Categories
ಅಪರಾಧ

ರಾಜ್ಯದ ಅತಿದೊಡ್ಡ ಚಿನ್ನ ದರೋಡೆ ಕೇಸ್ ಭೇದಿಸಿದ ಪೊಲೀಸ್

ದಾವಣಗೆರೆ : ಜಿಲ್ಲೆಯ ನ್ಯಾಮತಿ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ ಬಿಐ)ನಲ್ಲಿ ನಡೆದಿದ್ದ ರಾಜ್ಯದ ಅತೀ ದೊಡ್ಡ ಚಿನ್ನ ಕಳ್ಳತನ ಪ್ರಕರಣ ಭೇದಿಸಿರುವ ದಾವಣಗೆರೆ ಪೊಲೀಸರು, ಬಾವಿಯೊಂದರಲ್ಲಿ ಅಡಗಿಸಿಟ್ಟಿದ್ದ ಸುಮಾರು 15.30 ಕೋಟಿ ಮೌಲ್ಯದ 17.01 ಕೆಜಿ ಚಿನ್ನಾಭರಣ ಜಪ್ತಿ ಮಾಡಿದ್ದಾರೆ. ಕಳೆದ ಐದು ತಿಂಗಳ ಹಿಂದೆ ನಡೆದಿದ್ದ ಈ ಪ್ರಕರಣ ಸಂಬಂಧ ತಮಿಳುನಾಡು ಮೂಲದ ಮೂವರು ಸೇರಿ 6 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡಿನ ಮದುರೈ ಮೂಲದ, ಹಾಲಿ ನ್ಯಾಮತಿಯಲ್ಲಿ ವಿಐಪಿ ಸ್ಟ್ಯಾಕ್ಸ್  ಅಂಡ್ ಸ್ವೀಟ್ ಬೇಕರಿ ನಡೆಸುತ್ತಿದ್ದ ವಿಜಯಕುಮಾರ (30), ಆತನ ಸಹೋದರ ಅಜಯಕುಮಾರ (28), ಸಂಬಂಧಿ ಪರಮಾನಂದ (30), ನ್ಯಾಮತಿ ಶಾಂತಿನಗರ ಶಾಲೆ ಎದುರಿನ ಬೆಳಗುತ್ತಿ ಕ್ರಾಸ್ ನಿವಾಸಿ, ಪೈಟಿಂಗ್ ಕೆಲಸಗಾರ ಅಭಿಷೇಕ್ (23), ಸುರಹೊನ್ನೆ ಶಾಂತಿ ನಗರದ ವಾಸಿ ತೆಂಗಿನಕಾಯಿ ವ್ಯಾಪಾರಿ ಚಂದ್ರು (23) ಹಾಗೂ ಚಾಲಕ ಮಂಜುನಾಥ (30) ಬಂಧಿತ ಆರೋಪಿಗಳು.

ದಾವಣಗೆರೆ ನಗರದ ಜಿಲ್ಲಾ ಎಸ್‌ಪಿ ಕಚೇರಿಯಲ್ಲಿ ಸೋಮವಾರ ಜಪ್ತಿ ಮಾಡಿದ ಚಿನ್ನಾಭರಣಗಳನ್ನು ಪ್ರದರ್ಶಿಸಿದ್ದು, ಇದೇ ವೇಳೆ ಸುದ್ದಿಗೋಷ್ಠಿಯಲ್ಲಿ ಪೂರ್ವ ವಲಯದ ಪೊಲೀಸ್ ಮಹಾ ನಿರೀಕ್ಷಕ ಡಾ. ಬಿ.ಆರ್. ರವಿಕಾಂತೇಗೌಡ ಅವರು ಕಳ್ಳತನ ಮತ್ತು ಚಿನ್ನ ಅಡಗಿಸಿಟ್ಟ ಕುತೂಹಲಕಾರಿ ಸಂಗತಿಗಳನ್ನು ಎಳೆಎಳೆಯಾಗಿ ವಿವರಿಸಿದರು.

ಪ್ರಕರಣದ ಹಿನ್ನೆಲೆ:

ಕಳೆದ ವರ್ಷ ಅ.28ರಂದು ನ್ಯಾಮತಿ ಎಸ್‌ಬಿಐ ಶಾಖೆಯಲ್ಲಿ ಗ್ರಾಹಕರು ಅಡವಿಟ್ಟಿದ್ದ 17.7 ಕೆಜಿ ಚಿನ್ನಾಭರಣ ದರೋಡೆಯಾಗಿತ್ತು. ಐಜಿಪಿ, ಎಸ್‌ಪಿ, ಎಎಸ್‌ಪಿ, ಡಿವೈಎಸ್‌ಪಿ ಸೇರಿ ಅಧಿಕಾರಿಗಳು, ಎಫ್‌ಎಸ್ ಎಲ್ ವಾಹನ, ಸೋಕೋ ಅಧಿಕಾರಿ, ಶ್ವಾನದಳ, ಬೆರಳಚ್ಚು ತಜ್ಞರು ಬ್ಯಾಂಕ್‌ಗೆ ಭೇಟಿ ನೀಡಿ, ಇಂಚಿಂಚು ಜಾಗವನ್ನೂ ಪರಿಶೀಲಿಸಿದ್ದರು. ಆದರೆ, ದರೋಡೆಕೋರರ ಬಗ್ಗೆ ಕಿಂಚಿತ್ತೂ ಸುಳಿವು ಮಾತ್ರ ಸಿಕ್ಕಿರಲಿಲ್ಲ.

ಬ್ಯಾಂಕ್ ಒಳಗೇನಾಗಿತ್ತು ? 

ಬ್ಯಾಂಕ್ ಬಲಭಾಗದ ಕಬ್ಬಿಣದ ಕಿಟಕಿ ಗ್ರಿಲ್ ತುಂಡರಿಸಿ ಒಳನುಸುಳಿದ್ದ ದರೋಡೆಕೋರರು, ಸಿಸಿ ಟಿವಿ, ಅಲರಾಂ, ಎಲ್ಲ ವೈರ್‌ಗಳ ಸಂಪರ್ಕ ತೆಗೆದು ಹಾಕಿ ಸ್ಟ್ರಾಂಗ್ ರೂಂ ಪ್ರವೇಶಿಸಿದ್ದರು. ಸ್ಟ್ರಾಂಗ್ ರೂಂಗೆ ಇದ್ದ ಗ್ರಿಲ್ ಡೋರ್ ಬೀಗ ಮುರಿದು ಹಾಕಿದ್ದರು.

ಏನಿದು ಕೇಸ್ ?

ದಾವಣಗೆರೆ ಜಿಲ್ಲೆ ನ್ಯಾಮತಿಯ ಎಸ್‌ಬಿಐ ಶಾಖೆಯಲ್ಲಿ ಗ್ರಾಹಕರು ಗಿರವಿ ಇಟ್ಟಿದ್ದ 17.7 ಕೇಜಿ ಚಿನ್ನಾಭರಣ 2024 ಅ.28ರಂದು ಲೂಟಿಯಾಗಿತ್ತು. ಜನವರಿಯಲ್ಲಿ ದಕ್ಷಿಣ ಕನ್ನಡದ ಸಹಕಾರಿ ಬ್ಯಾಂಕ್‌ ವೊಂದರಲ್ಲಿ ಲೂಟಿಯಾಗಿದ್ದ ಚಿನ್ನಕ್ಕಿಂತ ಇದರ ಮೌಲ್ಯ ಹೆಚ್ಚು

ಮಾಡಿದ್ದು ಯಾರು ?

ನ್ಯಾಮತಿಯಲ್ಲಿ ಬೇಕರಿ ನಡೆಸುತ್ತಿದ್ದ ವ್ಯಕ್ತಿಯೊಬ್ಬ ಎಸ್‌ ಬಿ ಐ ನಿಂದ 14 ಲಕ್ಷ ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದ ಅದು ತಿರಸ್ಕಾರವಾಗಿತ್ತು. ಬಳಿಕ ತನ್ನ ಬಂಧುಗಳ ಹೆಸರಿನಲ್ಲಿ ಸಾಲಕ್ಕೆ ಅರ್ಜಿ ಸಲ್ಲಿಸಿದರೂ ತಿರಸ್ಕರಿಸಲಾಗಿತ್ತು. ಈ ಸಿಟ್ಟಿನಿಂದ ತನ್ನ ತಂಡದ ಜತೆಗೂಡಿ ದರೋಡೆ ಮಾಡಿತ್ತು.

ಭೇದಿಸಿದ್ದು ಹೇಗೆ ?

ಒಂದು ಸುಳಿವನ್ನೂ ಬಿಟ್ಟುಕೊಡದ ರೀತಿ ಈ ದರೋಡೆ ಎಸಗಲಾಗಿತ್ತು. ಆರೋಪಿಗಳಿಗಾಗಿ ದಾವಣಗೆರೆ ಪೊಲೀಸರು ದೇಶದ ಉದ್ದಗಲಕ್ಕೂ ಅಲೆದಾಡಿದ್ದರು. ಆದರೆ ಆರೋಪಿಗಳು ಗ್ಯಾಸ್ ಕಟರ್ ಜತೆ ತಂದು, ಬಳಸಿದ ಬಳಿಕ ಕೆರೆಗೆ ಬಿಸಾಡಿದ್ದ ಸಿಲಿಂಡರ್‌ನಿಂದ ಸುಳಿವು ಸಿಕ್ಕಿತು. ಸಿಲಿಂಡ‌ರ್ ಅನ್ನು ಶಿವಮೊಗ್ಗದಲ್ಲಿ ಪಡೆದಿದ್ದ ಆರೋಪಿಗಳು ಆ ವೇಳೆ ಆಧಾರ್ ಕಾರ್ಡ್ ನೀಡಿದ್ದರು. ಯಾವ ಅಂಗಡಿಗೆ ಸಿಲಿಂಡರ್ ಬಾಕಿ ಬರಬೇಕಿದೆ ಎಂಬ ತನಿಖೆಗೆ ಇಳಿದಾಗ ಆರೋಪಿಗಳ ಸುಳಿವು ಸಿಕ್ಕಿದೆ.

Categories
ರಾಜ್ಯ ಸುದ್ದಿ

ಬಿಜೆಪಿಯಿಂದ ನಾಳೆ ಅಹೋರಾತ್ರಿ ಧರಣಿ

ಬೆಂಗಳೂರು : ವಿವಿಧ ಅಗತ್ಯ ಸೇವೆಗಳು, ಪದಾರ್ಥಗಳ ಬೆಲೆ ಏರಿಕೆ ಹಾಗೂ ತನ್ನ 18 ಶಾಸಕರನ್ನು ವಿಧಾನಸಭೆಯಿಂದ ಅಮಾನತು ಮಾಡಿದ ಸ್ಪೀಕರ್ ಕ್ರಮ ವಿರೋಧಿಸಿ ಪ್ರತಿಪಕ್ಷ ಬಿಜೆಪಿ ಬುಧವಾರದಿಂದ ರಾಜ್ಯ ಸರ್ಕಾರದ ವಿರುದ್ಧ ಸರಣಿ ಹೋರಾಟ ಆರಂಭಿಸಲಿದೆ.

ಇದರ ಅಂಗವಾಗಿ ಏ.2ರಂದು ಬುಧವಾರ ಬೆಂಗಳೂರಿನ ಫ್ರೀಡಂಪಾರ್ಕಲ್ಲಿ ಬೆಳಗ್ಗೆ 11.00 ಗಂಟೆಯಿಂದ ಅಹೋರಾತ್ರಿ ಧರಣಿ ಆರಂಭಿಸಲಿದೆ. ಏ.7 ರಿಂದ ರಾಜ್ಯಾದ್ಯಂತ ಜನಜಾಗೃತಿ. ಸಲುವಾಗಿ ಜನಾಕ್ರೋಶ ಯಾತ್ರೆ ಹಮ್ಮಿಕೊಳ್ಳಲೂ ಬಿಜೆಪಿ ತೀರ್ಮಾನಿಸಿದೆ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ  ತಿಳಿಸಿದರು.

Categories
ರಾಜ್ಯ ಸುದ್ದಿ

ನಾಳೆಯಿಂದ ಸಿಎಂ ದೆಹಲಿ ಪ್ರವಾಸ

ಬೆಂಗಳೂರು : ಮೊಣಕಾಲಿನ ಸಮಸ್ಯೆಯಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಳೆಯಿಂದ ನಾಲ್ಕು ದಿನಗಳ ಕಾಲ ಹೊಸದಿಲ್ಲಿ ಪ್ರವಾಸ ಕೈಗೊಳ್ಳಲಿದ್ದು, ತಮ್ಮ ಸಂಪುಟದ ಸಹೋದ್ಯೋಗಿಗಳ ಹಿತ ಕಾಪಾಡುವುದರ ಜೊತೆಗೆ ತಮ್ಮ ಮುಖ್ಯಮಂತ್ರಿ ಸ್ಥಾನವನ್ನು ಬಲಪಡಿಸಿಕೊಳ್ಳಲು ಅವರು ಹೈಕಮಾಂಡ್ ಭೇಟಿ ಮಾಡಲಿದ್ದಾರೆ

ಕಳೆದ ವಾರವಷ್ಟೆ ಸಿಎಂ ಆಪ್ತ ಮತ್ತು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಹೊಸದಿಲ್ಲಿಯಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ, ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬದಲಾವಣೆ ಸೇರಿದಂತೆ ಕೆಲವು ಪ್ರಸ್ತಾಪಗಳನ್ನು ಸಿದ್ದರಾಮಯ್ಯನವರು ಭೇಟಿ ಮಾಡಿದ ಸಂದರ್ಭದಲ್ಲಿ ಮುಂದಿಡಲು ವೇದಿಕೆ ಸಿದ್ಧಪಡಿಸಿದ್ದರು ಎಂದು ಮೂಲಗಳು ತಿಳಿಸಿದ್ದವು.

ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮುನ್ನ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಸ್ಥಾನಕ್ಕೆ ತಮ್ಮ ಕೆಪಿಸಿಸಿ ಅಧ್ಯಕ್ಷರನ್ನಾಗಿ ನೇಮಿಸಲು ಸತೀಶ್ ಜಾರಕಿಹೊಳಿ ಆಶಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ

Categories
ರಾಷ್ಟ್ರೀಯ ಸುದ್ದಿ

ಮ್ಯಾನ್ಮಾ‌ರ್ ಭೂಕಂಪ : ಸಾವಿನ ಸಂಖ್ಯೆ 2,000ಕ್ಕೆ ಏರಿಕೆ

ಹೊಸದಿಲ್ಲಿ : ಕಳೆದ ಶುಕ್ರವಾರ 7.7 ತೀವ್ರತೆಯ ಭೂಕಂಪದಿಂದ ಅಪಾರ ಹಾನಿಗೊಳಗಾದ ಮ್ಯಾನಾರ್‌ನಲ್ಲಿ ಸಾವಿನ ಸಂಖ್ಯೆ ಸೋಮವಾರ 2,054ಕ್ಕೆ ಏರಿಕೆಯಾಗಿದೆ. ಇನ್ನೂ 3,400 ಜನರು ಗಾಯಗೊಂಡಿದ್ದಾರೆ ಮತ್ತು 300 ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ.

ಮ್ಯಾನ್ಹಾರ್‌ನ ಎರಡನೇ ಅತಿದೊಡ್ಡ ನಗರವಾದ ಮಂಡಲೆ ನಗರದ ಸೆಕ್ಟರ್ ಡಿಯಲ್ಲಿರುವ 13 ಕಟ್ಟಡಗಳಿಂದ ಸೋಮವಾರ ಏಳು ಮೃತದೇಹಗಳನ್ನು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್ಸಿಆ‌ರ್.ಎಫ್) ವಶಪಡಿಸಿಕೊಂಡಿದೆ. 170 ಸನ್ಯಾಸಿಗಳು ಸಿಲುಕಿಕೊಂಡಿದ್ದಾರೆ ಎಂದು ಹೇಳಲಾದ ಉಲ್ಲಾಥೀನ್ ಮಠದಲ್ಲಿ 80 ಭಾರತೀಯ ಫೆಡರಲ್ ರಕ್ಷಣಾ ಪಡೆಯು ಕೆಲಸ ಮಾಡುತ್ತಿದೆ. ಈ ಸ್ಥಳದಿಂದ (ಏಳು ಜನರಲ್ಲಿ) ಮೂರು ಶವಗಳನ್ನು ಎ.ಆ‌ರ್.ಎಫ್ ವಶಪಡಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. 

Categories
ರಾಷ್ಟ್ರೀಯ ಸುದ್ದಿ

ನೀರಿನ ರಕ್ಷಣೆಗೆ ಸಾಮೂಹಿಕ ಕ್ರಮ : ಪ್ರಧಾನಿ ಮೋದಿ

ಹೊಸದಿಲ್ಲಿ : ಭಾರತದಾದ್ಯಂತ ಜಲ ಸಂರಕ್ಷಣಾ ಯೋಜನೆಗಳು ಜಾರಿಯಾಗುತ್ತಿವೆ. ನೀರನ್ನು ಉಳಿಸುವುದು ಕೇವಲ ಸರ್ಕಾರದ ಕೆಲಸವಲ್ಲ. ಭವಿಷ್ಯದ ಪೀಳಿಗೆಗೆ ಸಂಪನ್ಮೂಲಗಳನ್ನು ಉಳಿಸುವುದು ಇಡೀ ಸಮಾಜದ ಜವಾಬ್ದಾರಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ರೇಡಿಯೋ ಮಾಸಿಕ ಕಾರ್ಯಕ್ರಮ ಮನ್ ಕಿ ಬಾತ್ ಭಾಷಣದ 120ನೇ ಆವೃತ್ತಿಯಲ್ಲಿ ಪ್ರಧಾನಿ, ಬೇಸಿಗೆ ಸಮೀಪಿಸುತ್ತಿರುವ ಹಿನ್ನೆಲೆ ಜಲ ಸಂರಕ್ಷಣೆಯಲ್ಲಿ ಸಾಮೂಹಿಕ ಪ್ರಯತ್ನಗಳ ಅಗತ್ಯವನ್ನು ಒತ್ತಿ ಹೇಳಿದರು. ಅಲ್ಲದೆ, ಪ್ರಸ್ತುತ ನಡೆಯುತ್ತಿರುವ ಕ್ಯಾಚ್ ದಿ ರೈನ್ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಅವರು ಜನರಿಗೆ ಕರೆ ನೀಡಿದರು.

ಸಾವಿರಾರು ಕೃತಕ ಕೊಳಗಳು, ಅಣೆಕಟ್ಟು ಗಳು, ಕೊಳವೆ ಬಾವಿಗಳ ಪುನರ್‌ಭರ್ತಿ ಮತ್ತು ಇಂಗು ಗುಂಡಿಗಳನ್ನು ದೇಶದೆಲ್ಲೆಡೆ ನಿರ್ಮಿಸಲಾಗಿದೆ. ಕಳೆದ 7-8 ವರ್ಷಗಳಲ್ಲಿ, ಹೊಸದಾಗಿ ನಿರ್ಮಿಸಲಾದ ಟ್ಯಾಂಕ್‌ಗಳು, ಕೊಳಗಳು ಮತ್ತು ಇತರ ನೀರಿನ ಮರುಪೂರಣ ರಚನೆಗಳ ಮೂಲಕ 11 ಬಿಲಿಯನ್ ಕ್ಯೂಬಿಕ್ ಮೀಟರ್‌ಗೂ ಹೆಚ್ಚು ನೀರನ್ನು ಸಂರಕ್ಷಿಸಲಾಗಿದೆ ಎಂದು ಪ್ರಧಾನಿ ಹೇಳಿದರು.

ಭಾಕ್ರಾನಂಗಲ್ ಅಣೆಕಟ್ಟಿನಿಂದ ನಿರ್ಮಾಣವಾಗಿರುವ ಗೋವಿಂದ್ ಸಾಗರ್ ಸರೋವರವನ್ನು ಅವರು ಉದಾಹರಣೆಯಾಗಿ ಉಲ್ಲೇಖಿಸಿದರು. ಇದೇ ವೇಳೆ ಪ್ರಧಾನಿ, ಮಳೆನೀರು ಸಂರಕ್ಷಣೆ ಗರಿಷ್ಠಗೊಳಿಸಲು ಮಳೆ ನೀರು ಕೊಯ್ದು ಮಾದರಿಗಳನ್ನು (ಆರ್‌ಡಬ್ಲ್ಯೂಎಚ್‌ಎಸ್) ರಚಿಸಲು ಪ್ರೋತ್ಸಾಹಿಸಲಾಗುತ್ತಿದೆ ಎಂದು ತಿಳಿಸಿದರು.

Categories
ಪಂಚಾಂಗ

ಶುಭ ದಿನದ ಪಂಚಾಂಗ

ಶುಭ ದಿನದ ಪಂಚಾಂಗ

ಕಲಿಯುಗಾಬ್ದ 5127

ವಿಶ್ವಾವಸು ಸಂವತ್ಸರ

ಉತ್ತರಾಯಣ

ವಸಂತ : ಋತು

ಚೈತ್ರ : ಮಾಸ

ಶುಕ್ಲ ಪಕ್ಷ

ಭರಣಿ: ನಕ್ಷತ್ರ

ತದಿಗೆ : ತಿಥಿ

ಮಂಗಳವಾರ

01.04.2025

ಈ ದಿನ ಎಲ್ಲರಿಗೂ ಶುಭವಾಗಲಿ