Categories
ಬ್ರೇಕಿಂಗ್ ನ್ಯೂಸ್

ಪರುಶುರಾಮ ಥೀಮ್‌ ಪಾರ್ಕ್‌ನಲ್ಲಿ ಕಳ್ಳತನ

ಕಾರ್ಕಳ : ಬೈಲೂರು ಪರಶುರಾಮ ಥೀಂ ಪಾರ್ಕ್ ನ ಬಾಗಿಲನ್ನು ಒಡೆದು ಒಳನುಗ್ಗಿದ ದುಷ್ಕರ್ಮಿಗಳು ಮೇಲ್ಛಾವಣಿಗೆ ಅಳವಡಿಸಿದ್ದ ತಾಮ್ರದ ಹೊದಿಕೆಯನು ಕಿತ್ತು ಕಳ್ಳತನ ಮಾಡಿದ್ದಾರೆ ಎಂದು ಶಾಸಕ ಸುನಿಲ್‌ ಕುಮಾರ್‌ ಗಂಭೀರ ಆರೋಪ ಮಾಡಿದ್ದಾರೆ.ಈ ಕುರಿತು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಸುನಿಲ್‌ ಕುಮಾರ್‌, ಕಾರ್ಕಳದ ಇತಿಹಾಸದಲ್ಲಿ ಇದೊಂದು ದುರ್ದಿನ ಎಂದು ಭಾವಿಸುತ್ತೇನೆ. ನಮ್ಮ ಕ್ಷೇತ್ರವನ್ನು ರಾಜ್ಯದ ಶ್ರೇಷ್ಠ ಪ್ರವಾಸಿ ತಾಣವಾಗಿ ರೂಪಿಸಬೇಕೆಂಬ ಕನಸಿನೊಂದಿಗೆ ಪ್ರಾರಂಭಿಸಿದ ಈ ಮಹತ್ವಾಕಾಂಕ್ಷಿ ಯೋಜನೆ ಸ್ಥಳೀಯ ಕಾಂಗ್ರೆಸ್ ಮುಖಂಡ ಉದಯ ಕುಮಾರ್ ಶೆಟ್ಟಿಯವರ ದ್ವೇಷ ಹಾಗೂ ಅಸೂಯೆಯ ರಾಜಕಾರಣಕ್ಕೆ ಬಲಿಯಾಗಿ ಹೋಯ್ತು. ಕಳೆದ ಎರಡು ವರ್ಷದಿಂದ ಈ ಯೋಜನೆಯ ಅಭಿವೃದ್ಧಿಗೆ ಬಿಡಿಕಾಸು ಬಿಡುಗಡೆಯಾಗದಂತೆ ಮಾಡಿ ಪರಶುರಾಮ ಥೀಂ ಪಾರ್ಕ್ ಅಕ್ಷರಶಃ ಪಾಳು ಬಿದ್ದು ಹೋಗುವಂತೆ ಮಾಡಿದ್ದಾರೆ. ಪ್ರವಾಸಿಗರು, ವಿದ್ಯಾರ್ಥಿಗಳು ಭೇಟಿ ಕೊಟ್ಟು ನಳನಳಿಸಬೇಕಿದ್ದ ಈ ಪ್ರವಾಸಿ ತಾಣ ಕಾಂಗ್ರೆಸ್ ನಾಯಕರ ರಾಜಕೀಯದಾಟದಿಂದಾಗಿ ಇಂದು ಕಳ್ಳರು ನುಗ್ಗಿ ಮೇಲ್ಛಾವಣಿಯನ್ನೇ ಕದ್ದೊಯ್ಯುವ ಸ್ಥಿತಿ ನಿರ್ಮಾಣವಾಗಿದೆ ಎಂದು ಬರೆದುಕೊಂಡಿದ್ದಾರೆ.ಬಹುಶಃ ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಉದಯ ಕುಮಾರ್ ಶೆಟ್ಟಿಯವರ ಹೊಟ್ಟೆ ಇಂದು ತಣ್ಣಗಾಗಿರಬಹುದು. ಮುಂದಿನ ಚುನಾವಣೆಯವರೆಗೂ ಪರಶುರಾಮ ಥೀಂ ಪಾರ್ಕ್ ಯೋಜನೆಯನ್ನು ಜೀವಂತವಾಗಿ ಇಡಬೇಕೆಂದು ಕಾರ್ಕಳಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಅವರು ಕಾರ್ಕಳ ಕಾಂಗ್ರೆಸ್ ಪಟಾಲಂಗೆ ಫತ್ವಾ ಕೊಟ್ಟಿದ್ದರು.ಅದರ ಫಲವಾಗಿ ಘಜ್ನಿ, ಘೋರಿಗಳು ಹಿಂದು ಶ್ರದ್ಧಾ ಕೇಂದ್ರಗಳನ್ನು ಧ್ವಂಸ ಮಾಡಿದ ರೀತಿ ಥೀಂ ಪಾರ್ಕ್ ನಲ್ಲಿ ಕಳ್ಳತನವನ್ನೂ ನಡೆಸಿ ಪಾಳು ಬೀಳಿಸಿದರು. ಅಷ್ಟಕ್ಕೂ ಈ ಪ್ರಕರಣದಲ್ಲಿ ಜಿಲ್ಲಾಡಳಿತದ ವೈಫಲ್ಯ ಎದ್ದು ಕಾಣುತ್ತಿದೆ. ಥೀಂ ಪಾರ್ಕ್ ಗೆ ಸಾರ್ವಜನಿಕ ಪ್ರವೇಶವನ್ನು ನಿರಾಕರಿಸಿ (ಸೆ.2023) ಸ್ಥಳೀಯ ಆಡಳಿತ ಆದೇಶ ಹೊರಡಿಸಿದ್ದರೂ ಕೆಲವರು ಕಾನೂನು ಬಾಹಿರವಾಗಿ ಅಲ್ಲಿಗೆ ನುಗ್ಗಿ ವಿಡಿಯೋ ಚಿತ್ರೀಕರಣ ನಡೆಸಿದ್ದರು. ‌ಇದೆಲ್ಲದರ ಮಧ್ಯೆಯೇ ಕಳ್ಳತನ ನಡೆದಿದೆ. ಈ ಹಿನ್ನೆಲೆಯಲ್ಲಿ ವಿಡಿಯೋ ಮಾಡಿದವರನ್ನೂ ವಿಚಾರಣೆಗೆ ಒಳಪಡಿಸುವ ಜತೆಗೆ ಕಳ್ಳತನ ನಡೆಸಿದ ದುಷ್ಕರ್ಮಿಗಳನ್ನು ಬಂಧಿಸುವಂತೆ ಆಗ್ರಹಿಸುತ್ತೇನೆ. ಕಾರ್ಕಳದ ಪ್ರವಾಸೋದ್ಯಮಕ್ಕೆ ಕೊಳ್ಳಿ ಇಟ್ಟ ಕಾಂಗ್ರೆಸ್ ನಾಯಕರನ್ನು ಇತಿಹಾಸ ಕ್ಷಮಿಸದು ಎಂದು ಸುನಿಲ್‌ ಕುಮಾರ್‌ ಪೋಸ್ಟ್‌ನಲ್ಲಿ ಹಾಕಿರುವ ಪೋಸ್ಟ್‌ ನಲ್ಲಿ ಹಂಚಿಕೊಂಡಿದ್ದಾರೆ.

Categories
ಬ್ರೇಕಿಂಗ್ ನ್ಯೂಸ್

ಅಂಪಾರು ಸಹಕಾರಿ ವ್ಯವಸಾಯಿಕ ಸಂಘ : ಕೋಟ್ಯಾಂತರ ರೂಪಾಯಿ ಹಣ ವಂಚನೆ

ಕುಂದಾಪುರ: ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯ ಅಂಪಾರು ಸಹಕಾರಿ ವ್ಯವಸಾಯಿಕ ಸಂಘ (ನಿ)ದಲ್ಲಿ ಭಾರೀ ಹಣಕಾಸು ಅವ್ಯವಹಾರ ಬೆಳಕಿಗೆ ಬಂದಿದ್ದು, ಆರೋಪಿ ಸದಾಶಿವ ವೈದ್ಯನನ್ನು ಶಂಕರನಾರಾಯಣ ಪೊಲೀಸರು ಬಂಧಿಸಿದ್ದಾರೆ.

2023–24ನೇ ಸಾಲಿನಲ್ಲಿ ಸಂಘದ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಆರೋಪಿ ಸದಾಶಿವ ವೈದ್ಯ ತನ್ನ ಹುದ್ದೆಯ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಸಂಘದ ಹಣವನ್ನು ಅಕ್ರಮವಾಗಿ ಬಳಕೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಆರೋಪಿಯು ಬಡ್ಡಿ ಖಾತೆಗಳಿಗೆ ನಕಲಿ ಖರ್ಚು ದಾಖಲಿಸಿ, ನಕಲಿ ಠೇವಣಿ ಖಾತೆಗಳನ್ನು ಸೃಷ್ಟಿಸಿ, ಉಳಿತಾಯ ಖಾತೆಗಳಲ್ಲಿ ಅವ್ಯವಹಾರ ನಡೆಸಿ ಒಟ್ಟು ₹3,95,65,000 ಮೊತ್ತದ ಹಣವನ್ನು ತನ್ನ ಸ್ವಂತಕ್ಕೆ ಬಳಸಿಕೊಂಡಿದ್ದಾನೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.

ಸಂಘದ ಕಂಪ್ಯೂಟರ್ ದಾಖಲೆಗಳಲ್ಲಿ “ವೈದ್ಯ” ಹಾಗೂ “ಮ್ಯಾನೇಜರ್” ಎಂಬ ಪಾಸ್ವರ್ಡ್‌ಗಳ ಮೂಲಕ ಹೊಂದಾಣಿಕೆ ಲೆಕ್ಕಗಳನ್ನು ದಾಖಲಿಸಲಾಗಿದ್ದು, ಅವುಗಳನ್ನು ಆರೋಪಿ ಬಳಸುತ್ತಿದ್ದನು ಎಂಬುದು ತನಿಖೆಯಿಂದ ಬಟಾಬಯಲಾಗಿದೆ. ಇದಲ್ಲದೆ, ಆರೋಪಿಯು ನಕಲಿ ಠೇವಣಿ, ಉಳಿತಾಯ ಹಾಗೂ ಸಾಲ ಖಾತೆಗಳನ್ನು ತನ್ನ ಸಂಬಂಧಿಕರಿಗೆ ಸೇರಿದ ಖಾತೆಗಳ ಮೂಲಕ ತೆರೆದು ಸಂಘದ ಹಣವನ್ನು ಪಡೆದುಕೊಂಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಸಂಸ್ಥೆಯ ನಿರ್ದಿಷ್ಟ ಠೇವಣಿ ಕುಳುವಾರು ಪರಿಶೀಲನೆಯ ವೇಳೆ ಈ ಅಕ್ರಮಗಳು ಪತ್ತೆಯಾಗಿದ್ದು, ಈ ಬಗ್ಗೆ ಸಂಘದ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿರುವ ಪ್ರವೀಣ ಕುಮಾರ್ ಶೆಟ್ಟಿ ಅವರು ದೂರು ದಾಖಲಿಸಿದ್ದಾರೆ.

ಸಂಸ್ಥೆ ಹಾಗೂ ಗ್ರಾಹಕರಿಗೆ ವಂಚನೆ ಮಾಡುವ ಉದ್ದೇಶದಿಂದ ನಕಲಿ ಪಾಸ್ವರ್ಡ್‌ಗಳನ್ನು ಸೃಷ್ಟಿಸಿ ಕೋಟ್ಯಾಂತರ ರೂಪಾಯಿ ಹಣವನ್ನು ದುರುಪಯೋಗ ಪಡಿಸಿಕೊಂಡಿರುವ ಆರೋಪದಡಿ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 01/2026ರಂತೆ ಕಲಂ 314, 228, 316(4), 316(5), 319(1), 319(2), 318(2), 318(3), 318(4) BNS ಅಡಿಯಲ್ಲಿ ಪ್ರಕರಣ ದಾಖಲಿಸಿಕೊಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

Categories
ಬ್ರೇಕಿಂಗ್ ನ್ಯೂಸ್

ಕಂಬಳದಲ್ಲಿ ಬಹುಮಾನ ಗೆದ್ದ ಹಣಕ್ಕಾಗಿ ಪೀಡಿಸುತ್ತಿದ್ದ ಮೂವರು ಆರೋಪಿಗಳು ವಶಕ್ಕೆ

ಮೂಲ್ಕಿ : ಮೂಲ್ಕಿ ಕಂಬಳದಲ್ಲಿ ಬಹುಮಾನ ಗೆದ್ದ ಕೋಣಗಳ ಮಾಲಕರಿಗೆ ಹಣಕ್ಕಾಗಿ ಪೀಡಿಸುತ್ತಿದ್ದ ಮೂವರು ಆರೋಪಿಗಳನ್ನು ಮೂಲ್ಕಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಶ್ಯಾಮ ಸುಂದರ್ ಶೆಟ್ಟಿ, ಅಕ್ಷಯ್ ಪೂಜಾರಿ ಹಾಗೂ ಸುವಿನ್ ಕಾಂಚನ್ ಬಂಧಿತರು. ಅಂಗಾರಕಟ್ಟೆ ಕೆಂಚನಕೆರೆ ನಿವಾಸಿ ಸಂಶುದ್ದೀನ್ ಅವರಿಗೆ ಈ ಮೂವರು ಆರೋಪಿಗಳು ಹಣಕ್ಕಾಗಿ ಬೇಡಿಕೆ ಇಟ್ಟಿರುವುದಾಗಿ ತಿಳಿದು ಬಂದಿದೆ. ಸಂಶುದ್ದೀನ್ ಅವರು ಮುಂಬೈಯಲ್ಲಿ ನೆಲೆಸಿರುವ ಉದ್ಯಮಿಯೊಬ್ಬರಿಗೆ ಸೇರಿದ ಗದ್ದೆ, ತೋಟ ಹಾಗೂ ಮನೆಯನ್ನು ನೋಡಿಕೊಳ್ಳುತ್ತಿದ್ದರು.

ಮೂಲ್ಕಿ ಅರಸು ಕಂಬಳದಲ್ಲಿ ಸಂಶುದ್ದೀನ್ ತಂದಿದ್ದ ಕೋಣಗಳಿಗೆ ಬಹುಮಾನ ಲಭಿಸಿದ್ದು, ಅದರಲ್ಲಿ ದೊರೆತ ಬಂಗಾರದ ಸರ ಹಾಗೂ ಹಣವನ್ನು ನೀಡುವಂತೆ ಆರೋಪಿಗಳು ಬೆದರಿಕೆಯೊಡ್ಡಿದ್ದಾರೆ.

ಅಲ್ಲದೇ ನೀನು ದನಗಳನ್ನು ಕಡಿಯಲು ಕಸಾಯಿಖಾನೆಗೆ ಕೊಡುತ್ತೀಯಲ್ಲ ಎಂದು ಬೆದರಿಕೆಯೊಡ್ಡಿದ್ದಾರೆ ಎಂದು ಆರೋಪಿಸಲಾಗಿದೆ. ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

Categories
ಕರಾವಳಿ ಸುದ್ದಿ

ಉಡುಪಿ ನಗರಸಭೆಯ ಮಾಜಿ ಉಪಾಧ್ಯಕ್ಷೆ ಇಂದಿರಾ ಶೇಖರ್ ಕಲ್ಮಾಡಿ ನಿಧನಕ್ಕೆ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಸಂತಾಪ

ಉಡುಪಿ : ನಗರ ಸಭಾ ವ್ಯಾಪ್ತಿಯ ಕಲ್ಮಾಡಿ ವಾರ್ಡ್ ನಲ್ಲಿ ಬಿಜೆಪಿಯ ಮೊದಲ ನಗರ ಸಭಾ ಸದಸ್ಯೆಯಾಗಿ, ಕಲ್ಮಾಡಿ ವಾರ್ಡಿನಲ್ಲಿ ಪಕ್ಷಕ್ಕೆ ಭದ್ರ ಬುನಾದಿಯನ್ನು ಹಾಕಿ ಕೊಟ್ಟ ಉಡುಪಿ ನಗರ ಸಭೆಯ ಮಾಜಿ ಉಪಾಧ್ಯಕ್ಷೆ ಇಂದಿರಾ ಶೇಖರ್ ಕಲ್ಮಾಡಿ ಅವರ ನಿಧನಕ್ಕೆ ಉಡುಪಿ ಜಿಲ್ಲಾ ಬಿಜೆಪಿ ತೀವ್ರ ಸಂತಾಪ ವ್ಯಕ್ತಪಡಿಸಿದೆ.

ಸರಳ ಸಜ್ಜನಿಕೆಯ ಕ್ರಿಯಾಶೀಲ ವ್ಯಕ್ತಿತ್ವದೊಂದಿಗೆ ಡಾ! ವಿ.ಎಸ್. ಆಚಾರ್ಯ ಅವರ ಗರಡಿಯಲ್ಲಿ ಪಳಗಿದ ಇಂದಿರಾ ಶೇಖರ್ ಅವರು ಸದಾ ಸಮಾಜ ಸೇವಾ ಚಟುವಟಿಕೆಗಳಲ್ಲಿ ನಿರತರಾಗಿ, ಜನಾನುರಾಗಿಯಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾಗಿ ಸೇವೆ ಸಲ್ಲಿಸಿರುವ ಇಂದಿರಾ ಶೇಖರ್ ಅವರು ಪಕ್ಷ ಸಂಘಟನೆಗೆ ನೀಡಿದ ಕೊಡುಗೆ ಮಹತ್ವಪೂರ್ಣ. ಅವರ ನಿಧನ ಪಕ್ಷಕ್ಕೆ ತುಂಬಲಾರದ ನಷ್ಟವೆನಿಸಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ತಿಳಿಸಿದ್ದಾರೆ.

ಅಗಲಿದ ಅವರ ದಿವ್ಯಾತ್ಮಕ್ಕೆ ಭಗವಂತನು ಚಿರ ಶಾಂತಿಯನ್ನು ಕರುಣಿಸಲಿ ಹಾಗೂ ಕುಟುಂಬಕ್ಕೆ ಅವರ ಆಗಲುವಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುವುದಾಗಿ ಕುತ್ಯಾರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Categories
ಪಂಚಾಂಗ

ಶುಭ ದಿನದ ಪಂಚಾಂಗ

ಶುಭ ದಿನದ ಪಂಚಾಂಗ

ಕಲಿಯುಗಾಬ್ದ 5127

ವಿಶ್ವಾವಸು ಸಂವತ್ಸರ

ದಕ್ಷಿಣಾಯನ

ಹೇಮಂತ: ಋತು

ಪುಷ್ಯ: ಮಾಸ

ಕೃಷ್ಣ ಪಕ್ಷ

ಬಿದಿಗೆ : ತಿಥಿ

ಪುಷ್ಯ : ನಕ್ಷತ್ರ

ಸೋಮವಾರ

05.01.2026

ಈ ದಿನ ಎಲ್ಲರಿಗೂ ಶುಭವಾಗಲಿ

Categories
ಕರಾವಳಿ ಸುದ್ದಿ

ಕೋಟೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೈಗಾರಿಕಾ ಕೇಂದ್ರಕ್ಕೆ ಭೇಟಿ

ಕೋಟೇಶ್ವರ : ಶ್ರೀ ಕಾಳಾವರ ವರದರಾಜ ಎಂ. ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜು, ಕುಂದಾಪುರ ಕೊಟೇಶ್ವರದ ವಾಣಿಜ್ಯಶಾಸ್ತ್ರ ವಿಭಾಗದ ವತಿಯಿಂದ ಅಂತಿಮ ಬಿ.ಕಾಂ. ನ ೫೦ ವಿದ್ಯಾರ್ಥಿಗಳಿಗೆ ವಿವಿಧ ಕೈಗಾರಿಕಾ ಕೇಂದ್ರಗಳಿಗೆ ಭೇಟಿ ನೀಡಿ ಅದರ ಸೂಕ್ಷ್ಮ ಅಧ್ಯಯನವನ್ನು ಮಾಡಲಾಯಿತು.
ಮಣಿಪಾಲದ ಉದಯವಾಣಿ ಮುದ್ರಣಾಲಯ ಮುಖ್ಯಸ್ಥರು ವಿದ್ಯಾರ್ಥಿಗಳ ಈ ಭೇಟಿಯಿಂದ ನೈಜ ಅಧ್ಯಯನ ಹಾಗೂ ಸಮಾಜಮುಖಿಗಳಾಗಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು. ಉದಯ ಅಲ್ಯುಮೀನಿಯಂ ಘಟಕ ಮಣಿಪಾಲದ ವ್ಯವಸ್ಥಾಪಕರಾದ ಹೇಮಂತ್ ಕುಮಾರ್ ರವರು ಅಲ್ಯುಮೀನಿಯಂ ಹಾಗೂ ಸ್ಟೀಲ್‌ನ ವಿವಿಧ ಪರಿಕರಗಳ ಉತ್ಪಾದನಾ ಹಂತಗಳನ್ನು ಸ್ಥೂಲವಾಗಿ ವಿದ್ಯಾರ್ಥಿಗಳಿಗೆ ತಿಳಿಸಿದರು.

ಉಪ್ಪೂರಿನಲ್ಲಿರುವ ಕೆ.ಎಂ.ಎಫ್.ನ ಹಾಲಿನ ಸಂಸ್ಕರಣ ಘಟಕದಲ್ಲಿ ಅಲ್ಲಿಯ ಸಿಬ್ಬಂದಿಯವರು ಹಾಲು ಹಾಗೂ ಅದರ ಸಹ – ಉತ್ಪನ್ನಗಳ ಸಂಸ್ಕರಣೆಯ ವಿವಿಧ ಮಜಲುಗಳನ್ನು ವಿವರವಾಗಿ ತಿಳಿಸಿದರು.
ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರಾದ ಡಾ. ಶೇಖರ ಬಿ. ಹಾಗೂ ಉಪನ್ಯಾಸಕರಾದ ಶೃತಿ ಆಚಾರ್ಯ ಎನ್. ಹಾಗೂ ಚೈತ್ರಾ ಹೆಚ್. ಇವರು ಈ ಭೇಟಿಯ ನೇತೃತ್ವ ವಹಿಸಿದರು.

Categories
ಪಂಚಾಂಗ

ಶುಭ ದಿನದ ಪಂಚಾಂಗ

ಶುಭ ದಿನದ ಪಂಚಾಂಗ

ಕಲಿಯುಗಾಬ್ದ 5127

ವಿಶ್ವಾವಸು ಸಂವತ್ಸರ

ದಕ್ಷಿಣಾಯನ

ಹೇಮಂತ: ಋತು

ಪುಷ್ಯ: ಮಾಸ

ಕೃಷ್ಣ ಪಕ್ಷ

ಪಾಡ್ಯ : ತಿಥಿ

ಪುನರ್ವಸು : ನಕ್ಷತ್ರ

ಭಾನುವಾರ

04.01.2026

ಈ ದಿನ ಎಲ್ಲರಿಗೂ ಶುಭವಾಗಲಿ

Categories
Uncategorized

ನಿಷೇಧಿತ ಗಾಂಜಾ ಮಾರಾಟ : ಆರೋಪಿ ಬಂಧನ

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಕಸಬಾ ಗ್ರಾಮದ ಪರ್ಲಡ್ಕ ಜಂಕ್ಷನ್‌ನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ವ್ಯಕ್ತಿಯನ್ನು ಪುತ್ತೂರು ನಗರ ಪೊಲೀಸರು ಬೆಳಗ್ಗೆ ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಪುತ್ತೂರು ಕಸಬಾ ಗ್ರಾಮದ ನಿವಾಸಿ ಮೊಹಮ್ಮದ್ ತೌಸೀಫ್ (36) ಎಂದು ಗುರುತಿಸಲಾಗಿದೆ.

ಸ್ಥಳದಲ್ಲಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಪುತ್ತೂರು ನಗರ ಪೊಲೀಸ್ ಠಾಣೆ ಪಿಎಸ್ಐ ಜನಾರ್ದನ್ ಕೆ.ಎಂ. ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಧಾವಿಸಿ ಶಂಕಿತನನ್ನು ವಿಚಾರಣೆಗಾಗಿ ವಶಕ್ಕೆ ಪಡೆದರು. ವಿಚಾರಣೆಯ ಸಮಯದಲ್ಲಿ, ನಿಷೇಧಿತ ಗಾಂಜಾ ಹೊಂದಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ.

ತಪಾಸಣೆ ನಡೆಸಿ ಆತನಿಂದ 400 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಇದರ ನಂತರ, ಮುಂದಿನ ಕಾನೂನು ಕ್ರಮಕ್ಕಾಗಿ ಆರೋಪಿಯನ್ನು ವಶಕ್ಕೆ ಪಡೆಯಲಾಯಿತು.

ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಂತರ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು, ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

Categories
ಕರಾವಳಿ ಸುದ್ದಿ

ದಕ್ಷಿಣ ಭಾರತದ ಕುಖ್ಯಾತ ಕಳ್ಳನ ಸೆರೆ

ಕಾಪು  : ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮಲ್ಲಾರು ಗ್ರಾಮದಲ್ಲಿ ನಡೆದ ಮನೆ ಕಳವು ಪ್ರಕರಣವನ್ನು ಭೇದಿಸಿರುವ ಪೊಲೀಸರು, ಕುಖ್ಯಾತ ಅಂತರ್‌ರಾಜ್ಯ ಕಳ್ಳ ಉಮೇಶ್ ಬಳೆಗಾರ @ ಉಮೇಶ್ ಪಿ @ ಉಮೇಶ್ ರೆಡ್ಡಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಯನ್ನು ತಮಿಳುನಾಡು ಮೂಲದ ಪ್ರಸ್ತುತ ಮಲ್ಲಾರು ಫಕೀರನಕಟ್ಟೆ ನಿವಾಸಿ ಉಮೇಶ್ ಬಳೆಗಾರ @ ಉಮೇಶ್ ಪಿ @ ಉಮೇಶ್ ರೆಡ್ಡಿ (47) ಎಂದು ಗುರುತಿಸಲಾಗಿದೆ.ಡಿಸೆಂಬರ್ 4, 2025ರಂದು ಹಗಲು ವೇಳೆ ಮಲ್ಲಾರು ಗ್ರಾಮದ ರಾಮನಾಥ ಕೃಪಾ ಎಂಬ ಮನೆಯ ನಿವಾಸಿ ರಾಘವೇಂದ್ರ ಕಿಣಿ ಅವರು ಮನೆಗೆ ಹೊರಗಿನಿಂದ ಬೀಗ ಹಾಕಿ ಕೀಲಿಯನ್ನು ವಿದ್ಯುತ್ ಮೀಟ‌ರ್ ಬಾಕ್ಸ್‌ನಲ್ಲಿ ಇಟ್ಟು ತೆರಳಿದ್ದರು. ಈ ಸಂದರ್ಭಕಳ್ಳರು ಮೀಟ‌ರ್ ಬಾಕ್ಸ್‌ನಲ್ಲಿದ್ದ ಕೀಲಿಯನ್ನು ಬಳಸಿ ಮನೆ ಬಾಗಿಲು ತೆರೆದು ಒಳಗಿನಿಂದ ಲಾಕ್ ಮಾಡಿಕೊಂಡು, ಬೆಡ್‌ರೂಂನ ಕಪಾಟಿನಲ್ಲಿ ಇಟ್ಟಿದ್ದ ಸುಮಾರು ₹3.90 ಲಕ್ಷ ಮೌಲ್ಯದ 72 ಗ್ರಾಂ ಚಿನ್ನದ ಆಭರಣಗಳು ಹಾಗೂ ಸುಮಾರು ₹1,500 ಮೌಲ್ಯದ ಬೆಳ್ಳಿ ವಸ್ತುಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದರು. ಈ ಕುರಿತು ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿ ಉಮೇಶ್‌ ಬಳೆಗಾರ ವಿರುದ್ಧ ಕೇರಳ, ತಮಿಳುನಾಡು ಹಾಗೂ ಆಂಧ್ರಪ್ರದೇಶ ರಾಜ್ಯಗಳ ವಿವಿಧ ಪೊಲೀಸ್ ಠಾಣೆಗಳಲ್ಲಿ ಸುಮಾರು 16 ಪ್ರಕರಣಗಳು ಹಾಗೂ ಕರ್ನಾಟಕದ ವಿವಿಧ ಠಾಣೆಗಳಲ್ಲಿ ಸುಮಾರು 17 ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಸುಮಾರು 8 ಪ್ರಕರಣಗಳಲ್ಲಿ ಈಗಾಗಲೇ ಶಿಕ್ಷೆಯಾಗಿದೆ. ಕೇರಳದ ತನ್ನಿಪಲಂ, ಮಾವೂರು, ತ್ರಿಶೂರ್ ಮತ್ತು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ, ಬೆಳ್ತಂಗಡಿ, ಪುತ್ತೂರು ನಗರ, ಮೂಡಬಿದ್ರೆ, ಉತ್ತರ ಕನ್ನಡ ಜಿಲ್ಲೆಯ ಶಿರ್ಸಿ ಗ್ರಾಮಾಂತರ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಬಸವನಹಳ್ಳಿ ಠಾಣೆಗಳಲ್ಲಿ ಜಾಮೀನುರಹಿತ ಬಂಧನ ವಾರಂಟ್‌ಗಳು ಜಾರಿಯಾಗಿವೆ.

Categories
ಧಾರ್ಮಿಕ

ಶ್ರೀ ವಿನಾಯಕ ದೇವಸ್ಥಾನ : ದಾರು ಶಿಲ್ಪವನ್ನು ಶ್ರೀ ದೇವರಿಗೆ ಸಮರ್ಪಣಾ ಕಾರ್ಯಕ್ರಮ ನಡೆಯಿತು

ಆನೆಗುಡ್ಡೆ : ಶ್ರೀಯುತ ಹೊದ್ರಾಳಿ ಸುಬ್ಬಣ್ಣ ನಾಗರಾಜ್ ಹಾಗೂ ಧರ್ಮ ಪತ್ನಿ ಶ್ರೀಮತಿ ಮೀನಾಕ್ಷಿ ನಾಗರಾಜ್ ದಂಪತಿಗಳಿಂದ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಒಳಾಂಗಣದಲ್ಲಿ ಸುಮಾರು ಒಂದು ಕೋಟಿ ರೂಪಾಯಿ ಮೌಲ್ಯದ ನೂತನವಾಗಿ ಸಾಗುವಾನಿ ಮರದಿಂದ ಅತ್ಯಂತ ನಯನ ಮೋಹಕವಾಗಿ ನಿರ್ಮಿಸಲ್ಪಟ್ಟ ದಾರು ಶಿಲ್ಪವನ್ನು ಶ್ರೀ ದೇವರಿಗೆ ಸಮರ್ಪಣಾ ಕಾರ್ಯಕ್ರಮ ನಡೆಯಿತು.

ದಾನಿಗಳಾದ ಶ್ರೀಯುತ ದಂಪತಿಗಳು ಸ್ಥಳೀಯ ಕೋಟೇಶ್ವರದ ಹೊದ್ರಾಳಿ ನಿವಾಸಿಗಳಾಗಿದ್ದು ಬೆಂಗಳೂರಿನಲ್ಲಿ ಆನೆಗುಡ್ಡೆ ಶ್ರೀ ವಿನಾಯಕನ ಅನುಗ್ರಹದಿಂದಲೇ ಎವಿಯೇಷನ್ ಟ್ರಾವೆಲ್ಸ್ ಎನ್ನುವ ಉದ್ಯಮವನ್ನು ನಡೆಸುತ್ತಿದ್ದು ಬಂದ ಲಾಭಾಂಶದಲ್ಲಿ ಶ್ರೀ ದೇವರಿಗೆ ಯತಾಶಕ್ತಿ ದೇಣಿಗೆಯನ್ನು ನೀಡುತ್ತಾಬರುತ್ತಿದ್ದರು. ಪ್ರತಿ ವರ್ಷವೂ ಜನವರಿ ಒಂದನೇ ತಾರೀಕಿಗೆ ತಪ್ಪದೇ ಬರುತ್ತಿದ್ದು ಅದರ 50ನೇ ವರ್ಷದ ನೆನಪಿಗಾಗಿ ಒಂದು ಕೋಟಿ ರೂಪಾಯಿ ಮೌಲ್ಯದ ಈ ದಾರು ಶಿಲ್ಪದ ನಿರ್ಮಾಣಕ್ಕೆ ಸಂಪೂರ್ಣ ವೆಚ್ಚವನ್ನು ನೀಡಿದ್ದಾರೆ.

ದೇವಸ್ಥಾನದ ಎದುರು ನಡೆದ ಸರಳ ಸಮಾರಂಭದಲ್ಲಿ ಶ್ರೀಯುತ ದಂಪತಿಗಳನ್ನು ಗೌರವಿಸುತ್ತಾ ಶ್ರೀ ದೇವರ ಅನುಗ್ರಹ ಪ್ರಸಾದ ಹಾಗೂ ವಿಶೇಷ ಸ್ಮರಣಿಕೆ ನೀಡಿ ಆಡಳಿತ ಧರ್ಮದರ್ಶಿ ಶ್ರೀರಮಣ ಉಪಾಧ್ಯಾಯರು, ಶ್ರೀಯುತರು ಎರಡು ಹಸ್ತದಿಂದ ದಾನ ಮಾಡುತ್ತಿದ್ದು ಶ್ರೀ ದೇವರು ಅವರಿಗೆ ಅನಂತ ಹಸ್ತದಿಂದ ಅವರ ಇಷ್ಟಾರ್ಥವನ್ನು ಅನುಗ್ರಹಿಸುವಂತಾಗಲಿ ಎಂದು ಪ್ರಾರ್ಥಿಸಿದರು. ವಿಶ್ರಾಂತ ಆಡಳಿತ ಧರ್ಮದರ್ಶಿ ಕೆ. ಸೂರ್ಯನಾರಾಯಣ ಉಪಾಧ್ಯಾಯರು ಅವರ ಕಿರು ಪರಿಚಯವನ್ನು ಮಾಡಿಸುವುದರೊಂದಿಗೆ ಆನೆಗುಡ್ಡೆ ಶ್ರೀ ದೇವಳದೊಂದಿಗೆ ಇರುವ ಅವಿನಾಭಾವ ಸಂಬಂಧವನ್ನು ವಿವರಿಸುತ್ತಾ ಗೌರವ ಪೂರ್ವಕವಾಗಿ ಸ್ವಾಗತಿಸಿ ಆಶೀರ್ವದಿಸಿದರು.

ಈ ಸಂದರ್ಭದಲ್ಲಿ ಕಾಷ್ಟ ಶಿಲ್ಪದ ಕರ್ತೃಗಳಾದ ಸುಕುಮಾರ ಗುಡಿಗಾರ ಹಾಗೂ ಕೃಷ್ಣ ಗುಡಿಗಾರ ಸಹೋದರರು ಹಾಗೂ ದೇವಳದ ಇಂಜಿನಿಯರ್ ಎಚ್.ಶ್ರೀಕಾಂತ ಆಚಾರ್ಯ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಧರ್ಮದೇಶಿಗಳಾದ ಕೆ.ನಿರಂಜನ ಉಪಾಧ್ಯಾಯ, ಪರ್ಯಾಯ ಅರ್ಚಕರಾದ ಕೆ ವ್ಯಾಸ ಉಪಾಧ್ಯಾಯ ಸಹೋದರರು, ದೇವಳದ ಮ್ಯಾನೇಜರ್ ನಟೇಶ್ ಕಾರಂತ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.ಕೆ ರಾಜಾರಾಮ ಉಪಾಧ್ಯಾಯ ಕಾರ್ಯಕ್ರಮವನ್ನು ನಿರ್ವಹಿಸಿದರು.