Categories
ಅಪರಾಧ

ಅಬ್ದುಲ್ ರಹಿಮಾನ್ ಕೊಲೆ : ಆರೋಪಿಗಳ ಶೀಘ್ರ ಬಂಧನ

ಬಂಟ್ವಾಳ : ಅಬ್ದುಲ್ ರಹಿಮಾನ್ ಕೊಲೆ ಆರೋಪಿಗಳನ್ನು ಅತೀ ಶೀಘ್ರದಲ್ಲೇ ಬಂಧಿಸಲಾ ಗುವುದು, ಎಫ್ ಐ ಆರ್‌ ನಲ್ಲಿ ಎರಡು ಹೆಸರಿದೆ ಬಂಧನ ಆದ ನಂತರ ಎಲ್ಲಾ ಮಾಹಿತಿಯನ್ನು ನೀಡುತ್ತೇವೆ, ಸದ್ಯ ತನಿಖೆ ಪ್ರಗತಿಯಲ್ಲಿದೆ, ಆ ಬಳಿಕ ಮಾಹಿತಿ ನೀಡುತ್ತೇವೆ ಎಂದು ಕಾನೂನು ಸುವ್ಯವಸ್ಥೆ ಎಡಿಜಿಪಿ ಆರ್.ಹಿತೇಂದ್ರ ಹೇಳಿದ್ದಾರೆ.

ಬುಧವಾರ ಬಂಟ್ವಾಳ ಡಿವೈಎಸ್ಪಿ ಕಚೇರಿಯಲ್ಲಿ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ತಮ್ಮನ್ನ ಭೇಟಿಯಾದ ಪತ್ರಕರ್ತರೊಂದಿಗೆ ಮಾತನಾಡಿದ ಎಡಿಜಿಪಿ ಅವರು, ಸೋಮವಾರ ಮೂರು ಗಂಟೆಯ ಹೊತ್ತಿಗೆ ಅಬ್ದುಲ್ ರಹಿಮಾನ್ ಬರ್ಬರ ಹತ್ಯೆ ನಡೆದಿದ್ದು, ಘಟನೆಯ ಹಿನ್ನಲೆಯಲ್ಲಿ ಮಂಗಳೂರು ನಗರ ಹಾಗೂ ದ.ಕ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಯಲ್ಲಿದೆ. ಅಂತ್ಯ ಸಂಸ್ಕಾರ ಶಾಂತಿಯುತವಾಗಿ ಮುಗಿದಿದೆ. ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿದರು.

ಹೆಚ್ಚುವರಿ ಪೊಲೀಸರ ನಿಯೋಜನೆ :

ಮುಂಜಾಗೃತಾಕ್ರಮವಾಗಿ ಉಡುಪಿ, ಚಿಕ್ಕಮಗಳೂರು, ಮೈಸೂರು ಹಾಗೂ ಕಾರವಾರದಿಂದ ಪೊಲೀಸರನ್ನು ನಿಯೋಜಿಸಲಾಗಿದೆ. ಗಾಳಿ ಸುದ್ದಿಗೆ ಕಿವಿ ಕೊಡದೆ ಸಾರ್ವಜನಿಕರು ಶಾಂತಿ ಕಾಪಾಡಬೇಕು ಎಂದು ಮನವಿ ಮಾಡಿದರು

Categories
ರಾಜ್ಯ ಸುದ್ದಿ

ಮಾಜಿ ಸೈನಿಕರ ಕ್ಷೇಮಾಭಿವೃದ್ಧಿಗೆ ನಿಗಮ : ಸಿಎಂ

ಬೆಂಗಳೂರು : ಮಾಜಿ ಸೈನಿಕರ ಕ್ಷೇಮಾಭಿವೃದ್ಧಿಗೆ ಪ್ರತ್ಯೇಕ ನಿಗಮ ಸ್ಥಾಪಿಸಲು ಸರ್ಕಾರ ಚಿಂತಿಸಿದೆ.’ ಜತೆಗೆ ಸೇನಾ ಕ್ಯಾಂಟೀನ್‌ಸಾಮಗ್ರಿಗಳಿಗೆ ಅಬಕಾರಿ ಸುಂಕದಿಂದ ವಿನಾಯ್ತಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.

ಸೇನೆಗೆ ಗೌರವ ಸೂಚಿಸಲು ಕೆಪಿಸಿಸಿ ಬುಧವಾರ ಪುರಭವನದಲ್ಲಿ ಆಯೋಜಿಸಿದ್ದ ಜೈ ಹಿಂದ್ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ ಸೈನಿಕರಿಗೆ ಅನುಕೂಲದ ಕ್ರಮ ಸರ್ಕಾರ ಮಾಡಲಿದೆ. ಸೈನಿಕರನ್ನು ಗೌರವಿಸಬೇಕು. ಸೇನಾ ಕ್ಯಾಂಟೀನ್‌ಗಳಲ್ಲಿ ಮಾರಾಟವಾಗುವ ಸಾಮಗ್ರಿಗಳಿಗೆ ಅಬಕಾರಿ ಸುಂಕ ರದ್ದತಿಗೆ ನಿರ್ಧರಿಸಲಾಗಿದೆ. ಮಾಜಿ ಸೈನಿಕರ ಕ್ಷೇಮಾಭಿವೃದ್ಧಿಗೆ ಪ್ರತ್ಯೇಕ ನಿಗಮ ರಚನೆಗೆ ಪ್ರಯತ್ನಿಸಲಾಗುವುದು ಎಂದರು.

Categories
ರಾಜ್ಯ ಸುದ್ದಿ

ಮುಸ್ಲಿಂ ಗುತ್ತಿಗೆ ಬಿಲ್‌ ವಾಪಾಸ್

ಬೆಂಗಳೂರು : ಸರ್ಕಾರಿ ಕಾಮಗಾರಿಗಳ ಗುತ್ತಿಗೆ, ಖರೀದಿ ಪ್ರಕ್ರಿಯೆಗಳಲ್ಲಿ 2-ಬಿ ಪ್ರವರ್ಗದವರಿಗೆ (ಮುಸ್ಲಿಮರಿಗೆ) ಶೇ.4ರಷ್ಟು ಮೀಸಲಾತಿ ಕಲ್ಪಿಸುವ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ಕೆಟಿಪಿಪಿ) ನಿಯಮಗಳ ತಿದ್ದುಪಡಿ ವಿಧೇಯಕವನ್ನು ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಬುಧವಾರ ಮತ್ತೊಮ್ಮೆ ರಾಜ್ಯ ಸರ್ಕಾರಕ್ಕೆ ವಾಪಸ್ ಕಳುಹಿಸಿದ್ದಾರೆ. ರಾಷ್ಟ್ರಪತಿ ಬಳಿ ಕಳಿಸಬೇಕೆಂದು ಹೇಳಿದ್ದಾರೆ.

ಅಲ್ಲದೆ, ಏ.15 ರಂದು ರಾಜ್ಯ ಸರ್ಕಾರಕ್ಕೆ ವಿಧೇಯಕ ವಾಪಸ್ ಕಳುಹಿಸಿ ನಾನು ತಿಳಿಸಿದ್ದ ಅಭಿಪ್ರಾಯಕ್ಕೆ ಬದ್ಧನಾಗಿದ್ದೇನೆ. ವಿಧೇಯಕವು ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ರಾಷ್ಟ್ರಪತಿಗಳ ಪರಿಗಣನೆಗೆ ಕಳುಹಿಸಬೇಕು ಎಂದು ಪುನರುಚ್ಚರಿಸಿದ್ದಾರೆ

Categories
ರಾಷ್ಟ್ರೀಯ ಸುದ್ದಿ

ಇಲೆಕ್ಟ್ರಿಕ್ ‌ಹಂಸ ತರಬೇತಿ ವಿಮಾನ ನಿರ್ಮಾಣ

ನವದೆಹಲಿ : ರಕ್ಷಣಾ ಉಪಕರಣಗಳ ಸ್ವದೇಶಿ ನಿರ್ಮಾಣದಲ್ಲಿ ಭಾರತ ಪ್ರಮುಖ ತರಬೇತಿ ವಿಮಾನವನ್ನು ಅಭಿವೃದ್ಧಿಪಡಿಸಲು ಮುಂದಾಗಿದೆ. ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಏರೋಸ್ಪೇಸ್ ಪ್ರಯೋಗಾಲಯ ಈ ವಿಮಾನವನ್ನು ಅಭಿವೃದ್ಧಿಪಡಿಸಲಿದೆ.

ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಜಿತೇಂದ್ರ ಸಿಂಗ್ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಇ-ಹಂಸ ವಿಮಾನ ತಯಾರಿಕೆಯ ಬಗ್ಗೆ ಘೋಷಿಸಲಾಗಿದೆ. ಇದನ್ನು ಪೈಲಟ್ ತರಬೇತಿಗಾಗಿ ಬಳಸಲಾಗುತ್ತದೆ. ಈ ವಿಮಾನ ವಿದೇಶದಿಂದ ಆಮದು ಮಾಡಿಕೊಳ್ಳುವ ತರಬೇತಿ ವಿಮಾನದ ಸರಿ ಸುಮಾರು ಅರ್ಧದಷ್ಟು ಬೆಲೆಗೆ ತಯಾರಾಗಲಿದೆ.

Categories
ರಾಷ್ಟ್ರೀಯ ಸುದ್ದಿ

ಇಂದಿನಿಂದ ಮೋದಿ ನಾಲ್ಕು ರಾಜ್ಯಗಳ ಪ್ರವಾಸ

ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿಯವರ ಎರಡು ದಿನದ ನಾಲ್ಕು ರಾಜ್ಯಗಳ ಪ್ರವಾಸ ಗುರುವಾರ ಆರಂಭಗೊಳ್ಳಲಿದ್ದು, ಹಲವು ಅಭಿವೃದ್ಧಿ ಯೋಜನೆಗಳ ಶಿಲಾನ್ಯಾಸ ಮತ್ತು ಲೋಕಾರ್ಪಣೆ ಮಾಡಲಿದ್ದಾರೆ. 2 ದಿನ ಪ್ರಧಾನಿ ಮೋದಿ ತಮ್ಮ ನಾಲ್ಕು ರಾಜ್ಯಗಳ ಪ್ರವಾಸದಲ್ಲಿ ಸಿಕ್ಕಿಂ, ಪಶ್ಚಿಮ ಬಂಗಾಳ, ಬಿಹಾರ್ ಮತ್ತು ಉತ್ತರ ಪ್ರದೇಶ ರಾಜ್ಯಗಳಿಗೆ ಭೇಟಿ ನೀಡಲಿದ್ದಾರೆ.

ಗ್ಯಾಂಗ್ಟಕ್‌ನ ಅಟಲ್ ಅಮೃತ್ ಉದ್ಯಾನದಲ್ಲಿ ಭಾರತ ರತ್ನ ಪುರಸ್ಕೃತ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಪ್ರತಿಮೆಯನ್ನು ಮೋದಿ ಅನಾವರಣಗೊಳಿಸಲಿದ್ದಾರೆ. ನಾಮಿಯಲ್ಲಿ 750 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ 500 ಬೆಡ್ ಗಳ ವ್ಯವಸ್ಥೆಯ ಜಿಲ್ಲಾ ಆಸ್ಪತ್ರೆಯನ್ನು ಅವರು ಲೋಕಾರ್ಪಣೆ ಮಾಡಲಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಪ್ರಮುಖವಾಗಿ ನಗರ ಅನಿಲ ಸರಬರಾಜು ಯೋಜನೆಗೆ ಪ್ರಧಾನಿ ಶಿಲಾನ್ಯಾಸ ಮಾಡಲಿದ್ದು, ಶುಕ್ರವಾರ ಬಿಹಾರ್ ಪ್ರವಾಸದ ವೇಳೆ ಪಾಟ್ನಾ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಕಟ್ಟಡ ಉದ್ಘಾಟನೆ ನೆರವೇರಿಸಲಿದ್ದಾರೆ. ಬಿಹಾರ್‌ನ ಕಾರಾಕಾಟ್‌ನಲ್ಲಿ ಒಟ್ಟು 48,520 ಕೋಟಿ ರೂ. ವೆಚ್ಚದ ಯೋಜನೆಗಳನ್ನು ಪ್ರಧಾನಿ ಮೋದಿ ಶಿಲಾನ್ಯಾಸ ಮಾಡಲಿದ್ದು, ಹಲವು ಯೋಜನೆಗಳನ್ನು ಉದ್ಘಾಟನೆ ಮಾಡಲಿದ್ದಾರೆ. ಉತ್ತರ ಪ್ರದೇಶದ ಕಾನ್ಸುರ್‌ನಲ್ಲಿ 20,900 ಕೋಟಿ ರೂ. ವೆಚ್ಚದ ಅಭಿವೃದ್ಧಿ ಯೋಜನೆಗಳ ಶಿಲಾನ್ಯಾಸ ಮತ್ತು ಉದ್ಘಾಟನೆ ನಡೆಸಲಿದ್ದಾರೆ. ಪ್ರಧಾನಿ ಮೋದಿ ಮೂರನೇ ಬಾರಿ ಅಧಿಕಾರಕ್ಕೇರಿ ಜೂನ್ 9ರಂದು ಒಂದು ವರ್ಷ ಪೂರ್ಣಗೊಳ್ಳುತ್ತಿದ್ದು, ಈ ಹಿನ್ನಲೇ ಹಲವು ರಾಜ್ಯಗಳಲ್ಲಿ ಅಭಿವೃದ್ಧಿ ಯೋಜನೆಗಳ ಚಾಲನೆ ನೀಡುವುದರಲ್ಲಿ ವ್ಯಸ್ತರಾಗಿದ್ದಾರೆ.

Categories
ರಾಷ್ಟ್ರೀಯ ಸುದ್ದಿ

ಹಮಾಸ್‌ ನಾಯಕ ಹತ

ಟೆಲ್‌ ಅವಿವ್ : ಹಮಾಸ್‌ನ ಗಾಜಾ ನಾಯಕ ಯಾಹ್ಯಾ ಸಿಂವಾರ್ ಸಹೋದರ ಮುಹಮ್ಮದ್ ಸಿಂವಾರ್‌ನನ್ನು ಇಸ್ರೇಲ್ ಪಡೆಗಳು ಹತ್ಯೆಮಾಡಿವೆ. ಈ ಸಂಬಂಧ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೇ ಬುಧವಾರ ಘೋಷಣೆ ಮಾಡಿದ್ದಾರೆ.

ಹಮಾಸ್‌ನ ಈ ಹಿಂದಿನ ನಾಯಕ ಯಾಹ್ಯಾ ಸಿಂವಾರ್‌ನನ್ನು ಕಳೆದ ಅಕ್ಟೋಬರ್‌ನಲ್ಲಿ ಇಸ್ರೇಲ್ ಸೇನೆ ಹತ್ಯೆ ಮಾಡಿತ್ತು. ಇದಾದ ಬಳಿಕ ಮುಹಮ್ಮದ್ ಸಿಂವಾರ್‌ನನ್ನು ಹಮಾಸ್‌ನ ಗಾಜಾದ ನಾಯಕನನ್ನಾಗಿ ಮಾಡಲಾಗಿತ್ತು.

ಈ ತಿಂಗಳ ಆರಂಭದಲ್ಲಿ ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ ಅವರು, ಗಾಜಾದ ಮೇಲೆ ನಡೆದ: ವಾಯುದಾಳಿಯಲ್ಲಿ ಮುಹಮ್ಮದ್ ಸಿಂವಾರ್ ಬಹುಶಃ ಹತ್ಯೆಗೀಡಾಗಿದ್ದಾನೆ ಎಂದು ಹೇಳಿದ್ದರು. 

Categories
ಪಂಚಾಂಗ

ಶುಭ ದಿನದ ಪಂಚಾಂಗ

ಶುಭ ದಿನದ ಪಂಚಾಂಗ

ಕಲಿಯುಗಾಬ್ದ 5127

ವಿಶ್ವಾವಸು ಸಂವತ್ಸರ

ಉತ್ತರಾಯಣ

ಗ್ರೀಷ್ಮ : ಋತು

ಜ್ಯೇಷ್ಠ : ಮಾಸ

ಶುಕ್ಲ ಪಕ್ಷ

ಆರ್ದ್ರೆ: ನಕ್ಷತ್ರ

ತದಿಗೆ : ತಿಥಿ

ಗುರುವಾರ

29.05.2025

ಈ ದಿನ ಎಲ್ಲರಿಗೂ ಶುಭವಾಗಲಿ

Categories
ಕರಾವಳಿ ಸುದ್ದಿ

ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ಸಿ.ಎ., ಸಿ.ಎಸ್., ಸಿ.ಎಮ್.ಎ. ವಿದ್ಯಾರ್ಥಿಗಳಿಗೆ ಪೂರ್ವಪರಿಚಯ ಹಾಗೂ ಸಾಧಕರಿಗೆ ಸನ್ಮಾನ

ಕುಂದಾಪುರ : ನಗರದೊಂದಿಗೆ ಗ್ರಾಮೀಣ ಪ್ರದೇಶದ ಬಡ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕೆಂಬ ಮಹತ್ವಾಕಾಂಕ್ಷೆಯಿAದ ಹುಟ್ಟಿಕೊಂಡ ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ 2025-26ನೇ ಸಾಲಿನ ಪ್ರಥಮ ವರ್ಷದ ಸಿ.ಎ., ಸಿ.ಎಸ್., ಸಿ.ಎಮ್.ಎ. ವಿದ್ಯಾರ್ಥಿಗಳಿಗೆ ಪೂರ್ವ ಪರಿಚಯ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ ಹಾಗೂ ಮುಂದಿನ ದಿನಗಳಲ್ಲಿ ನಡೆಯುವ ತರಬೇತಿಯ ಉದ್ಘಾಟನಾ ಸಮಾರಂಭ ನೆರವೇರಿತು.
ಉಡುಪಿಯ ವಿ-ರೀಚ್ ಸಂಸ್ಥೆಯ ಸ್ಥಾಪಕರು ಹಾಗೂ ತರಬೇತುದಾರರಾದ ಸಿ.ಎಸ್. ಸಂತೋಷ್ ಪ್ರಭು ಅವರು ಉದ್ಘಾಟಿಸಿ, ವರ್ತಮಾನದಲ್ಲಿ ಸಿ.ಎ., ಸಿ.ಎಸ್., ಸಿ.ಎಮ್.ಎ. ಪ್ರೊಫೆಷನಲ್ ಕೋರ್ಸ್ಗಳ ಮಹತ್ವ ಹಾಗೂ ವಿದ್ಯಾರ್ಥಿಗಳ ಓದಿನ ಕ್ರಮದ ಕುರಿತು ಮಾತನಾಡಿದರು. ಇದೇ ಸಂದರ್ಭ ಈ ಹಿಂದೆ ನಡೆದ ಸಿ.ಎ., ಸಿ.ಎಸ್., ಸಿ.ಎಮ್.ಎ. ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿಯವರು ಮಾತನಾಡಿ, ವಿದ್ಯಾರ್ಥಿಗಳಲ್ಲಿ ಪ್ರೊಫೆಷನಲ್ ಕೋರ್ಸ್ ಅಭ್ಯಾಸದ ಪೂರ್ವದಲ್ಲಿ ಇರಬೇಕಾದ ಛಲ ಹಾಗೂ ಅಭ್ಯಾಸ ಸಮಯದಲ್ಲಿರಬೇಕಾದ ನಿಷ್ಠೆ, ಪಾಲಿಸಬೇಕಾದ ವೈಯಕ್ತಿಕ ವೇಳಾಪಟ್ಟಿ, ಬೆಳೆಸಿಕೊಳ್ಳಬೇಕಾದ ಹವ್ಯಾಸ, ಆಹಾರ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಉಪ-ಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ ಅವರು ಸಂಸ್ಥೆಯಲ್ಲಿ ಸಿ.ಎ., ಸಿ.ಎಸ್., ಸಿ.ಎಮ್.ಎ. ವಿದ್ಯಾರ್ಥಿಗಳಿಗೆ ಇರಬೇಕಾದ ಶಿಸ್ತು ಮತ್ತು ಇದನ್ನು ನಿಭಾಯಿಸಲು ಬೇಕಾದ ಸಂಯಮಗಳ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದರು.
ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ವೀಣಾ ವಿ. ಭಟ್ ಸ್ವಾಗತಿಸಿ, ಕಾರ್ಯಕ್ರಮದ ಸಂಯೋಜಕರಾದ ಸುಹಾಸ್ ಜಟ್ಟಿಮನೆ ವಂದಿಸಿ, ಅಂತಿಮ ವರ್ಷದ ವಿದ್ಯಾರ್ಥಿನಿ ಸಿಂಚನ ನಿರೂಪಿಸಿದರು. ಕಾರ್ಯಕ್ರಮದಲ್ಲಿ ವಾಣಿಜ್ಯ ವಿಭಾಗದ ಎಲ್ಲಾ ಪ್ರಾಧ್ಯಾಪಕರು ಉಪಸ್ಥಿತರಿದ್ದರು.

Categories
ಕರಾವಳಿ ಸುದ್ದಿ

ಜನೌಷಧಿ ಕೇಂದ್ರಗಳ ತೆರವು : ರಾಜ್ಯ ಕಾಂಗ್ರೆಸ್ ಸರಕಾರದ ಕೀಳು ಮಟ್ಟದ ರಾಜಕಾರಣಕ್ಕೆ ಹಿಡಿದ ಕೈಗನ್ನಡಿ: ಕಿಶೋರ್ ಕುಮಾರ್ ಕುಂದಾಪುರ

ಉಡುಪಿ : ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಜನಪರ ಯೋಜನೆಯಾದ ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳನ್ನು ರಾಜ್ಯಾದ್ಯಂತ ಎಲ್ಲಾ ಜಿಲ್ಲಾಸ್ಪತ್ರೆಗಳ ಆವರಣದಿಂದ ತೆರವುಗೊಳಿಸಿರುವ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದ ಕ್ರಮ ಕೀಳುಮಟ್ಟದ ರಾಜಕಾರಣಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಡವರಿಗೆ ಕೈಗೆಟಕುವ ದರದಲ್ಲಿ ಔಷಧಿಗಳು ದೊರಕಬೇಕು, ಯಾವುದೇ ಔಷಧಿಗಳ ಕೊರತೆಯಿಂದ ಬಡವರು ಪ್ರಾಣ ಕಳೆದುಕೊಳ್ಳುವಂತಾಗಬಾರದು ಎಂಬ ಸದುದ್ಧೇಶದಿಂದ ಕೇಂದ್ರ ಸರಕಾರ ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳನ್ನು ದೇಶಾದ್ಯಂತ ತೆರೆಯುವ ಮೂಲಕ ಬಡ ಜನತೆಯ ಆರೋಗ್ಯ ಸಂರಕ್ಷಣೆಗೆ ವಿಶೇಷ ಕೊಡುಗೆಯನ್ನು ನೀಡಿದೆ. ಆದರೆ ಜನೌಷಧಿ ಕೇಂದ್ರದ ನಾಮಫಲಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ಇರುವುದನ್ನು ಸಹಿಸದ ರಾಜ್ಯ ಸರಕಾರ ಜಿಲ್ಲಾಸ್ಪತ್ರೆಗಳಲ್ಲಿ ಉಚಿತ ಔಷಧಿಗಳ ಸಮರ್ಪಕ ವ್ಯವಸ್ಥೆಯನ್ನೂ ಮಾಡದೆ ಕೇವಲ ದ್ವೇಷ ರಾಜಕಾರಣಕ್ಕಾಗಿ ಜನೌಷಧಿ ಕೇಂದ್ರಗಳನ್ನು ತೆರವುಗೊಳಿಸಿ ಬಡವರ ಜೀವನದಲ್ಲಿ ಚೆಲ್ಲಾಟವಾಡುತ್ತಿರುವುದು ಅತ್ಯಂತ ಖಂಡನೀಯ.

ಜಿಲ್ಲಾಸ್ಪತ್ರೆಗಳಲ್ಲಿ ಎಲ್ಲಾ ಔಷದಿಗಳು ಉಚಿತವಾಗಿ ದೊರೆಯುತ್ತದೆ ಎಂಬ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಹೇಳಿಕೆಯನ್ನಾಧರಿಸಿ ಸುದ್ದಿ ಮಾಧ್ಯಮವೊಂದು ಕೆಲವು ಪ್ರಮುಖ ಜಿಲ್ಲಾಸ್ಪತ್ರೆಗಳಿಗೆ ಬೇಟಿ ನೀಡಿ ಉಚಿತ ಔಷದಿಗಳ ಲಭ್ಯತೆಯ ಕುರಿತು ರಿಯಾಲಿಟಿ ಚೆಕ್ ನಡೆಸಿದಾಗ ಯಾವುದೇ ಅಗತ್ಯ ಔಷದಿಗಳು, ಮಾತ್ರೆಗಳು ಜಿಲ್ಲಾಸ್ಪತ್ರೆಗಳಲ್ಲಿ ಲಭ್ಯವಿಲ್ಲ ಎಂಬ ಆಘಾತಕಾರಿ ಅಂಶ ಬಯಲಾಗಿದೆ. ಬಡವರು ಜಿಲ್ಲಾಸ್ಪತ್ರೆಗಳಲ್ಲಿ ಔಷದಿಗಾಗಿ ಪರದಾಟ ನಡೆಸುವ ದಯನೀಯ ಸ್ಥಿತಿ ರಾಜ್ಯ ಸರಕಾರದ ಬೇಜವಾಬ್ದಾರಿತನವನ್ನು ಜಗಜ್ಜಾಹೀರುಗೊಳಿಸಿದೆ.

ರಾಜ್ಯ ಸರಕಾರ ಜನರ ಸಂಕಷ್ಟವನ್ನು ಅರ್ಥೈಸಿಕೊಂಡು ಆರೋಗ್ಯ ಸಂರಕ್ಷಣೆಯ ವಿಚಾರದಲ್ಲಿ ಯಾವುದೇ ರಾಜಕೀಯ ಲಾಭದ ಲೆಕ್ಕಾಚಾರವನ್ನು ಹಾಕದೇ ರಾಜ್ಯದ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಉತ್ತಮ ಗುಣಮಟ್ಟದ ಅರೋಗ್ಯ ಸೇವೆಯನ್ನು ನೀಡುವ ಜೊತೆಗೆ ಎಲ್ಲಾ ರೀತಿಯ ಅಗತ್ಯ ಔಷದಿಗಳ ಪೂರೈಕೆಗೆ ತುರ್ತು ಕ್ರಮ ವಹಿಸಬೇಕು ತಪ್ಪಿದಲ್ಲಿ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳ ಮರುಸ್ಥಾಪನೆಗೆ ಮುಂದಾಗಬೇಕು ಎಂದು ಅವರು ಸರಕಾರವನ್ನು ಅಗ್ರಹಿಸಿದ್ದಾರೆ.

ಜಿಲ್ಲಾಸ್ಪತ್ರೆಗಳಲ್ಲಿ ಜನೌಷಧಿ ಕೇಂದ್ರಗಳನ್ನು ತೆರವುಗೊಳಿಸಿ ಬಡವರ ಪಾಲಿಗೆ ಮರಣ ಶಾಸನ ಬರೆದಿರುವ ಜೊತೆಗೆ ವಿಪರೀತ ಬೆಲೆ ಏರಿಕೆ, ಹಾಲು ಉತ್ಪಾದಕರ ಸಬ್ಸಿಡಿ ಕಡಿತ ಸಹಿತ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್, ರೈತ ವಿದ್ಯಾನಿಧಿ, ಭಾಗ್ಯಲಕ್ಷ್ಮಿ, ಉಚಿತ ಬೈಸಿಕಲ್ ವಿತರಣೆ ಮುಂತಾದ ಬಿಜೆಪಿ ಆಡಳಿತಾವಧಿಯ ಜನಪರ ಯೋಜನೆಗಳಿಗೆ ರಾಜ್ಯದ ಪಾಲಿನ ಅನುದಾನವನ್ನು ನೀಡದೆ ಎಳ್ಳು ನೀರು ಬಿಟ್ಟಿರುವ ಭ್ರಷ್ಟ ಕಾಂಗ್ರೆಸ್ ಸರಕಾರದ ದುರಾಡಳಿತದಿಂದ ರಾಜ್ಯದ ಜನತೆ ರೋಸಿಹೋಗಿದ್ದು ರಾಜ್ಯ ಸರಕಾರದ ಜನವಿರೋಧಿ ನೀತಿಗೆ ಸೂಕ್ತ ಸಮಯದಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕಿಶೋರ್ ಕುಮಾರ್ ಕುಂದಾಪುರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Categories
ಕರಾವಳಿ ಸುದ್ದಿ

ಪಿಕಪ್‌ ವಾಹನ ಚಾಲಕನ ಕೊಲೆ

ಬಂಟ್ವಾಳ : ತಾಲೂಕಿನ ಕುರಿಯಾಳ ಎಂಬಲ್ಲಿಗೆ ಸಮೀಪದ ಇರಾಕೋಡಿ ಎಂಬಲ್ಲಿಗೆ ಪಿಕ್ ಅಪ್ ವಾಹನದಲ್ಲಿ ಮರಳು ಲೋಡ್ ತಂದಿದ್ದ ಯುವಕರಿಬ್ಬರ ಮೇಲೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳಿಬ್ಬರು ತಲವಾರು ದಾಳಿ ನಡೆಸಿದ್ದು, ಈ ಪೈಕಿ ಚಾಲಕ ಮೃತಪಟ್ಟರೆ, ಇನ್ನೋರ್ವ ಗಂಭೀರ ಗಾಯಗೊಂಡಿದ್ದ ಕಲಂದರ್ ಶಾಫಿ   ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೊಳತ್ತಮಜಲು ನಿವಾಸಿಯಾದ ಅಬ್ದುಲ್ ರಹಿಮಾನ್ (34) ಹತ್ಯೆಗೀಡಾದ ಚಾಲಕ. ಈತನ ಜೊತೆಗಿದ್ದ ಕಲಂದರ್ ಶಾಫಿ ಎಂಬವರಿಗೆ ಕೈಯ ಭಾಗಕ್ಕೆ ತೀವ್ರ ಸ್ವರೂಪದ ಗಾಯವಾಗಿದೆ ಎಂದು ತಿಳಿದುಬಂದಿದೆ.

ಈ ಘಟನೆಯ ಹಿನ್ನೆಲೆಯಲ್ಲಿ ಬಂಟ್ವಾಳ ತಾಲೂಕಿನ ಕೊಳತ್ತಮಜಲು, ಬಡಗಬೆಳ್ಳೂರು ಪರಿಸರದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಈ ಭಾಗದಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಕಣ್ಣಾವಲು ಬಿಗಿಗೊಳಿಸಲಾಗಿದೆ.

ಕೊಲೆಗೀಡಾದ ರಹಿಮಾನ್ ಪಿಕಪ್ ಚಾಲಕನಾಗಿದ್ದು, ಮರಳುಬೇಕೆಂದು ಬಂದ ಕರೆಯೊಂದರ ಹಿನ್ನೆಲೆಯಲ್ಲಿ ತನ್ನ ಪಿಕಪ್‌ನಲ್ಲಿ ಮರಳು ತುಂಬಿಸಿ ನಿಗದಿತ ಸ್ಥಳವಾದ ಕುರಿಯಾಳ ಸಮೀಪದ ಇರಾಕೋಡಿಗೆ ತಲುಪಿ ವಾಹನದಿಂದ ಮರಳನ್ನು ಇಳಿಸುವ ಸಂದರ್ಭದಲ್ಲಿ, ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಹಿಂಭಾಗದಿಂದ ತಲೆಯ ಭಾಗಕ್ಕೆ ತಲವಾರಿನಿಂದ ದಾಳಿಗೈದು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ವೇಳೆ ರಹಿಮಾನ್ ಜೊತೆ ಶಾಫಿ ಎಂಬವರು ಜೊತೆಗಿದ್ದು, ಇವರ ಮೇಲೂ ದಾಳಿ ನಡೆದಿದೆ. ಪರಿಣಾಮ ಆತನ ಕೈಗೆ ತೀವ್ರತರವಾದ ಏಟಾಗಿದೆ. ತಕ್ಷಣವೇ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.