿ ಅರ್ಜುನನು ಹತಾಶನಾದಂತೆ ಬೆನ್ನು ಬೆನ್ನಿಗೆ ಕಷ್ಟ ಸೋಲುಗಳು ಬಂದಾಗ ನಾವು ಹತಾಶರಾಗುವುದು ಸಾಮಾನ್ಯ.ಜೀವನದಲ್ಲಿ ಅರ್ಜುನನಿಗೆ ಶ್ರೀ ಕೃಷ್ಣನು ಭಗವದ್ಗೀತೆಯನ್ನು ಬೋಧಿಸಿದಂತೆ ನಮ್ಮ ಜೀವನವೆಂಬ ಕುರುಕ್ಷೇತ್ರದಲ್ಲಿ ಶ್ರೀ ಕೃಷ್ಣ ನಂತಹ ಮಾರ್ಗದರ್ಶನ ಕೊಡುವಂತಹ ಗುರು ಜೀವನದ ಸಂಪೂರ್ಣ ಸಾರವನ್ನು ಮತ್ತು ಮಾರ್ಗದರ್ಶನ ಕೊಡುವಂತಹ ಗುರು ಬೇಕು.ಗೆಲುವು ಬಾನಿನ ಎತ್ತರದಷ್ಟೇ ದೂರವಿದೆ.ಮರಳಿ ಪ್ರಯತ್ನ ಮಾಡು ಜೀವನವಿರುವ ತನಕ.ಗೆಲುವು ಸಿಗದಿದ್ದರೇನು, ಮಾಡಿದ ಪ್ರಯತ್ನಗಳ ಸೊಗಡು ಜೀವನದ ಅಂತ್ಯದವರೆಗೆ ನಮ್ಮ ಹೃದಯದಲ್ಲಿರುವುದು. ಯಶಸ್ಸು ಪಡೆಯಬೇಕಾದವನಿಗೆ ನಿನ್ನ ಸೋಲುಗಳೇ ಭಗವದ್ಗೀತೆಯಾಗಬಲ್ಲದು.ಸಾಲು ಸಾಲು ಸೋಲುಗಳು ಮಾಡಿದ ಪ್ರಯತ್ನ ಎಂದಿಗೂ ಹುಸಿಯಾಗುವುದಿಲ್ಲ.

ಸೋಲು ಬಂದರು ಮಾಡಿದ ಪ್ರಯತ್ನಗಳ ಆತ್ಮ ತೃಪ್ತಿ ನಮ್ಮ ಜೀವನದ ಸಾಧನೆಯಾಗಬಲ್ಲದು.ಕೆಲವರಿಗೆ
ಯಶಸ್ಸು ಎಂದರೆ ಹಣ.ಇನ್ನು ಕೆಲವರಿಗೆ ಯಶಸ್ಸು ಎಂದರೆ ಆತ್ಮತೃಪ್ತಿ.ಇನ್ನು ಕೆಲವರಿಗೆ ಯಶಸ್ಸು ಎಂದರೆ ತಾವು ಬಯಸಿದ ಜೀವನ.ಸಂಪೂರ್ಣ ಪುಸ್ತಕದ ವಿವರವನ್ನು ಎರಡೇ ಸಾಲುಗಳಲ್ಲಿ ಬರೆದು ಮುಗಿಸಿ ನಮಗೆ ಓದಲು ಸಮಯವಿಲ್ಲ ಎಂಬ ಈ ಕಾಲದಲ್ಲಿ ಪ್ರಯತ್ನ ಎಂಬುದು ಮರೀಚಿಕೆ ಮಾತ್ರ.ಸಾಧನೆಗೆ ಸಾಲು ಸಾಲು ಪ್ರಯತ್ನಗಳು ಬೇಕು.ಜೇಡ ಮತ್ತೆ ಮತ್ತೆ ಬಲೆಯನ್ನು ಹೆಣೆದಂತೆ.ಹಣ ಮಾಡಲು ಅಡ್ಡ ದಾರಿಗಳಿರಬಹುದು.ಏನೇ ಇರಲಿ ಸಾಧನೆ ಎಂದರೆ ಆತ್ಮ ತೃಪ್ತಿ.ಸೋಲೇ ಬರಲಿ ಗೆಲುವೇ ಬರಲಿ ಆತ್ಮ ತೃಪ್ತಿ ಎಂಬುದೇ ಯಶಸ್ಸಿಗೆ ಇರುವಂತಹ ಮೂಲ ಮಂತ್ರ.ಸಾಲು ಸಾಲು ಸೋಲುಗಳು ಸಾಧಕನ ಪಾಲಿನ ಭಗವದ್ಗೀತೆಯಾಗಬಲ್ಲದು.

Categories
ಕರಾವಳಿ ಸುದ್ದಿ

ಕೋಟದ ಶ್ರೀ ಅಮೃತೇಶ್ವರೀ ಶರನ್ನವರಾತ್ರಿ ಉತ್ಸವ

ಕೋಟ : ಇಲ್ಲಿನ ಕೋಟದ ಶ್ರೀ ಅಮೃತೇಶ್ವರೀ ಹಲವು ಮಕ್ಕಳ ತಾಯಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವದ ಅಂಗವಾಗಿ ವಿವಿಧ ಧಾರ್ಮಿಕ ವಿಧಿವಿಧಾನಗಳು,ಸಾಂಸ್ಕೃತಿಕ ಕಾರ್ಯಕಮಗಳು ಇದೇ ಆ.3 ರ ಗುರುವಾರದಿಂದ ಆರಂಭಿಸಿ ಅ.12ರ ಶನಿವಾರ ವಿಜಯದಶಮಿಯ ಪರ್ಯಂತ ನಡೆಯಲಿದೆ.ಈ ದಿಸೆಯಲ್ಲಿ ಪ್ರತಿದಿನ ಚಂಡಿಕಾ ಸಪ್ತಶತಿ ಪಾರಾಯಣ, ದುರ್ಗಾಹೋಮವು ಸಕಲ ವೈದಿಕ ಕಾರ್ಯಕ್ರಮ ನುಡುವೆ ಅನ್ನದಾನ ಸೇವೆ ನಡೆಯಲಿದೆ.

ಶ್ರೀ ಕ್ಷೇತ್ರದಲ್ಲಿ ಭಕ್ತಾಧಿಗಳಿಂದ ಸೇವೆ ಪ್ರತಿದಿನ ಶ್ರೀ ದೇಗುಲದಲ್ಲಿ ದುರ್ಗಾ ಹೋಮ ಭಾಗವಾಗಿ ಅ.3 ಗುರುವಾರದಂದು ಸಂಸದ ಶ್ರೀ ಕೋಟ ಶ್ರೀನಿವಾಸ ಪೂಜಾರಿ ಮತ್ತು ಕುಟುಂಬಿಕರು,4ರ ಶುಕ್ರವಾರ ವಾಸು ಕರ್ಕೇರ ಮತ್ತು ಮಕ್ಕಳು ಹಾಗೂ ಕುಟುಂಬದವರು ಮೂಕಾಂಬಿಕಾ ಕೋಡಿ ಹೊಸಬೆಂಗ್ರೆ, 5.ರ ಶನಿವಾರ ಪ್ರತಿಮಾ ಮತ್ತು ಜಿ. ಮಹೇಶ್ ಕುಮಾರ್ ಶೆಟ್ಟಿ ಹಾಗೂ ಕುಟುಂಬದವರು ಗಿಳಿಯಾರು,6 ರ ಭಾನುವಾರ ಲಕ್ಷ್ಮೀ ಮತ್ತು ಶ್ರೀ ನರಸಿಂಹ ಪೂಜಾರಿ ಮತ್ತು ಕುಟುಂಬದವರು ಹಾಡಿಕೆರೆ 7 ರ ಸೋಮವಾರ ಕುಸುಮ ಮತ್ತು ನಾಗರಾಜ ದೇವಾಡಿಗ ಮತ್ತು ಕುಟುಂಬಿಕರು ಹಂಗಳೂರು ಕುಂದಾಪುರ,8.ರ ಮಂಗಳವಾರ ಅಕ್ಷತಾ ಮತ್ತು ಅಶೋಕ್ ಶೆಟ್ಟಿ ಮತ್ತು ಕುಟುಂಬದವರು, ಮೂಡುಗಿಳಿಯಾರು,9.ರ ಬುಧವಾರ ಸಪ್ನಾ ಪ್ರಭು.

ಕೋಟ ಸುರೇಶ ಪ್ರಭು ಹಾಗೂ ಕುಟುಂಬದವರು, ಉಡುಪಿ.10 ಗುರುವಾರ ವೈಷ್ಣವಿ ಮತ್ತು ವೆಂಕಟೇಶ ದೇವರಾಯ ಹೆಗ್ಡೆ ಮತ್ತು ಕುಟುಂಬದವರು, ಕೋಟ,11.ರ ಶುಕ್ರವಾರ,ಮುನಿಯಾಲು ಉದಯ ಕುಮಾರ್ ಶೆಟ್ಟಿ ಮತ್ತು ಕುಟುಂಬದವರು, ಲೋಹಿತ್ ಕುಮಾರ್ ಮತ್ತು ಕುಟುಂಬದವರು, ಕರಾವಳಿ ಓಶಿಯನ್ ಪ್ರಾಡಕ್ಟ್ ಕೋಟ ಪಡುಕರೆ,12.ರ ಶನಿವಾರ ವಿಜಯ ದಶಮಿ ದುರ್ಗಾಹೋಮ ಮತ್ತು ಮಹಾ ಅನ್ನಸಂತರ್ಪಣೆ ಗೀತಾ ಮತ್ತು ಆನಂದ ಸಿ. ಕುಂದರ್ ಮತ್ತು ಮಕ್ಕಳು, ಉದ್ಯಮಿಗಳು, ಜನತಾ ಫಿಶ್ ಮೀಲ್ ಅಂಡ್ ಆಯಿಲ್ ಪ್ರಾಡೆಕ್ಟ್, ಕೋಟ ಇವರುಗಳುಸೇವಾಕರ್ತರಾಗಿ ಭಾಗಿಯಾಗಲಿದ್ದಾರೆ ಎಂದು ದೇಗುಲದ ವ್ಯವಸ್ಥಾಪಕ ಗಣೇಶ್ ಹೊಳ್ಳ ತಿಳಿಸಿದ್ದಾರೆ.

Categories
ಕರಾವಳಿ ಸುದ್ದಿ

ಚುಟುಕು ಬರಹಗಾರರ ಸಮ್ಮೇಳನ

ಉಡುಪಿ : ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ವತಿಯಿಂದ ನಡೆದ ಕರಾವಳಿಯ ಸಾಹಿತಿಗಳ ಕಲಾವಿದರ ಕವಿಗಳ ಚುಟುಕು ಬರಹಗಾರರ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಡಾ ಬಿ ವಿ ಆರತಿ, ಪ್ರಖ್ಯಾತ ವಾಗ್ಮಿಗಳು. ಪ್ರಕಾಶ್ ಮಲ್ಪೆ, ಸಂಸ್ಥಾಪಕರು, ಸಂವೇದನಾ ಫೌಂಡೇಶನ್ (ರಿ) ಉಡುಪಿ.ಸೇತುರಾಮ್, ರಂಗಭೂಮಿ ಕಲಾವಿದರು, ಚಿಂತಕರು, ನಿರ್ದೇಶಕರು.
ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ಚಿಕ್ಕಮಗಳೂರು, ಲೋಕಸಭಾ ಸದಸ್ಯರು.ವಿಜಯ ಕುಮಾರ್ ಕೊಡವೂರು, ಒಬಿಸಿ ಮೋರ್ಚಾ ಜಿಲ್ಲಾ ಅಧ್ಯಕ್ಷರು.ದಿನೇಶ್ ಅಮೀನ್, ನಗರ ಬಿಜೆಪಿ ಅದ್ಯಕ್ಷರು ಸಹಿತ ಇತರ ಪ್ರಮುಖರು ಉಪಸ್ಥಿತರಿದ್ದರು.

Categories
ಕರಾವಳಿ ಸುದ್ದಿ

‘ಬೃಹತ್ ಜನಜಾಗೃತಿ ಸಮಾವೇಶ’

ಉಡುಪಿ  : ಗಾಂಧಿ ಜಯಂತಿ ಪ್ರಯುಕ್ತ ಅಕ್ಟೋಬರ್ 2 ರಂದು ಬೆಳಿಗ್ಗೆ ಗಂಟೆ 9.00ಕ್ಕೆ ಉಡುಪಿಯ ಜೋಡುಕಟ್ಟೆಯಿಂದ ರಾಜಾಂಗಣದವರೆಗೆ ‘ಬೃಹತ್ ಜನಜಾಗೃತಿ ಜಾಥಾ’ ಹಾಗೂ 11.00 ಗಂಟೆಗೆ ಉಡುಪಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ‘ಬೃಹತ್ ಜನಜಾಗೃತಿ ಸಮಾವೇಶ’ ನಡೆಯಲಿದೆ ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷ ನವೀನ್ ಚಂದ್ರ ಶೆಟ್ಟಿ ಹೇಳಿದರು.

ಅವರು ಉಡುಪಿ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ,ದುಶ್ಚಟಮುಕ್ತ ಸಮಾಜ ನಿರ್ಮಾಣಕ್ಕಾಗಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯಿಂದ ನಡೆಯುತ್ತಿರುವ ಸಮಾಜಮುಖಿ ಸೇವಾ ಚಟುವಟಿಕೆಗಳು ಹಾಗೂ ಗಾಂಧಿ ಜಯಂತಿ ಕಾರ್ಯಕ್ರಮದ ಕುರಿತು ವಿಸ್ತೃತ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ. ಸಿ. ಟ್ರಸ್ಟ್(ರಿ.) ಇದರ ಕರಾವಳಿ ಪ್ರಾದೇಶಿಕ ನಿರ್ದೇಶಕ ದುಗ್ಗೇ ಗೌಡ, ಉಡುಪಿ ಜಿಲ್ಲಾ ಜನಜಾಗೃತಿ ವೇದಿಕೆಯ ನಿಕಟಪೂರ್ವ ಜಿಲ್ಲಾಧ್ಯಕ್ಷ ನವೀನ್ ಅಮೀನ್, ಯೋಜನೆಯ ಜಿಲ್ಲಾ ನಿರ್ದೇಶಕ ನಾಗರಾಜ್ ಶೆಟ್ಟಿ, ಉಡುಪಿ ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ ಸತ್ಯಾನಂದ ನಾಯಕ್ ಆತ್ರಾಡಿ, ಉಪಾಧ್ಯಕ್ಷ ಶಿವಕುಮಾರ್ ಅಂಬಲಪಾಡಿ, ಯೋಜನೆಯ ತಾಲೂಕು ಯೋಜನಾಧಿಕಾರಿ ರಾಮ ಎಮ್., ಪ್ರಾದೇಶಿಕ ವಿಭಾಗದ ಜನಜಾಗೃತಿ ಯೋಜನಾಧಿಕಾರಿ ಗಣೇಶ್ ಆಚಾರ್ಯ ಉಪಸ್ಥಿತರಿದ್ದರು.

Categories
ಕರಾವಳಿ ಸುದ್ದಿ

ಉಡುಪಿ ಜಿಲ್ಲಾ ಗ್ರಾಮ ಆಡಳಿತ ಅಧಿಕಾರಿಗಳ ಧರಣಿಗೆ ಸಂಸದ ಕೋಟ ಭೇಟಿ

ಉಡುಪಿ : ಉಡುಪಿ ಜಿಲ್ಲೆಯ ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿಗಳು ತಮ್ಮ ಹಲವು ಬೇಡಿಕೆಗಳನ್ನು ಮುಂದಿರಿಸಿ ಉಡುಪಿ ಜಿಲ್ಲಾಧಿಕಾರಿ ಕಚೇರಿಯ ಧರಣಿ ನಡೆಸುತ್ತಿರುವ ಸ್ಥಳಕ್ಕೆ ಉಡುಪಿ ಚಿಕ್ಕಮಗಳೂರು ಲೋಕಸಭಾ ಸಂಸದ ಕೋಟ ಶ್ರೀನಿವಾಸ ಪೂಜಾರಿ ಭಾಗವಹಿಸಿ ಧರಣಿ ನಿರತರ ಮನವಿ ಸ್ವೀಕರಿಸಿದರು.ಸಮಸ್ಯೆಗಳನ್ನು ಹೇಳಿಕೊಂಡ ಗ್ರಾಮ ಆಡಳಿತ ಅಧಿಕಾರಿಗಳು.

1. 15ಕ್ಕೂ ಹೆಚ್ಚು APP ಗಳ ಮೂಲಕ ಇಲಾಖೆಯ ಕಾರ್ಯಕ್ರಮಗಳು ನಡೆಯುತ್ತಿದ್ದು ನಮಗೆ ಇಲ್ಲಿಯವರೆಗೆ ಯಾವುದೇ ಮೊಬೈಲ್ ಫೋನ್ ಗಳ ಸರಬರಾಜು ಮಾಡಿಲ್ಲ ಎಂದು ದೂರಿದರು.
2. ತಮ್ಮಿಂದ ಇಲಾಖೆಯು ರಜಾ ದಿನಗಳಲ್ಲಿಯೂ ಕೆಲಸ ಮಾಡಿಸಿಕೊಳ್ಳುತ್ತಿದ್ದು ಹೆಚ್ಚುವರಿ ಸೌಲಭ್ಯ ನೀಡುತ್ತಿಲ್ಲ ಅಂತರ್ ಜಿಲ್ಲಾ ವರ್ಗಾವಣೆ ನಿಲುಗಡೆ ಮಾಡಿದ್ದು ನಾವು ಕೆಲವರಂತೂ 15-20 ವರ್ಷಗಳಿಂದ ತವರು ಜಿಲ್ಲೆಗೆ ಹೋಗಲು ಸಾಧ್ಯವಾಗುತ್ತಿಲ್ಲ.ಈ ಹಿನ್ನೆಲೆಯಲ್ಲಿ ಸರ್ಕಾರ ನಮ್ಮ ಸಮಸ್ಯೆಗಳಿಗೆ ಪರಿಹಾರ ನೀಡಲು ತಾವು ಸರ್ಕಾರದ ಮೇಲೆ ಒತ್ತಡ ತರಬೇಕೆಂದು ವಿನಂತಿಸಿದರು.ಮನವಿ ಸ್ವೀಕರಿಸಿದ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಸಂಬಂಧಪಟ್ಟ ಕಂದಾಯ ಸಚಿವರ ಜೊತೆ ಗ್ರಾಮ ಆಡಳಿತ ಅಧಿಕಾರಿಗಳ ಕೋರಿಕೆ ಸಲ್ಲಿಸುತ್ತೇನೆಂದು ಎಂದು ಹೇಳಿದರು.

Categories
ಕರಾವಳಿ ಸುದ್ದಿ

ನಾಳೆ ಯಕ್ಷಾಮೃತ ಕಾರ್ಯಕ್ರಮ

ಮುದ್ರಾಡಿ : ನಮ ತುಳುವೇರ್ ಕಲಾ ಸಂಘಟನೆ (ರಿ) ನಾಟ್ಕದೂರು ಮುದ್ರಾಡಿ ಇವರ ಆಶ್ರಯದಲ್ಲಿ ಸುವರ್ಣ ಕರ್ನಾಟಕ ರಂಗೋತ್ಸವ ಪ್ರಯುಕ್ತ ನಾಳೆ ಯಕ್ಷಾಮೃತ ಎಂಬ ವಿನೂತನ ಕಾರ್ಯಕ್ರಮ ಜರುಗಲಿದೆ

ಮುದ್ರಾಡಿಯ ಬಿ ವಿ ಕಾರಂತ ಬಯಲು ರಂಗ ಮಂದಿರದಲ್ಲಿ ನಾಳೆ ಸಂಜೆ 7:00 ಗಂಟೆಗೆ  ಯಕ್ಷ ಅಭಿನೇತ್ರಿ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ಭಾಗೀರಥಿ ಎಂ.ರಾವ್ ರವರಿಂದ ಭಾಮೆಯೋಳಗಿನ  ಸಮಗ್ರ ಕಂಸ ಎಂಬ ಪರಿಕಲ್ಪಿತ ಯಕ್ಷಾಮೃತ ಕಾರ್ಯಕ್ರಮವು ನಾಳೆ ಮಂಗಳವಾರ ಸಂಜೆ 7:00ಗೆ ಮುದ್ರಾಡಿಯ ಬಿ ವಿ ಕಾರಂತ ಬಯಲು ರಂಗ ಮಂದಿರದಲ್ಲಿ ಜರುಗಲಿದೆ

ಏಕ ಪಾತ್ರಾಭಿನಯನದ ವಿನೂತನ ಯಕ್ಷಗಾನವನ್ನು ಕೆ ಜೆ ಗಣೇಶ್‌ ನಿರ್ಧೇಶಿಸಿದ್ದು  ಹಿಮ್ಮೇಳದಲ್ಲಿ ಭಾಗವತರಾಗಿ ಕೆ ಜೆ ಗಣೇಶ್, ಮದ್ದಳೆ ಕೆ ಜೆ ಸುಧೀಂದ್ರ ಕಿದಿಯೂರು ಚಂಡೆ ಕೆ ಜೆ ಕೃಷ್ಣ ಕಿದಿಯೂರು ಭಾಗವಹಿಸಲಿದ್ದು ನಿರೂಪಣೆಯನ್ನು ದೀಪ್ತ ಕಿದಿಯೂರು ನಿರ್ವಹಿಸಲಿದ್ದಾರೆ

Categories
ಅಪರಾಧ

ಬೈಕ್‌ ಬುಲೆಟ್‌ ಢಿಕ್ಕಿ : ಮತ್ತೋರ್ವ ನಿಧನ

ಕುಂದಾಪುರ : ಕುಂದಾಪುರ ನಗರ ಸಮೀಪದ ಹಂಗಳೂರಿನ ನಗು ಪ್ಯಾಲೇಸ್‌ ಎದುರುಗಡೆಯ ಸರ್ವೀಸ್‌ ರಸ್ತೆಯಲ್ಲಿ ಬೈಕ್‌ ಮತ್ತು ಬುಲೆಟ್‌ ಮುಖಾಮುಖಿ ಢಿಕ್ಕಿಯಾಗಿ ಬೈಕ್‌ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು ಇದೀಗ ಬುಲೆಟ್‌ ಸವಾರ ಕೂಡ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ

ಶನಿವಾರ ರಾತ್ರಿ 11.00 ಗಂಟೆಯ ಸುಮಾರಿಗೆ ವಿಸ್ಮಯ ಹಾಗೂ ವಿಚಿತ್ರವಾಗಿ ಬೈಕ್‌ ಮತ್ತು ಬುಲೆಟ್‌ ಮುಖಾಮುಖಿಯಾಗಿ ಢಿಕ್ಕಿಯಾಗಿದ್ದು ಅಪಘಾತದಲ್ಲಿ  ಕುಂದಾಪುರ ನಗರದ ಬರೆಕಟ್ಟುವಿನ ಬಾಳೆಹಿತ್ಲು ನಿವಾಸಿಯಾದ ಪೈಂಟರ್‌ ವೆಂಕಟೇಶ್‌ ಇವರ ಪುತ್ರ ಶಶಾಂಕ್‌ ಮೊಗವೀರ ಎಂಬ 22ವರ್ಷದ ಯುವಕ ಸ್ಥಳದಲ್ಲೇ ಮೃತಪಟ್ಟರೇ ನಿನ್ನೆ ರಾತ್ರಿ ಬುಲೆಟ್‌ ಸವಾರನಾದ ಪುನೀತ್‌ ಚಿಕಿತ್ಸೆ ಫಲಕಾರಿಯಾಗದೇ ಮಣಿಪಾಲದ ಕೆ ಎಂ ಸಿ ಯಲ್ಲಿ ನಿಧನ ಹೊಂದಿದ್ದಾರೆ

ಹಾಸನ ಮೂಲದ ಪುನೀತ್‌ ಎಂಬವರು ಅವಿವಾಹಿತರಾಗಿದ್ದು ಕಂಡ್ಲೂರಿನಲ್ಲಿ ಅಯಂಗಾರ್ಸ್‌ ಬೇಕರಿ ನಡೆಸುತ್ತಿದ್ದು ಕಳೆದ 12 ವರ್ಷಗಳಿಂದ ಕಂಡ್ಲೂರಿನಲ್ಲಿ ತನ್ನ ತಾಯಿಯೊಂದಿಗೆ ವಾಸಿಸುತ್ತಿದ್ದರು

ಅಪಘಾತದಲ್ಲಿ ಪುನೀತ್‌ ಇವರ ತಾಯಿ ಗಂಭೀರವಾಗಿ ಗಾಯಗೊಂಡಿದ್ದು ಮಣಿಪಾಲದ ಕೆಎಂಸಿಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ

ಹಂಗಳೂರು ಸಮೀಪದ ಆಸುಪಾಸಿನಲ್ಲಿ ಹಲವು ಅಪಘಾತಗಳು ನಡೆಯತ್ತಿದ್ದು ಇದೊಂದು ಎಕ್ಸಿಡೆಂಟ್‌ ಝೋನ್‌ ಆಗಿ ಪರಿಣಮಿಸಿದ್ದು ಇದರ ಬಗ್ಗೆ ಕುಂದಾಪುರ ಸಂಚಾರಿ ಠಾಣಾ ಪೊಲೀಸರು ಅಗತ್ಯ ಕ್ರಮವನ್ನು ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ

ಕೆ ಗಣೇಶ್‌ ಹೆಗ್ಡೆ ಕುಂದಾಪುರ

Categories
ಕರಾವಳಿ ಸುದ್ದಿ

ಚಿತ್ತೂರು ಶಾಲಾ ಶಿಕ್ಷಕ ಗುರುಪ್ರಸಾದ್ ಗೆ ” ಗುರುಶ್ರೀ ” ಪ್ರಶಸ್ತಿ

ವಂಡ್ಸೆ : ವಿವೇಕ ಚಾರಿಟೇಬಲ್ ಟ್ರಸ್ಟ್ (ರಿ), ರಾಜ್ಯ ಸಿರಿ ಕನ್ನಡ ನುಡಿ ಬಳಗ, ಲಯನ್ಸ್ ಕ್ಲಬ್ ಬೆಂಗಳೂರು ಇವರ ಸಹಯೋಗದಲ್ಲಿ ನಡೆದ ಶಿಕ್ಷಕ ದಿನಾಚರಣೆಯ ಅಂಗವಾಗಿ ಚಿತ್ತೂರು ಶಾಲಾ ಶಿಕ್ಷಕರಾದ ಶ್ರೀ ಗುರುಪ್ರಸಾದ್ ಇವರಿಗೆ ರಾಜ್ಯ ಮಟ್ಟದ ಗುರುಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಶ್ರೀಯುತರು ಕಳೆದ 17 ವರ್ಷಗಳಿಂದ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದು ತಮ್ಮ ವಿಶಿಷ್ಟ ಪ್ರತಿಭೆಯ ಮೂಲಕ, ತಮ್ಮ ಪ್ರಾಮಾಣಿಕ ಕೆಲಸಗಳ ಮೂಲಕ ವಿದ್ಯಾರ್ಥಿಗಳ ಪ್ರೀತಿಗೆ ಪಾತ್ರರಾಗಿರುತ್ತಾರೆ.ಶಿಕ್ಷಣ ಕ್ಷೇತ್ರಕ್ಕೆ ತನ್ನದೆ ಆದ ಕೊಡುಗೆಯನ್ನು ನೀಡುತ್ತಾ ಬಂದಿರುತ್ತಾರೆ ಹಾಗೂ ಹಲವಾರು ಸಂಘ ಸಂಸ್ಥೆಗಳಲ್ಲಿ ಜವಬ್ದಾರಿಯುತ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸಿ ಸಮಾಜಕ್ಕೆ ತಮ್ಮದೆ ಆದ ಕೊಡುಗೆಯನ್ನು ನೀಡಿರುತ್ತಾರೆ.

ವಾದ್ಯ ಸಂಗೀತದಲ್ಲಿ ಒಂದು ಬಾರಿ ರಾಷ್ಟ್ರ ಮಟ್ಟಕ್ಕೆ ಮೂರು ಬಾರಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.ತ್ರಿಪುರದ ಅಗರ್ತಲದಲ್ಲಿ ನಡೆದ ರಾಷ್ಟ್ರ ಮಟ್ಟದ ನಾಟಕ ಸ್ಪರ್ಧೆಯಲ್ಲಿ ಭಾಗವಹಿಸಿ ತೃತೀಯ ಸ್ಥಾನ ಪಡೆದ ಉಡುಪಿ ಶಿಕ್ಷಕರ ತಂಡದ ಸದಸ್ಯರಾಗಿರುತ್ತಾರೆ.ಪ್ರಸ್ತುತ ವರ್ಷ ವೈಯಕ್ತಿಕ ವಿಭಾಗದ ಶಟಲ್ ಬ್ಯಾಡ್ಮಿಂಟನ್ ನಲ್ಲಿ ಹಾಗೂ ಗುಂಪು ವಿಭಾಗದ ಜನಪದ ನೃತ್ಯ ಮತ್ತು ನಾಟಕ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ.ಸಾಂಸ್ಕೃತಿಕ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಪ್ರತಿಭಾವಂತರಾದ ಶ್ರೀಯುತರು ತನ್ನ ವಿದ್ಯಾರ್ಥಿಗಳನ್ನು ಬೆಳೆಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ.ಇವರ ಮುಂದಿನ ವೃತ್ತಿ ಜೀವನವು ಯಶಸ್ವಿಯಾಗಲಿ ಎಂದು ಪತ್ರಿಕೆ ಹಾರೈಸುತ್ತದೆ.

Categories
ಕ್ರೀಡೆ

ಜಿಲ್ಲಾ ಮಟ್ಟದ ಪದವಿಪೂರ್ವ ವಿಭಾಗದ ಕುಸ್ತಿ ಪಂದ್ಯಾಟ

ಹೆಮ್ಮಾಡಿ : ಪದವಿಪೂರ್ವ ಶಿಕ್ಷಣ ಇಲಾಖೆ ಉಡುಪಿ ಹಾಗೂ ಜನತಾ ಪದವಿಪೂರ್ವ ಕಾಲೇಜು ಹೆಮ್ಮಾಡಿ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಪದವಿಪೂರ್ವ ಬಾಲಕ-ಬಾಲಕಿಯರ ಕುಸ್ತಿ ಪಂದ್ಯಾಟ ಜನತಾ ಕ್ರೀಡಾಂಗಣ ಹೆಮ್ಮಾಡಿಯಲಿ ಅದ್ದೂರಿಯಾಗಿ ನಡೆಯಿತು.ಅಂತಾರಾಷ್ಟ್ರೀಯ ಕಿವುಡರ ಟಿ-20 ಚಾಂಪಿಯನ್ ಶಿಪ್ ಪ್ರಶಸ್ತಿ ಪಡೆದ ಭಾರತ ತಂಡದ ಆಟಗಾರ ಪ್ರಥ್ವಿರಾಜ್ ಶೆಟ್ಟಿ ಹುಂಚನಿ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಜನತಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಗಣೇಶ ಮೊಗವೀರರವರು ಮಾತನಾಡಿ ಕ್ರೀಡಾ ಪ್ರತಿಭೆಗಳ ವಿಕಾಸಕ್ಕೆ ಅದ್ಭುತ ವೇದಿಕೆಗಳನ್ನು ಒದಗಿಸಿಕೊಡುತ್ತಿದ್ದೇವೆ ಆ ಮುಖೇನ ಕ್ರೀಡಾ ರಂಗದಲ್ಲಿ ಕಾಲೇಜು ರಾಜ್ಯ,ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ.ಪ್ರತಿಭೆ ತುಂಬಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವುದೇ ನಮ್ಮ ಉದ್ದೇಶ ಸೋಲೇ ಗೆಲುವಿನ ಸೋಪಾನ ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಎಸ್.ವಿ.ಗಂಗೊಳ್ಳಿ ಕಾಲೇಜಿನ ನಿವೃತ್ತ ದೈಹಿಕ ಶಿಕ್ಷಣ ಉಪನ್ಯಾಸಕರಾದ ಶ್ರೀ ನಾಗರಾಜ ಶೆಟ್ಟಿಯವರು ಮಾತನಾಡಿ.ಕ್ರೀಡಾ ರಂಗಕ್ಕೆ ಜನತಾ ಪದವಿಪೂರ್ವ ಕಾಲೇಜಿನ ಕೊಡುಗೆ ಅಭೂತಪೂರ್ವವಾದದ್ದು,ಕ್ರೀಡಾ ಪ್ರತಿಭೆಗಳು ಅರಳಲು ಪ್ರೋತ್ಸಾಹವೇ ಸ್ಪೂರ್ತಿ ಆ ಕಾರ್ಯವನ್ನು ಜನತಾ ಪದವಿಪೂರ್ವ ಕಾಲೇಜು ಪ್ರಾಮಾಣಿಕವಾಗಿ ಮಾಡುತ್ತಿರುವುದು ನಮಗೆಲ್ಲರಿಗೂ ಸಂತಸ ತಂದಿದೆ ಎಂದು ಶುಭ ಹಾರೈಸಿದರು.

ಸಮಾರಂಭದಲ್ಲಿ ಉಡುಪಿ ಜಿಲ್ಲಾ ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ಅಧ್ಯಕ್ಷರಾದ ಶ್ರೀ ಜೀವನ್ ಕುಮಾರ್ ಶೆಟ್ಟಿಯವರು ಮಾತನಾಡಿ ಪದವಿಪೂರ್ವ ಶಿಕ್ಷಣ ಇಲಾಖೆಯ ವಿವಿಧ ಸ್ಪರ್ಧೆಗಳನ್ನು ಬಹಳಷ್ಟು ಅದ್ಭುತ ರೀತಿಯಲ್ಲಿ ಆಯೋಜನೆ ಮಾಡುತ್ತಿರುವ ಜನತಾ ಪದವಿಪೂರ್ವ ಕಾಲೇಜಿನ ತಂಡಕ್ಕೆ ಶ್ಲಾಘನೆಯನ್ನು ವ್ಯಕ್ತಪಡಿಸಿದರು.ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ಕಾರ್ಯದರ್ಶಿ ಶ್ರೀ ಸುಕೇಶ ಶೆಟ್ಟಿ ಯವರು ಮಾತನಾಡಿ ಕುಸ್ತಿ ಇದೊಂದು ಪ್ರಾಚೀನ ಕ್ರೀಡೆ ಶಕ್ತಿ ಮತ್ತು ಯುಕ್ತಿಯೇ ಕುಸ್ತಿ ಎನ್ನುವುದರ ಮೂಲಕ ಶುಭ ಹಾರೈಸಿದರು.

ಸಮಾರಂಭದಲ್ಲಿ ತಾಲೂಕು ಸಂಯೋಜಕರಾದ ಶ್ರೀ ರಾಮ ಶೆಟ್ಟಿ, ಕುಂದಾಪುರ ಸಿಟಿ ಜೆಸಿಐ ಅಧ್ಯಕ್ಷರಾದ ಶ್ರೀ ರಾಘವೇಂದ್ರ ಕುಲಾಲ್,ಜನತಾ ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಶ್ರೀ ಮಂಜು ಕಾಳಾವರ,ಜನತಾ ಪದವಿಪೂರ್ವ ಕಾಲೇಜಿನ ಉಪ-ಪ್ರಾಂಶುಪಾಲರಾದ ಶ್ರೀ ರಮೇಶ ಪೂಜಾರಿ,ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ಮುಖ್ಯ ಶಿಕ್ಷಕಿ ಕು|ದೀಪಿಕಾ ಆಚಾರ್ಯ ಉಪಸ್ಥಿತರಿದ್ದರು.ವಿದ್ಯಾರ್ಥಿಗಳು,ದೈಹಿಕ ಶಿಕ್ಷಣ ಉಪನ್ಯಾಸಕರು, ವಿದ್ಯಾರ್ಥಿ ಪೋಷಕರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.ಕಾಲೇಜಿನ ಹಿಂದಿ ಉಪನ್ಯಾಸಕ ಶ್ರೀ ಉಮೇಶ ನಾಯ್ಕ ಸ್ವಾಗತಿಸಿ ,ಉಪನ್ಯಾಸಕಿ ಶ್ರೀಮತಿ ಪ್ರಿಯಾಂಕ ಕಾರ್ಯಕ್ರಮ ನಿರೂಪಿಸಿ.ಉಪನ್ಯಾಸಕ ಅಭಿಜಿತ್ ವಂದಿಸಿದರು.