Categories
ಕರಾವಳಿ ಸುದ್ದಿ

ಉಡುಪಿಯ ಶ್ರೀಕೃಷ್ಣ ಮಠಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಭೇಟಿ

ಉಡುಪಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನವೆಂಬರ್ 28 ರಂದು ಉಡುಪಿಯ ಶ್ರೀಕೃಷ್ಣ ಮಠಕ್ಕೆ ಆಗಮಿಸಲಿದ್ದಾರೆ.
ಅಂದು ಮಧ್ಯಾಹ್ನ 12 ಗಂಟೆಗೆ ಶ್ರೀ ಕೃಷ್ಣಮಠಕ್ಕೆ ಭೇಟಿ ನೀಡಲಿರುವ ಅವರು, ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿದ ಬಳಿಕ ಪರ್ಯಾಯ ಪುತ್ತಿಗೆಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ ಎಂದು ಮಠದ ಮೂಲಗಳು ತಿಳಿಸಿವೆ.

ಗೀತಾ ಜಯಂತಿಯ ಹಿನ್ನೆಲೆಯಲ್ಲಿ ಶ್ರೀ ಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದಲ್ಲಿ ನೆಡೆಯಲಿರುವ ”ಲಕ್ಷ ಕಂಠ ಗೀತಾ ಪಾರಾಯಣ- ಬೃಹತ್ ಗೀತೋತ್ಸವ” ಸಮಾರಂಭದಲ್ಲಿ ಪ್ರಧಾನಿ ಮೋದಿ ಭಾಗಿಯಾಗಲಿದ್ದಾರೆ

Categories
ಪಂಚಾಂಗ

ಶುಭ ದಿನದ ಪಂಚಾಂಗ

ಶುಭ ದಿನದ ಪಂಚಾಂಗ

ಕಲಿಯುಗಾಬ್ದ 5127

ವಿಶ್ವಾವಸು ಸಂವತ್ಸರ

ದಕ್ಷಿಣಾಯನ

ಶರದ್ : ಋತು

ಕಾರ್ತಿಕ: ಮಾಸ

ಶುಕ್ಲ ಪಕ್ಷ

ದಶಮಿ: ತಿಥಿ

ಧನಿಷ್ಠಾ: ನಕ್ಷತ್ರ

ಶುಕ್ರವಾರ

31.10.2025

ಈ ದಿನ ಎಲ್ಲರಿಗೂ ಶುಭವಾಗಲಿ

Categories
ಕರಾವಳಿ ಸುದ್ದಿ

ವಿದೇಶದಲ್ಲಿ ಉದ್ಯೋಗ ಮಾಡಲು ವೀಸಾ ಕೊಡಿಸುವುದಾಗಿ ಹೇಳಿ ವಂಚನೆ

ಕುಂದಾಪುರ :ವಿದೇಶದಲ್ಲಿ ಉದ್ಯೋಗ ಮಾಡಲು ವೀಸಾ ಕೊಡಿಸುವುದಾಗಿ ಹೇಳಿ ಹಲವಾರು ಮಂದಿಯನ್ನು ನಂಬಿಸಿ ಅವರಿಂದ ಹಣವನ್ನು ಪಡೆದುಕೊಂಡು ಬಳಿಕ ಉದ್ಯೋಗ ಕೊಡಿಸದೆ ವಂಚಿಸುತ್ತಿದ್ದ ಆರೋಪದಲ್ಲಿ ಇಬ್ಬರನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ.ಬಂಧಿತರನ್ನು ಬೆಂಗಳೂರಿನ ಆನೆಕಲ್ ತಾಲೂಕಿನ ಪ್ರಕೃತಿ (34) ಮತ್ತು ಕುಂದಾಪುರ ತಾಲೂಕಿನ ಗಂಗೊಳ್ಳಿಯ ಆಲ್ಡನ್ ರೆಬೇರೋ (42) ಎಂದು ಗುರುತಿಸಲಾಗಿದೆ.

ಕಾವೂರು ಠಾಣಾ ವ್ಯಾಪ್ತಿಯ ಹಲವಾರು ಮಂದಿಗೆ ವಿದೇಶದಲ್ಲಿ ಉದ್ಯೋಗ ಮಾಡಲು ವೀಸಾ ಕೊಡಿಸುವುದಾಗಿ ಹೇಳಿ 1 ಕೋ.ರೂ. ಗೂ ಅಧಿಕ ಹಣವನ್ನು ಪಡೆದುಕೊಂಡು ವಂಚಿಸುತ್ತಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು. ಆರೋಪಿಗಳು ಜನರಿಂದ ಪಾಸ್‌ಪೋರ್ಟ್‌ಗಳನ್ನು ಪಡೆದುಕೊಂಡು ಮನೆಯಲ್ಲಿ ಅಕ್ರಮವಾಗಿ ಇರಿಸುತ್ತಿದ್ದರು ಎನ್ನಲಾಗಿದೆ.

ಅದರಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳಿಂದ 24 ಪಾಸ್‌ಪೋರ್ಟ್‌ಗಳು, 43 ಗ್ರಾಂ ಬಂಗಾರ (ಅಂದಾಜು ಮೌಲ್ಯ 4,30,000 ರೂ.) ಮತ್ತು 2 ಮೊಬೈಲ್‌ಗಳನ್ನು ಬೆಂಗಳೂರಿನಲ್ಲಿ ಸ್ವಾಧೀನಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಮಂಗಳೂರು ಉತ್ತರ ಉಪವಿಭಾಗದ ಎ.ಸಿ.ಪಿ. ಶ್ರೀಕಾಂತ್ ಕೆ. ಮಾರ್ಗದರ್ಶನದಲ್ಲಿ ಕಾವೂರು ಠಾಣೆಯ ಇನ್‌ಸ್ಪೆಕ್ಟ‌ರ್ ರಾಘವೇಂದ್ರ ಎಂ.ಬೈಂದೂರು, ಎಸ್ಸೆ ಮಲ್ಲಿಕಾರ್ಜುನ ಬಿರಾದಾರ, ಸಿಬ್ಬಂದಿಗಳಾದ ನಾಗರತ್ನ, ರಾಘವೇಂದ್ರ, ಪ್ರವೀಣ್, ರಿಯಾಝ್ ಕಾರ್ಯಾಚರಣೆ ನಡೆಸಿದ್ದರು

Categories
ಕರಾವಳಿ ಸುದ್ದಿ

ತುಳುನಾಡಿನ ದೈವದ ಕುರಿತಾದ ಇನ್ನೊಂದು ಚಿತ್ರ

ಮನುಷ್ಯನಿಗೆ ತಾನು ನಂಬಿದ ದೈವ-ದೇವರುಗಳ ಬಗ್ಗೆ ಇರುವ ಪ್ರೀತಿಗೆ ಸಮನಾದುದು ಬೇರೆ ಯಾವುದೂ ಇಲ್ಲ. ನಮದಮ ದೇಶದಲ್ಲಿ ಸಿನಿಮಾ ಶುರುವಾದಾಗಿನಿಂದ ದೇವರುಗಳ ಬಗ್ಗೆ ಅವೆಷ್ಟು ಸಿನಿಮಾಗಳು ಬಂದವೋ ಎಣಿಕೆಗೆ ನಿಲುಕುವುದಿಲ್ಲ. ಹಿಂದೆ ಬಂದದ್ದೆಲ್ಲವೂ ಶಿಷ್ಟ ಶೈಲಿಯ ಪುರಾಣ-ಮಹಾಕಾವ್ಯಗಳ ಕಥೆಗಳನ್ನಾಧರಿಸಿದ ಸಿನಿಮಾಗಳು. ನಾಗಮಂಡಲದ ಕುರಿತಾಗಿ ಸಿನಿಮಾ ಮಾಡಿದ್ದಾರಾದರೂ ಅಲ್ಲಿ ಮೂಲತತ್ವಕ್ಕಿಂತ ಹೆಚ್ಚು ಸಾಮಾಜಿಕ ಕಥೆಯ ಮಸಾಲೆ ತುಂಬಿಸಿ ಬಿಟ್ಟಿದ್ದಾರೆ. ಇತ್ತೀಚೆಗೆ ‘ಕಾಂತಾರ’ದ ನಂತರ ಜನಪದರು ನಂಬಿದ ದೈವಗಳ ಕುರಿತಾಗಿ ಸಿನಿಮಾ ಮಾಡುವ ಟ್ರೆಂಡ್ ಆರಂಭವಾಗಿದೆ. ಇಂಥ ಸಿನಿಮಾಗಳನ್ನು ಮಾಡುವುದು ತುಂಬಾ ಕಷ್ಟ. ಯಾಕೆಂದರೆ ಇಲ್ಲಿ ಸಿದ್ಧ ಸಾಹಿತ್ಯವಿಲ್ಲ. ಇದಕ್ಕೆ ಸಂಬಂಧಿಸಿದ ಸಾಹಿತ್ಯಕ್ಕೋಸ್ಕರ ನಿರ್ದೇಶಕರು ಮತ್ತು ಚಿತ್ರಕಥೆ ಬರೆಯುವವರು ಸಾಕಷ್ಟು ಸಂಶೋಧನಾತ್ಮಕ ಕೆಲಸಗಳನ್ನು ಮಾಡಬೇಕಾಗುತ್ತದೆ. ಅದೂ ದೈವಗಳ ಪರಿಕಲ್ಪನೆ ಹುಟ್ಟಿಕೊಂಡದ್ದು ಪ್ರಾಚೀನ ಕಾಲದಲ್ಲಿ. ದಟ್ಟ ಕಾಡುಗಳ ನಡುವೆ ವಾಸಿಸುತ್ತಿದ್ದ ಜನಾಂಗಗಳ ನಡುವೆ. ಆದ್ದರಿಂದ ಸಿನಿಮಾಕ್ಕೆ ನೈಜ ಸ್ವರೂಪದ ಸೆಟ್ಟಿಂಗ್ಸ್ ಸಿದ್ಧಪಡಿಸುವುದು ಒಂದು ಹರಸಾಹಸ. ಈ ನಿಟ್ಟಿನಲ್ಲಿ ‘ಕಾಂತಾರ ಚಾಪ್ಟರ್ ೧’ ಒಂದು ಅಭೂತಪೂರ್ವ ಯಶಸ್ಸು ಸಾಧಿಸಿದ ಚಿತ್ರ.
ಆದರೆ ಈಗ ತೆರೆಯ ಮೇಲೆ ಬರಲು ಸಿದ್ಧವಾಗಿರುವ ತುಳುನಾಡಿನ ದೈವದ ಕುರಿತಾದ ಇನ್ನೊಂದು ಚಿತ್ರ ‘ಕೊರಗಜ್ಜ’ ಈ ಮೊದಲು ಬಂದ ಚಿತ್ರಗಳಿಗಿಂತ ಪೂರ್ತಿ ಭಿನ್ನವಾಗಿದೆ ಅನ್ನುವುದು ಮೊನ್ನೆ ಮೊನ್ನೆ ಭರ್ಜರಿ ವೈಭವದಿಂದ ತುಳುನಾಡಿನ ಚೆಂಡೆ ಹಾಗೂ ಉಡುಪಿಯ ಮಹಿಳಾ ಟೈಗರ್ ತಮಡದ ಕುಣಿತದೊಂದಿಗೆ ಬಿಡುಗಡೆಯಾದ ಅದರ first look & 3D poster ನಿಂದ ಸ್ಪಷ್ಟವಾಗಿ ವ್ಯಕ್ತವಾಗಿದೆ. ಇಲ್ಲಿ ಎತ್ತಿಕೊಂಡಿರುವ ಕಥಾವಸ್ತು ಪಂಜುರ್ಲಿ, ಕಲ್ಲುಕುಟ್ಟಿಗ, ಗುಳಿಗ ದೈವಗಳಂತೆ ಅತಿ ಮಾನುಷ ಶಕ್ತಿಯ ದೈವವಲ್ಲ.. ತ್ರಿವಿಕ್ರಮ್ ಸಪಲ್ಯ ನಿರ್ಮಾಪಕರಾಗಿ ಮತ್ತು ಸುಧೀರ ಅತ್ತಾವರ ನಿರ್ದೇಶನದಲ್ಲಿ ತ್ರಿವಿಕ್ರಮ್ ಸಿನೆಮಾಸ್ ಮತ್ತು ಸಕ್ಸೆಸ್ ಫಿಲ್ಮ್ಸ್‌ ಲಾಂಛನದಡಿಯಲ್ಲಿ ಅದ್ದೂರಿಯಾಗಿ ಸಿದ್ಧಗೊಂಡಿರುವ ಈ ಚಿತ್ರವು ತುಳುನಾಡಿನ ಸಕಲರೂ ನಂಬುವ ೮೦೦ ವರ್ಷಗಳ ಹಿಂದೆ ಮನುಷ್ಯನಾಗಿ ಕೊರಗ ಸಮಾಜದಲ್ಲಿ ಹುಟ್ಟಿ ಸತ್ಕಾರ್ಯಗಳನ್ನು ಮಾಡುತ್ತ ಬದುಕಿ ಅಲೌಕಿಕ ಶಕ್ತಿಯನ್ನು ತನ್ನದಾಗಿಸಿಕೊಂಡು ದೈವತ್ವಕ್ಕೇರಿದ ಕೊರಗಜ್ಜ ಎಂಬ ದೈವದ ಕುರಿತಾಗಿದೆ.
೮೦೦ ವರ್ಷಗಳಷ್ಟು ಹಳೆಯ ಕಥೆ.‌ ಸಮಾಜದ ಮುಖ್ಯ ವಾಹಿನಿಯಿಂದ ಬಹುದೂರ ಉಳಿದ ಕೊರಗ ಸಮಾಜದ ಆಡು ಭಾಷೆ ತುಳುವಾದರೂ ಇತರರ ತುಳಿವಿಗಿಂತ ಪೂರ್ತಿ ಭಿನ್ನವಾದ, ಸುಲಭದಲ್ಲಿ ಅರ್ಥವಾಗದ ಒಂದು ಭಾಷೆ. ಸಾಂಸ್ಕೃತಿಕವಾಗಿ ಶ್ರಿಮಂತವಾದ ಒಂದು ವರ್ಗ ಅವರದ್ದು.‌ ಕೊರಗಜ್ಜ ಐತಿಹಾಸಿಕ ವ್ಯಕ್ತಿಯಾದರೂ ದೈವತ್ವಕ್ಕೇರಿ ಜನರಿಂದ ಆರಾಧಿಸಲ್ಪಟ್ಟ ನಂತರ ಅತನ ಜೀವನ ಚರಿತ್ರೆಗೆ ಸಂಬಂಧಿಸಿ ನೂರಾರು ರೆಕ್ಕೆಪುಕ್ಕಗಳು ಹುಟ್ಟಿಕೊಂಡಿರಬಹುದು. ಅವೆಲ್ಲವನ್ನೂ ಕೂಲಂಕುಷವಾಗಿ ಅಧ್ಯಯನ ಮಾಡಿ ಜನರಿಂದ ಸಂಗ್ರಗಿಸಿ ಒಂದು ಚಿತ್ರಕಥೆ ಬರೆದಿದ್ದಾರೆ ಸುಧೀರ ಅತ್ತಾವರ ಅವರು.‌ ಜನರು ಕರುಣಾಳುವೆಂದು ಕೊಂಡಾಡುವ ಕೊರಗಜ್ಜನ ಕುರಿತು ಚಿತ್ರ ಮಾಡುವುದು ಒಂದು ಮಹಾ ಪುಣ್ಯದ ಕೆಲಸವೆಂದು ದೃಡವಾಗಿ ನಂಬಿ ಮೂರು ವರ್ಷಗಳಿಂದ ಸತತವಾಗಿ ಹಗಲಿರುಳೆನ್ನದೆ ದುಡಿಯುತ್ತಿದ್ದಾರೆ. ಮುಂಬಯಿನ ಎಂಜಿನಿಯರ್ ವಿದ್ಯಾಧರ್ ಶೆಟ್ಟಿಯವರು ಇವರ ಹೆಗಲಿಗೆ ಹೆಗಲು ಕೊಟ್ಟು ಸಹಕರಿಸುತ್ತಿದ್ದಾರೆ. ಈಗ ಭಾರತದ ಆರು ಭಾಷೆಗಳಲ್ಲಿ (ತುಳು, ಕನ್ನಡ, ತಮಿಳು, ಮಲೆಯಾಳ, ತೆಲುಗು ಮತ್ತು ಹಿಂದಿ) ಚಿತ್ರವು ಸಿದ್ಧವಾಗಿ Pan-India ಚಿತ್ರವಾಗಿ ನವೆಂಬರ್ ತಿಂಗಳ ಕೊನೆಗೆ ತೆರೆ ಕಾಣಲಿದೆ.
ಸುಧೀರ ಅತ್ತಾವರ್ ಈ ಹಿಂದೆ ತಮ್ಮ ಚಿತ್ರ ಸಂಗೀತ ರಚನೆಗೆ ರಾಷ್ಟ್ರಪ್ರಶಸ್ತಿ ಪಡೆದವರು. ‘ಕೊರಗಜ್ಜ’ ಚಿತ್ರಕ್ಕೆ ಅವರು ಬರೆದ ಹಾಡುಗಳಿಗೆ ಭಾರತದ ಪ್ರಸಿದ್ಧ ಸಂಗೀತ ಸಂಯೋಜಕರಾದ ಗೋಪಿ ಸುಂದರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಪ್ರಸಿದ್ಧ ಹಿನ್ನೆಲೆ ಗಾಯಕರಾದ ಹರಿಹರನ್ ಮತ್ತು ಚಿತ್ರಾ ಮತ್ತು ಬಾಲಿವುಡ್ ತಾರೆ ಶಾರೂನ್ ಪ್ರಭಾಕರ್ ಹಾಡುಗಳಿಗೆ ಕಂಠದಾನ ಮಾಡಿದ್ದಾರೆ. ಬಾಲಿವುಡ್ ನ ಪ್ರಸಿದ್ಧ ಚಿತ್ರನಟ ಕಬೀರ್ ಬೇಡಿ, ಕನ್ನಡದ ತಾರಾ ಮತ್ತು ಶ್ರುತಿ ತಾರಾಗಣದಲ್ಲಿದ್ದಾರೆ.
ಚಿತ್ರನಿರ್ಮಾಣದ ಹಂತದಲ್ಲಿಯೇ ತಂಡವು ನೂರಾರು ಅಡೆತಡೆಗಳನ್ನು ಎದುರಿಸಿತ್ತು. ತುಳುನಾಡಿನ ಸ್ಥಳೀಯರೇ ದೈವದ ಕುರಿತಾಗಿ ಚಿತ್ರ ತೆಗೆಯುವುದರ ವಿರುದ್ಧ ತಮ್ಮ ತೀವ್ರ ವಿರೋಧ ವ್ಯಕ್ತ ಪಡಿಸಿದ್ದರು. ಆದರೆ ನಿರ್ಮಾಪಕರಾಗಲಿ ನಿರ್ದೇಶಕರಾಗಲಿ ಇದರಿಂದ ಸ್ವಲ್ಪವೂ ಹಿಂಜರಿಯದೆ ದೈರ್ಯದಿಂದ ಮುನ್ನುಗ್ಗಿ ಕೆಲಸ ಮಾಡಿ ಚಿತ್ರದ ನಿರ್ಮಾಣವನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ಚಿತ್ರದ first look & 3D posterನ್ನು ನೋಡಿದವರು ಇದೊಂದು ಕೊರಗಜ್ಜನ ಭಕ್ತರಿಗೆ ದೈವಿ ಅನುಭವ ನೀಡುವ ಮತ್ತು ರೋಮಾಂಚನಗೊಳಿಸುವ ಅದ್ಭುತ ಚಿತ್ರವಾಗಿ ಹೊರಹೊಮ್ಮಿ ಭರ್ಜರಿ ಯಶಸ್ಸು ಪಡೆಯುತ್ತದೆ ಎಂಬ ಭರವಸೆಯನ್ನಿತ್ತಿದ್ದಾರೆ. ಮುಂದೆನಾಗುತ್ತದೋ ಕಾದು ನೋಡಬೇಕು.

ಡಾ.ಪಾರ್ವತಿ ಜಿ.ಐತಾಳ್

Categories
ಕರಾವಳಿ ಸುದ್ದಿ

ಎಂ.ಆ‌ರ್.ಪಿ.ಎಲ್‌. ಸಿ. ಎಸ್. ಆರ್ ಫಂಡ್‌ನಿಂದ 12.45ಲಕ್ಷ ರೂಪಾಯಿ ಅನುದಾನ

ಕಾಪು :ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ಮಲ್ಲಾರು ಆಯುಷ್ಕಾನ್ ಆರೋಗ್ಯ ಕೇಂದ್ರದ ದುರಸ್ತಿ ಕಾಮಗಾರಿಗಳಿಗೆ ಶಾಸಕರ ಶಿಫಾರಸ್ಸಿನ ಮೇರೆಗೆ ಎಂ.ಆ‌ರ್.ಪಿ.ಎಲ್‌. ಸಿ. ಎಸ್. ಆರ್ ಫಂಡ್‌ನಿಂದ 12.45ಲಕ್ಷ ರೂಪಾಯಿ ಅನುದಾನ ಮಂಜೂರಾಗಿದ್ದು ಈ ಕಾಮಗಾರಿಗೆ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಕಾಪು ಪುರಸಭೆಯ ಅಧ್ಯಕ್ಷರಾದ ಹರೀಣಾಕ್ಷಿ ದೇವಾಡಿಗ, ಉಪಾಧ್ಯಕ್ಷರಾದ ಸರೀತಾ ಶಿವಾನಂದ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಅನಿಲ್ ಕುಮಾರ್, ತಾಲ್ಲೂಕು ವೈದ್ಯಾಧಿಕಾರಿಗಳಾದ ವಾಸುದೇವ ಉಪಾಧ್ಯಾಯ ಹಾಗೂ ಪುರಸಭೆಯ ಸದಸ್ಯರು ಉಪಸ್ಥಿತರಿದ್ದರು.

Categories
ಕರಾವಳಿ ಸುದ್ದಿ

ರಾತ್ರೋರಾತ್ರಿ ವ್ಯಕ್ತಿಯೊಬ್ಬರ ಖಾತೆಯಿಂದ ಹಣ ಎಗರಿಸಿದ ವಂಚಕರು

ಕುಂದಾಪುರ: ರಾತ್ರೋರಾತ್ರಿ ವ್ಯಕ್ತಿಯೊಬ್ಬರ ಖಾತೆಯಿಂದ ಸೈಬರ್ ವಂಚಕರು ಹಣ ಎಗರಿಸಿದ ಘಟನೆ ನಡೆದಿದೆ.ತೆಕ್ಕಟ್ಟೆಯ ಭಾರತ್ ಪೆಟ್ರೋಲ್ ಬಂಕ್ ಸಮೀಪದ ರಮೇಶ್ ಮರಕಾಲ ಅವರ ಖಾತೆಯಿಂದ ಮಧ್ಯರಾತ್ರಿ 12.23ರ ಸುಮಾರಿಗೆ ಐಎಂಪಿಎಸ್ ಮೂಲಕ ಯೂನಿಯನ್ ಬ್ಯಾಂಕ್ ಖಾತೆಯಿಂದ 90 ಸಾವಿರ ರೂ. ಹಣ ಡ್ರಾ ಆಗಿದೆ.

ಯಾವುದೇ ಒಟಿಪಿ ವಿನಂತಿ ಇಲ್ಲ, ಯಾವುದೇ ಅನಧಿಕೃತ ಆ್ಯಪ್ ಡೌನ್ ಲೋಡ್ ಮಾಡಿಲ್ಲ. ನಿದ್ದೆಯಲ್ಲಿದ್ದ ವೇಳೆ, ಮೊಬೈಲ್ ಉಪಯೋಗ ಕೂಡ ಮಾಡದೇ ಇದ್ದ ಸಂದರ್ಭದಲ್ಲಿ ಬ್ಯಾಂಕ್ ಖಾತೆಯಲ್ಲಿದ್ದ ಹಣ ಡ್ರಾ ಆಗಿದ್ದು ಗಾಬರಿಗೊಂಡ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Categories
ಕರಾವಳಿ ಸುದ್ದಿ

ದನಗಳನ್ನು ಕಳವು ಮಾಡಿಕೊಂಡು ಬಂದು ಗೋಮಾಂಸ: ಪೊಲೀಸರು ದಾಳಿ

ಬೆಳ್ತಂಗಡಿ: ಇಂದಬೆಟ್ಟು ಗ್ರಾಮದ ಬೆದ್ರಬೆಟ್ಟು ಚರ್ಚ್ ಬಳಿ ದನಗಳನ್ನು ಕಳವು ಮಾಡಿಕೊಂಡು ಬಂದು ಗೋಮಾಂಸ ಮಾಡುತ್ತಿದ್ದಾಗ ಬೆಳ್ತಂಗಡಿ ಪೊಲೀಸರು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿ, ದನದ ಮಾಂಸ ಮತ್ತು ಪರಿಕರಗಳನ್ನು ವಶಪಡಿಸಿಕೊಂಡ ಘಟನೆ ನಡೆದಿದೆ.ಬಂಧಿತ ಆರೋಪಿಗಳನ್ನು ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದ ಬೆದ್ರಬೆಟ್ಟು ನಿವಾಸಿ ಅಬ್ದುಲ್ ನಝೀರ್ ಮತ್ತು ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದ ಝಕಾರಿಯಾ ಎಂದು ಗುರುತಿಸಲಾಗಿದೆ.

ಖಾಸಗಿ ರಬ್ಬರ್ ತೋಟದ ಶೆಡ್ ಒಳಗಡೆ ಅಕ್ರಮವಾಗಿ ಜಾನುವಾರು ಕಡಿದು ಮಾಂಸ ಮಾಡುತ್ತಿದ್ದಾಗ ಬೆಳ್ತಂಗಡಿ ಪೊಲೀಸರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.ದಾಳಿ ವೇಳೆ 91 ಕೆ.ಜಿ ದನದ ಮಾಂಸ ಹಾಗೂ ಪರಿಕರಗಳನ್ನು ವಶಪಡಿಸಿಕೊಂಡಿದ್ದು ಗೋಮಾಂಸ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.ಈ ಬಗ್ಗೆ ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Categories
ಕರಾವಳಿ ಸುದ್ದಿ

ಮೀನು ಸಾಗಾಟದ ಪಿಕಪ್ ವಾಹನ ಪಲ್ಟಿ :ಮೂವರು ಗಾಯ

ಮಂಗಳೂರು: ಜಪ್ಪಿನಮೊಗರು ನೇತ್ರಾವತಿ ಸೇತುವೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮೀನು ಸಾಗಾಟದ ಪಿಕಪ್ ವಾಹನ ಪಲ್ಟಿ ಹೊಡೆದು ಮೂವರು ಗಾಯಗೊಂಡ ಘಟನೆ ಸಂಭವಿಸಿದೆ.

ಗಾಯಗೊಂಡವರು ವಾಹನದ ಚಾಲಕ ರತೀಶ್ (38), ವಾಹನದಲ್ಲಿದ್ದ ಶೈಲಜಾ (57) ಮತ್ತು ಶಾರದಾ(60) ಎಂದು ತಿಳಿದು ಬಂದಿದೆ.

ಗಾಯಗೊಂಡವರನ್ನು ನಗರದ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ. ಬೆಳಗ್ಗೆ 6 ಗಂಟೆಯ ಹೊತ್ತಿಗೆ ಮೀನು ಸಾಗಾಟದ ಪಿಕಪ್ ಮಂಗಳೂರಿನಿಂದ ಕೇರಳದ ತಲಪಾಡಿ ಕಡೆಗೆ ಹೋಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾಗಿ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Categories
ಕರಾವಳಿ ಸುದ್ದಿ

ಸಿಟಿ ಬಸ್ ನಿಯಂತ್ರಣ ಕಳೆದುಕೊಂಡು ಡಿವೈಡರ್‌ಗೆ ಡಿಕ್ಕಿ

ಮಂಗಳೂರು: ನಂತೂರು ಸಮೀಪ ಸಿಟಿ ಬಸ್ ನಿಯಂತ್ರಣ ಕಳೆದುಕೊಂಡು ಡಿವೈಡರ್‌ಗೆ ಗುದ್ದಿದ ಘಟನೆ ನಡೆದಿದ್ದು, ಅದೃಷ್ಟವಶಾತ್ ಯಾರಿಗೂ ಅಪಾಯ ಉಂಟಾಗಿಲ್ಲ.

ವಾಮಂಜೂರು ಕಡೆಯಿಂದ ಬರುತ್ತಿದ್ದ ಸಾಯೀಷ ಹೆಸರಿನ 3 ನಂಬರಿನ ಸಿಟಿ ಬಸ್ ನಂತೂರು ಸಿಗ್ನಲ್ ದಾಟಿ ಮಲ್ಲಿಕಟ್ಟೆ ಕಡೆಗೆ ವೇಗವಾಗಿ ಬರುತ್ತಿತ್ತು. ಬಸ್ ಮುಂಭಾಗ ಸ್ಕೂಲ್ ಬಸ್ ಸಾಗುತ್ತಿದ್ದು, ಹಿಂಭಾಗ ಮತ್ತೊಂದು ಲೋಕಲ್‌ ಬಸ್ ಸಾಗುತ್ತಿತ್ತು ಎನ್ನಲಾಗಿದೆ. ಇದೇ ವೇಳೆ ಬಸ್‌ನ ಸ್ಟೇರಿಂಗ್ ಲಾಕ್‌ನ ಎಂಡ್ ಕಟ್ ಆಗಿ, ಟೈರ್ ನಿಯಂತ್ರಣ ಕಳೆದುಕೊಂಡು ಚಾಲಕನ ಕೈಯಿಂದ ಗುರಿತಪ್ಪಿದ ಬಸ್ ಡಿವೈಡರ್‌ಗೆ ಢಿಕ್ಕಿ ಹೊಡೆದಿದ್ದು, ಇದರಿಂದ ಬೀದಿ ದೀಪದ ಕಂಬವೊಂದು ಉರುಳಿ ಬಿದ್ದಿದೆ. ಬಸ್‌ನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಬಸ್‌ನಲ್ಲಿದ್ದ ಪ್ರಯಾಣಿಕರು ಬೆಚ್ಚಿಬಿದ್ದಿದ್ದಾರೆ.

ರಸ್ತೆಯ ವಿರುದ್ಧ ಭಾಗದಲ್ಲೂ ಸಾಕಷ್ಟು ವಾಹನಗಳು ಸಾಗುತ್ತಿದ್ದು, ಅದೃಷ್ಟವಶಾತ್ ಯಾರಿಗೂ ಅಪಾಯ ಉಂಟಾಗಿಲ್ಲ. ಟ್ರಾಫಿಕ್ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸಿ ಟ್ರಾಫಿಕ್ ನಿಯಂತ್ರಿಸಿದ್ದಾರೆ. ಬಸ್ಸನ್ನು ಜೆಸಿಬಿ ಮೂಲಕ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಲಾಯಿತು

Categories
ಕರಾವಳಿ ಸುದ್ದಿ

ಅ.31ರಂದು ಸರ್ದಾರ್ ವಲ್ಲಭಬಾಯಿ ಪಠೇಲ್ 150ನೇ ಜನ್ಮ ದಿನಾಚರಣೆ : ಜಿಲ್ಲಾ ಬಿಜೆಪಿ ವತಿಯಿಂದ ‘ಏಕತಾ ನಡಿಗೆ’

ಉಡುಪಿ :ಭಾರತದ ಮೊದಲ ಉಪ ಪ್ರಧಾನಿ ಹಾಗೂ ಗೃಹ ಸಚಿವ, ರಾಷ್ಟ್ರೀಯ ಏಕೀಕರಣದ ರೂವಾರಿ, ‘ಉಕ್ಕಿನ ಮನುಷ್ಯ’ ಸರ್ದಾರ್ ವಲ್ಲಭಬಾಯಿ ಪಠೇಲ್ ಅವರ 150ನೇ ಜನ್ಮ ದಿನಾಚರಣೆಯ ಅಂಗವಾಗಿ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಬಿಜೆಪಿ ಉಡುಪಿ ನಗರದ ಸಹಯೋಗದೊಂದಿಗೆ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಅವರ ನೇತೃತ್ವದಲ್ಲಿ ‘ಏಕತಾ ನಡಿಗೆ’ಯು ಅ.31 ಶುಕ್ರವಾರ ಬೆಳಿಗ್ಗೆ ಗಂಟೆ 7.30ಕ್ಕೆ ಉಡುಪಿ ಕಲ್ಸಂಕ ರಾಜಾಂಗಣ ಪಾರ್ಕಿಂಗ್ ರಸ್ತೆಯ ಬಳಿಯಿಂದ ಕಡಿಯಾಳಿಯ ಬಿಜೆಪಿ ಜಿಲ್ಲಾ ಕಛೇರಿಯ ವರೆಗೆ ನಡೆಯಲಿದೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ ಹೆರ್ಗ ತಿಳಿಸಿದರು.

ಅವರು ಬಿಜೆಪಿ ಉಡುಪಿ ಜಿಲ್ಲಾ ಕಛೇರಿಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕಿರಣ್ ಕುಮಾರ್ ಬೈಲೂರು ಅವರ ಅಧ್ಯಕ್ಷತೆಯಲ್ಲಿ ನಡೆದ ‘ಏಕತಾ ನಡಿಗೆ’ಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಸಂಸದರು, ಶಾಸಕರು, ಪಕ್ಷದ ಪ್ರಮುಖರು ಪಾಲ್ಗೊಳ್ಳಲಿದ್ದು, ಪಕ್ಷದ ಎಲ್ಲಾ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು, ಕಾರ್ಯಕರ್ತರು ಮತ್ತು ಪಕ್ಷದ ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸರ್ದಾರ್ ಪಠೇಲ್ ಅವರ ಗೌರವಾರ್ಥ ನಡೆಯುವ ‘ಏಕತಾ ನಡಿಗೆ’ಯನ್ನು ಯಶಸ್ವಿಗೊಳಿಸಬೇಕು ಎಂದು ಅವರು ವಿನಂತಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರೇಷ್ಮಾ ಉದಯ ಶೆಟ್ಟಿ, ಶ್ರೀಕಾಂತ್ ನಾಯಕ್, ಜಿಲ್ಲಾ ಕಾರ್ಯದರ್ಶಿಗಳಾದ ಗಿರೀಶ್ ಎಮ್. ಅಂಚನ್, ಶಿವಕುಮಾರ್ ಅಂಬಲಪಾಡಿ, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸಂಧ್ಯಾ ರಮೇಶ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ಬಿಜೆಪಿ ಉಡುಪಿ ನಗರ ಪ್ರಧಾನ ಕಾರ್ಯದರ್ಶಿಗಳಾದ ಜಗದೀಶ್ ಆಚಾರ್ಯ ಕಪ್ಪೆಟ್ಟು, ರಶ್ಮಿತಾ ಬಿ. ಶೆಟ್ಟಿ ಉಪಸ್ಥಿತರಿದ್ದರು.