Categories
ಶಿಕ್ಷಣ

ಬಿ. ಬಿ. ಹೆಗ್ಡೆ ಕಾಲೇಜು: ಕೋಣಿ ಮಾನಸ ಜ್ಯೋತಿ ಶಾಲೆಗೆ ಬಿಸಿಎ ವಿದ್ಯಾರ್ಥಿಗಳ ಭೇಟಿ

ಕುಂದಾಪುರ : ಇಲ್ಲಿನ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಬಿಸಿಎ ವಿಭಾಗದ ಆಶ್ರಯದಲ್ಲಿ ವಿಸ್ತರಣಾ ಚಟುವಟಿಕೆ ಭಾಗವಾಗಿ ವಿದ್ಯಾರ್ಥಿಗಳು ಕೋಣಿಯ ಮಾನಸ ಜ್ಯೋತಿ ವಿಶೇಷ ಚೇತನ ಮಕ್ಕಳ ಶಾಲೆಗೆ ಭೇಟಿ ನೀಡಿದರು.
ಈ ಸಂದರ್ಭ ಶಾಲೆಯ ವಿಶೇಷ ಚೇತನ ವಿದ್ಯಾರ್ಥಿಗಳಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮವನ್ನು, ಆಟೋಟಗಳನ್ನು ವಿದ್ಯಾರ್ಥಿಗಳು ನಡೆಸಿದರು. ವಿಶೇಷ ಚೇತನ ವಿದ್ಯಾರ್ಥಿಗಳು ತಮ್ಮ ವಿವಿಧ ಪ್ರತಿಭೆಯನ್ನು ತೋರ್ಪಡಿಸಿದರು.
ಈ ಸಂದರ್ಭ ಕೋಣಿಯ ಮಾನಸ ಜ್ಯೋತಿ ಟ್ರಸ್ಟ್ ಕೃಷ್ಣ ಶೋಭಾ ಮಧ್ಯಸ್ಥ, ಚೇತನ ಹಾಗೂ ಸಂಸ್ಥೆಯ ಮತ್ತಿತರ ಸಿಬ್ಬಂದಿಗಳು, ಕಾಲೇಜಿನ ಡೀನ್ ಅಕಾಡೆಮಿಕ್ ಗಿರಿರಾಜ್ ಭಟ್ ನೆಂಪು, ಸಹಾಯಕ ಪ್ರಾಧ್ಯಾಪಕ ಮಹೇಶ್ ಪೂಜಾರಿ, ಕಂಪ್ಯೂಟರ್ ಪ್ರೋಗ್ರಾಮರ್ ಆಕಾಶ್ ಭಂಡಾರಿ, ಮಂಜುನಾಥ್ ಕುಲಾಲ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Categories
ಕರಾವಳಿ ಸುದ್ದಿ

ಸಿ.ಎ.ಫೌಂಡೇಷನ್ ಫಲಿತಾಂಶ : ತ್ರಿಶಾ ಸಂಸ್ಥೆಯ 80 ವಿದ್ಯಾರ್ಥಿಗಳು ಉತ್ತೀರ್ಣ

ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಐ) ನಡೆಸಿರುವ ಮೇ 2026 ರ ಸಿ.ಎ ಫೌಂಡೇಷನ್ ಪರೀಕ್ಷೆಯಲ್ಲಿ ಕಟಪಾಡಿಯ ತ್ರಿಶಾ ವಿದ್ಯಾ ಪದವಿ ಪೂರ್ವ ಕಾಲೇಜು, ಮಂಗಳೂರಿನ ತ್ರಿಶಾ ಪದವಿ ಪೂರ್ವ ಕಾಲೇಜು, ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜ್ ಆಫ್ ಕಾಮರ್ಸ್ ಆ್ಯಂಡ್‌ ಮ್ಯಾನೇಜ್ಮೆಂಟ್ ನ (ಡೇ & ಇವನಿಂಗ್) ಹಾಗೂ ಮಂಗಳೂರಿನ ತ್ರಿಶಾ ಕಾಲೇಜ್ ಆಫ್ ಕಾಮರ್ಸ್ ಆ್ಯಂಡ್‌ ಮ್ಯಾನೇಜ್ಮೆಂಟ್ ನ (ಡೇ & ಇವನಿಂಗ್), ತ್ರಿಶಾ ಕ್ಲಾಸಸ್ ನಲ್ಲಿ ಒಟ್ಟು 80 ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದುವ ಮೂಲಕ ಮುಂದಿನ ಸಿಎ ಇಂಟರ್ ಮಿಡಿಯೆಟ್ ಹಂತಕ್ಕೆ ತೇರ್ಗಡೆ ಹೊಂದಿದ್ದಾರೆ.

ದೀಕ್ಷಾ (293), ಹರ್ಷಿತಾ ಆರ್ ಶೆಟ್ಟಿ (290), ಪ್ರಜ್ಞಾ (285) , ಸಿಂಚನಾ ಕುಂದರ್ (284), ಅಮೋಘ್ ಜಿ ಪ್ರಭು (281), ಅಂಕಿತ (274), ಪ್ರೀತಿ ವಿನಾಯಕ್ ನಾಯಕ್ ಬೆಣ್ಣೆ (271), ಸೋಹನ್ ಆಳ್ವ (265), ನಮನ್ ನವೀನ್ ನಾಯಕ್ (263), ದಕ್ಷೇಶ್ (260), ಶ್ರೇಯಸ್ ಎಸ್ (259), ಅಭಿನವ್ ಅನುಪ್ (258), ಗೌರವ್ ಜಿ ನಾಯಕ್ (255), ವಸುಪ್ರದಾ ರಾವ್ (253), ರಕ್ಷಿತಾ (252), ಅನನ್ಯಾ ಕಿಣಿ (251), ಕಟಪಾಡಿ ನಾಗಪ್ರಸಾದ್ ಕಾಮತ್ (250), ಪೃಥ್ವಿರಾಜ್ ಬಿ (250), ಸುಹಾನಿ (247), ವೈಷ್ಣವಿ ಗಿರೀಶ್ ಗೌಡ್ರು (246), ಚೈತನ್ಯ ಎನ್ (244), ನಿಧಿ ಶ್ರೀನಿವಾಸ ಆಚಾರ್ಯ (242), ಭೂಮಿಕಾ ಎನ್ ಎ (240), ವೇದಿಕಾ ವಿ ಶೆಟ್ಟಿ (238), ಶ್ರೀವಿಧ್ಯಾ (236), ದಿವ್ಯಾ ಲಕ್ಷ್ಮಿ (235), ಸೂಕ್ಷ್ಮಾ ಬಾಳಿಗಾ (234), ಶ್ರೀತಾ ಪೈ (233), ಅದ್ಯಾ ಜಿ ಭಟ್ (232), ಹರ್ಷಿತಾ (230), ಮಮತಾ ವಾಗ್ಲೆ (230), ಸಿಂಚನಾ ಸಿ ಪೂಜಾರಿ (229), ಮಾನ್ಯತಾ ಶಂಕರ ಪೂಜಾರಿ (229), ಐಶ್ವರ್ಯಾ ಡಿ (228), ಸಾನಿಕಾ (227), ಅನನ್ಯಾ ಡಿ ಶೆಟ್ಟಿ (226), ಸಾನಿಕಾ ಶೆಟ್ಟಿ (226), ಅನ್ಯ ಆಚಾರ್ಯ (225), ಮಧುರಾ ಹೇರ್ಲೆ (224), ಜಾಹ್ನವಿ ಪ್ರಭು (223), ಸ್ನೇಹಾ (223), ಸುಹಾಸ್ ನವೀನ್ ಹೆಗ್ಡೆ (221), ಪ್ರವೀಣ್ ಶೆಣೈ (221), ಶ್ರೇಷ್ಟಾ ಶೆಟ್ಟಿ (221), ರಾಶಿ ಸುವರ್ಣ (220), ಉಮರುಲ್ ಫಾರೂಕ್ ಅಫೀಫ್ (220), ಅಂಶುಲಾ ಶ್ರೇಷ್ಠಾ (218), ಕೀರ್ತನ್ ಆರ್ ಮೂಲ್ಯ (217), ಎನ್ ಬಿಂದು ಭಟ್ (217), ಅನ್ವಿತಾ ಪಿ ಎನ್ (217), ದಿಶಾ ಡಿ (217), ಆದಿತ್ಯ ಎಂ ಕಾಮತ್ (217), ವಂದನಾ ರೈ (215), ಮನ್ವಿತಾ (215), ಶೋಧನ್ ಕುಮಾರ್ ಶೆಟ್ಟಿ (214), ಯಶಂತ್ ಬಿ ಎಸ್ (213), ಸ್ಕಂದ ಎನ್ ಜಿ (213), ತತ್ಸವಿ ದಿವಾಕರ್ (212), ಥನಿಷ್ (211), ನಫೀಸಾ ರಿಧಾ ಜಿ (211), ಪಿ ಎಸ್ ಆದರ್ಶ (209), ಅಭಿ ಉದಯ್ ನಾಯಕ್ (209), ವೈಶಾಕ್ ಕೆ. ಬಿ. (209), ಶರತ್ ಬಿ ಕೆ (209), ಮೀನಾಕ್ಷಿ ಪಿ ಮಾಗಿ (209), ಅಭಿನವ್ (208), ವೈದೇಹಿ ಶೆಣೈ (208), ನಿಮಿತಾ ಎಸ್ ಶೇಟ್ (207), ತೇಜಸ್ ದೀಪಕ್ ಭಟ್ (206), ನಿಧಿಶ್ರೀ ಎಸ್ ಪಿ ಆರಾಧ್ಯ (205), ಗೌತಮ್ ಎಸ್ ಸುರತ್ಕಲ್ (205), ಕೆ ಪಿ ಪ್ರಜ್ವಲ್ (204), ಮಹೇಶ್ವರಿ ನಾಗಯ್ಯ ಜೋತೆಪ್ಪನವರ್ (203), ಸಿಂಚನ ಕುಲಾಲ್ (203), ರಕ್ಷಾ (203), ಲಾಸ್ಯ ಯು ಎ (202), ಶಶಾಂಕ ಎಸ್ ಎಚ್ (201), ಸ್ನೇಹಾ (200), ಆಶ್ರಿತಾ ಲಕ್ಷ್ಮಿ ಪಿ ಎಸ್ (200), ರಕ್ಷಾ ಜಿ (200) ಉತ್ತೀರ್ಣರಾಗಿ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.

ತ್ರಿಶಾ ಸಂಸ್ಥೆಯ ಸಂಸ್ಥಾಪಕರಾದ ಸಿಎ ಶ್ರೀ ಗೋಪಾಲಕೃಷ್ಣ ಭಟ್, ಸಿದ್ಧಾಂತ್ ಫೌಂಡೇಶನ್ ಟ್ರಸ್ಟಿಗಳಾದ ಶ್ರೀಮತಿ ನಮಿತಾ ಜಿ.ಭಟ್ ಮತ್ತು ಶ್ರೀ ರಾಮ್ ಪ್ರಭು ವಿದ್ಯಾರ್ಥಿಗಳನ್ನು ಹಾಗೂ ತರಬೇತಿ ನೀಡಿದ ಶಿಕ್ಷಕರನ್ನು ಅಭಿನಂದಿಸಿದ್ದಾರೆ.

Categories
ಕರಾವಳಿ ಸುದ್ದಿ

ಡಾ .ಬಿ. ಬಿ. ಹೆಗ್ಡೆ ಕಾಲೇಜಿನಲ್ಲಿ ಗ್ರಾಜುಯೇಷನ್ ಡೇ

ಕುಂದಾಪುರ : ವಿದ್ಯಾರ್ಥಿಗಳು ಯಶಸ್ಸಿನ ಪಥದಲ್ಲಿ ಮುನ್ನಡೆಯಲು ಪೋಷಕರು, ಸಕಾರಾತ್ಮಕ ಮನೋಭಾವ ಮತ್ತು ಪ್ರತಿಭೆ ಎಂಬ ಮೂರು ಅಂಶಗಳು ಅತ್ಯಂತ ಮಹತ್ವ ಪಡೆಯುತ್ತವೆ. ದೇಶದ ಪ್ರಗತಿಯಲ್ಲಿ ಯುವಜನತೆಯ ಪಾತ್ರ ಮಹತ್ವಪೂರ್ಣ. ಮಾನವೀಯ ಮೌಲ್ಯಗಳೊಂದಿಗೆ ಹೊಸ ಆಲೋಚನೆಗಳು, ನಿರ್ದಿಷ್ಟ ಗುರಿ ಹಾಗೂ ನವೀನ ಪರಿಹಾರಗಳನ್ನು ರೂಪಿಸುವ ಮನೋಭಾವವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ. ಡಾ. ಎ. ಎಂ. ಖಾನ್ ಅವರು ಪದವೀಧರರಿಗೆ ಹೇಳಿದರು.

ಅವರು ಇಲ್ಲಿನ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ ವತಿಯಿಂದ ಆಯೋಜಿಸಲಾದ ‘ಗ್ರಾಜುಯೇಷನ್ ಡೇ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
        
 ಕುಂದಾಪುರ ಎಜುಕೇಶನ್ ಸೊಸೈಟಿಯ ಅಧ್ಯಕ್ಷ ಶ್ರೀ ಬಿ. ಎಂ. ಸುಕುಮಾರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿ ಶ್ರೀ ಸೀತಾರಾಮ ನಕ್ಕತ್ತಾಯ ಶುಭ ಹಾರೈಸಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಡಾ. ಕೆ. ಉಮೇಶ್ ಶೆಟ್ಟಿ ಆಶಯ ನುಡಿಗಳನ್ನಾಡಿದರು. ಡೀನ್ ಅಕಾಡೆಮಿಕ್ ಗಿರಿರಾಜ್ ಭಟ್ ನೆoಪು ಉಪಸ್ಥಿತರಿದ್ದರು .ಐಕ್ಯೂಎಸಿ ಸಂಯೋಜಕಿ ದೀಪಿಕಾ ಜಿ. ಸ್ವಾಗತಿಸಿ, ಸಹ ಸಂಯೋಜಕ ರಕ್ಷಿತ್ ರಾವ್ ಗುಜ್ಜಾಡಿ ಅತಿಥಿಗಳನ್ನು ಪರಿಚಯಿಸಿದರು.
ವಾಣಿಜ್ಯ ವಿಭಾಗದ ಮುಖ್ಯಸ್ಥೆ ವೀಣಾ ಭಟ್, ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥೆ ನಂದಾ ರೈ ಹಾಗೂ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಮಹೇಶ್ ಕುಮಾರ್ ಅವರು ಪದವಿ ಪ್ರಮಾಣ ಪತ್ರ ಪಟ್ಟಿ ವಾಚಿಸಿದರು.
ವಿದ್ಯಾರ್ಥಿಗಳಾದ ಶರತ್, ಶ್ರೀರಕ್ಷಾ ಕೆ.ಎ. ಹಾಗೂ ಶಿಫಾ ಶೇಖ್ ಅನಿಸಿಕೆ ಹಂಚಿಕೊಂಡರು.
ಉಪ-ಪ್ರಾಂಶುಪಾಲ ಡಾ. ಚೇತನ್ ಶೆಟ್ಟಿ ಕೋವಾಡಿ ವಂದಿಸಿ, ವಿದ್ಯಾರ್ಥಿನಿ ಶ್ರೇಯಾ ಖಾರ್ವಿ ಪ್ರಾರ್ಥಿಸಿ , ಗಣಕ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರಣಮ್ ಆರ್. ಬೆಟ್ರಾಬೆಟ್ ಕಾರ್ಯಕ್ರಮ ನಿರೂಪಿಸಿದರು.

Categories
ಬ್ರೇಕಿಂಗ್ ನ್ಯೂಸ್

ಈಜಲು ತೆರಳಿದ್ದ ಇಬ್ಬರು ಬಾಲಕರು ನೀರಲ್ಲಿ ಮುಳುಗಿ ಮೃತ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಉಂಚಳ್ಳಿ ಸಮೀಪದ ಮಾಸ್ತಿಜಡ್ಡಿ ಗ್ರಾಮದಲ್ಲಿನ ಹೊಳೆಯಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರು ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ಭಾನುವಾರ ನಡೆದಿದೆ.

ಮೃತರನ್ನು ಮಾಸ್ತಿಜಡ್ಡಿ ಗ್ರಾಮದ ಮದನ್ ನಾಯ್ಕ (17) ಹಾಗೂ ಹೊನ್ನಾವರದ ಲೋಹಿತ್ ನಾಯ್ಕ (19) ಮೃತ ದುರ್ದೈವಿಗಳು. ಹಳ್ಳಕ್ಕೆ ಕಟ್ಟಿದ್ದ ಬಾಂದಾರದಲ್ಲಿ ಈಜಲು ತೆರಳಿದ್ದ ವೇಳೆ 15 ಅಡಿ ಆಳದ ಬಾಂದಿನ ನೀರಿನಲ್ಲಿ ಮುಳುಗಿ ಇಬ್ಬರೂ ಸಾವನ್ನಪ್ಪಿದ್ದಾರೆ.

ಇನ್ನು ಶವ ಶೋಧ ನಡೆಸಿದ ಶ್ರೀ ಮಾರಿಕಾಂಬ ರೆಸ್ಕ್ಯೂ ಟೀಮ್‌ನ ಗೋಪಾಲ ಗೌಡ ನೇತೃತ್ವದ ತಂಡ ಶವಗಳನ್ನು ನೀರಿನಿಂದ ಮೇಲೆತ್ತಿದ್ದಾರೆ. ಘಟನಾ ಸ್ಥಳಕ್ಕೆ ಬನವಾಸಿ ಠಾಣೆ ಪಿಎಸ್‌ಐ ಮಹಾಂತಪ್ಪ ಕುಂಬಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ಶಿರಸಿಗೆ ರವಾನೆ ಮಾಡಿದ್ದಾರೆ. ಘಟನೆ ಸಂಬಂಧ ಬನವಾಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Categories
ಕರಾವಳಿ ಸುದ್ದಿ

ಉಡುಪಿ : ಯುವ ನ್ಯಾಯವಾದಿ ಸಂದೇಶ್ ಕುಮಾರ್ ನಿಧನ

ಉಡುಪಿ: ಉಡುಪಿ ವಕೀಲರ ಸಂಘದ ಸಕ್ರಿಯ ಸದಸ್ಯರೂ, ನ್ಯಾಯವಾದಿಗಳೂ ಆದ ಸಂದೇಶ್ ಕುಮಾರ್ ಅವರು (ಜು.12) ನಿಧನರಾಗಿದ್ದಾರೆ.

ಸಂದೇಶ್ ಕುಮಾರ್ ರವರ ಅಕಾಲಿಕ ನಿಧನ ಮತ್ತು ಅಗಲುವಿಕೆಯು ಅವರ ಕುಟುಂಬದವರಿಗೆ, ಹಿತೈಷಿಗಳಿಗೆ ಹಾಗೂ ವಕೀಲ ಮಿತ್ರರಿಗೆ ತೀವ್ರ ದಿಗ್ಭ್ರಮೆ ಮತ್ತು ಆಘಾತವನ್ನು ಉಂಟು ಮಾಡಿದೆ.

ಮೃತರ ಪಾರ್ಥಿವ ಶರೀರದ ವಿಧಿ ವಿಧಾನಗಳನ್ನು ಅವರ ಸ್ವಗೃಹವಾದ ಕಡೆಕಾರಿನಲ್ಲಿ ನೆರವೇರಿಸಲಾಗುವುದು. ತದನಂತರ ಉದ್ಯಾವಾರದ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆಯು ಜರುಗಲಿದೆ ಎಂದು ಮೃತರ ಕುಟುಂಬದ ಮೂಲಗಳು ತಿಳಿಸಿವೆ.

Categories
ಪಂಚಾಂಗ

ಶುಭ ದಿನದ ಪಂಚಾಂಗ

ಶುಭ ದಿನದ ಪಂಚಾಂಗ

ಕಲಿಯುಗಾಬ್ದ 5128

ಪರಾಭವ ಸಂವತ್ಸರ

ಉತ್ತರಾಯಣ

ಗ್ರೀಷ್ಮ : ಋತು

ಜ್ಯೇಷ್ಠ : ಮಾಸ

ಕೃಷ್ಣ  ಪಕ್ಷ

ಚತುರ್ದಶಿ : ತಿಥಿ

ಆರ್ದ್ರೆ : ನಕ್ಷತ್ರ

ಸೋಮವಾರ

13.07.2026

ಈ ದಿನ ಎಲ್ಲರಿಗೂ ಶುಭವಾಗಲಿ

Categories
ಬ್ರೇಕಿಂಗ್ ನ್ಯೂಸ್

ಕಾಲೇಜು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ : ಖಾಸಗಿ ಬಸ್ ಕಂಡಕ್ಟರ್ ಅರೆಸ್ಟ್

ಮಂಗಳೂರು: ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಕಾಲೇಜು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿ, ಅಸಭ್ಯವಾಗಿ ವರ್ತಿಸಿದ ಖಾಸಗಿ ಬಸ್ ಕಂಡಕ್ಟರ್ ನನ್ನು ಮಂಗಳೂರು ದಕ್ಷಿಣ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಕಲ್ಲೇರಿ ನಿವಾಸಿ, ಪ್ರಸ್ತುತ ಉಪ್ಪಿನಂಗಡಿಯ ಕರ್ವೇಲು ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಿರುವ ಇರ್ಫಾನ್ (32) ಎಂದು ಗುರುತಿಸಲಾಗಿದೆ.

ಈತ ಮಂಗಳೂರು-ವಿಟ್ಲ ಮಾರ್ಗದಲ್ಲಿ ಸಂಚರಿಸುವ ಖಾಸಗಿ ಬಸ್‌ನಲ್ಲಿ ಕಂಡಕ್ಟ‌ರ್ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

ಜುಲೈ 9ರಂದು ಸಂಜೆ ಬಸ್ ಮಂಗಳೂರಿನಿಂದ ಹೊರಟಿದ್ದ ಸಂದರ್ಭದಲ್ಲಿ ಬಸ್‌ನಲ್ಲಿದ್ದ ಕಾಲೇಜು ವಿದ್ಯಾರ್ಥಿನಿಯರನ್ನು ಗುರಿಯಾಗಿಸಿಕೊಂಡು ಇರ್ಫಾನ್ ವಿಕೃತವಾಗಿ ವರ್ತಿಸಿದ್ದಾನೆ ಎಂದು ಹೇಳಲಾಗಿದೆ.

ವಿದ್ಯಾರ್ಥಿನಿಯರ ಎದುರೇ ತನ್ನ ಗುಪ್ತಾಂಗ ಪ್ರದರ್ಶನ ಮಾಡಿ ಅಸಭ್ಯ ಸನ್ನೆಗಳನ್ನು ಮಾಡಿದ್ದಲ್ಲದೆ, ಬಸ್ಸಿನ ಹಿಂಬದಿಯ ಸೀಟಿಗೆ ಬರುವಂತೆ ಸನ್ನೆ ಮಾಡಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ.

ಆರೋಪಿಯ ಈ ವರ್ತನೆಯಿಂದ ಬೇಸತ್ತ ವಿದ್ಯಾರ್ಥಿನಿಯರು ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಜುಲೈ 10ರಂದು ಆರೋಪಿತ ಕಂಡಕ್ಟರ್ ಇರ್ಫಾನ್‌ನನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

ಸದ್ಯ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

Categories
ಕರಾವಳಿ ಸುದ್ದಿ

ಬಸ್ರೂರು : ವಿದ್ಯಾರ್ಥಿ ವೇತನ ವಿತರಣೆ

ಬಸ್ರೂರು :  ಗ್ರಾಮದ ಶ್ರೀ ಕಾಳಿ ಭಜನಾ ಮಂಡಳಿಯ ಹತ್ತನೇ ತರಗತಿ ಹಾಗೂ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ನಿವೇದಿತಾ ಪ್ರೌಢಶಾಲೆಯ ನಿವೃತ್ತ ಮುಕ್ಯೋಪಾಧ್ಯಾಯರಾದ ದಿನಕರ್ ಆರ್ ಶೆಟ್ಟಿ ಹಾಗೂ ಶ್ರೀ ಕಾಳಿ ಭಜನಾ ಮಂಡಳಿಯವರ ಜಂಟಿ ಸಹಯೋಗದಲ್ಲಿ ವಿದ್ಯಾರ್ಥಿ ವೇತನ ವಿತರಿಸಲಾಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಿನಕರ್ ಆರ್ ಶೆಟ್ಟಿ ವಹಿಸಿದ್ದು, ವಿದ್ವಾನ್ ಮಾಧವ ಅಡಿಗ ಕಾರ್ಯಕ್ರಮ ಉದ್ಘಾಟನೆ ಮಾಡಿದರು. ಮುಖ್ಯ ಅತಿಥಿಗಳಾಗಿ ರಾಧಾಕೃಷ್ಣ ಶೆಟ್ಟಿ, ಶಿವರಾಮ ಪೂಜಾರಿ, ಬೇಬಿ ಶ್ರೀಕಾಂತ್ ಹಾಗೂ ಚಂದ್ರ ಪೂಜಾರಿ ಉಪಸ್ಥಿತರಿದ್ದರು. ಕೆ. ವಿಕಾಸ್ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು.

Categories
ಕರಾವಳಿ ಸುದ್ದಿ

ಹೂವಿನಕೆರೆಯಲ್ಲಿ ‘ಶುದ್ಧ ನೈವೇದ್ಯ ಸಮರ್ಪಣಂ’ ಯೋಜನೆಗೆ ಚಾಲನೆ

ಕುಂದಾಪುರ : ದೇಶದಲ್ಲಿ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಭತ್ತದ ತಳಿಗಳಿದ್ದವು. ಕೃಷಿ ನಿರ್ಲಕ್ಷ್ಯದಿಂದಾಗಿ ಅವೆಲ್ಲ ನಶಿಸಿ, ಇಂದು 70ಸಾವಿರದಷ್ಟು ಉಳಿದಿವೆ. ಇವು ಪ್ರಯೋಗಾಲಯದಲ್ಲಿ ಉಳಿಯದೆ, ಗದ್ದೆಗಳಲ್ಲಿ ಬೆಳೆದು ಉಳಿಯಬೇಕು ಎಂಬ ಸದುದ್ದೇಶದಿಂದ ‘ಶುದ್ಧ ನೈವೇದ್ಯ ಸಮರ್ಪಣಂ’ ಎಂಬ ವಿನೂತನ ಯೋಜನೆಯನ್ನು ರೂಪಿಸಲಾಗಿದೆ. ಈ ಮೂಲಕ ಪಾರಂಪರಿಕ ಭತ್ತದ ತಳಿಗಳನ್ನು ಸಂರಕ್ಷಿಸುವ ಅಭಿಯಾನ ಆರಂಭಿಸಲಾಗಿದೆ ಎಂದು ಸೋದೆ ಶ್ರೀ ವಾದಿರಾಜ ಮಠಾಧೀಶ ಶ್ರೀ ವಿಶ್ವ ವಲ್ಲಭತೀರ್ಥ ಸ್ವಾಮಿಗಳು ಹೇಳಿದರು.

ಶ್ರೀ ವಾದಿರಾಜ ಯತಿಗಳ ಅವತಾರ ಭೂಮಿ ಹೂವಿನ ಕೆರೆಯ ಗೌರಿ ಗದ್ದೆಯಲ್ಲಿ ಭತ್ತ ನಾಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಶುದ್ಧ ನೈವೇದ್ಯ ಸಮರ್ಪಣಂ ಎಂಬ ಈ ಮಹಾನ್ ಅಭಿಯಾನದಲ್ಲಿ ತೀರ್ಥಹಳ್ಳಿಯ ಕೃಷಿ ಪ್ರಯೋಗ ಪರಿವಾರ ಹಾಗೂ ಎಲ್ಲೆಡೆಯ ಆಸಕ್ತ ರೈತರು ಕೈ ಜೋಡಿಸಿದ್ದಾರೆ. 2028 ರಲ್ಲಿನ ಸೋದೆ ಮಠದ ಪರ್ಯಾಯದಲ್ಲಿ ಉಡುಪಿಯ ಶ್ರೀ ಕೃಷ್ಣನಿಗೆ ದಿನಕ್ಕೊಂದು ಬಗೆಯ ತಳಿಯ ಸಾವಯವ ಅನ್ನವನ್ನು ನೈವೇದ್ಯ ಮಾಡುವ ಸಂಕಲ್ಪ ಮಾಡಲಾಗಿದೆ. ಈ ಮೂಲಕ ರೈತರಲ್ಲಿ ಕೃಷಿಯ ಆಸಕ್ತಿ ಮೂಡಿಸಿ, ರಾಸಾಯನಿಕ ಮುಕ್ತ ಶುದ್ಧ ಆಹಾರವನ್ನು ಎಲ್ಲರೂ ಹೆಚ್ಚು ಬಳಸುವಂತೆ ಪ್ರೋತ್ಸಾಹಿಸುವುದು ಮತ್ತು ಕೃಷಿ ಭೂಮಿ ಹಡಿಲು ಬೀಳದಂತೆ ತಡೆಯುವುದು ಉದ್ದೇಶವಾಗಿದೆ. ಈ ಅಭಿಯಾನ ಈ ಮೊದಲೇ ಆರಂಭಗೊಂಡಿದ್ದರೂ ಅದಕ್ಕೊಂದು ಪರಿಪೂರ್ಣತೆ ಕೊಡಲು ಶುದ್ಧ ನೈವೇದ್ಯ ಸಮರ್ಪಣಂ ಅನುಷ್ಠಾನಿಸಲಾಗುತ್ತಿದೆ. ಪರ್ಯಾಯದ ಪ್ರಥಮ ದಿನ, ಅನ್ನಬ್ರಹ್ಮನಾದ ಶ್ರೀ ಕೃಷ್ಣನಿಗೆ ಶ್ರೀ ವಾದಿರಾಜರು ಅವತರಿಸಿದ ಗೌರಿ ಗದ್ದೆಯಲ್ಲಿ ಬೆಳೆದ ಭತ್ತದಿಂದಾದ ಅನ್ನವನ್ನೇ ಸಮರ್ಪಿಸಲಾಗುವುದು. ಇದರಿಂದ ಈ ಯೋಜನೆಯನ್ನು ಶ್ರೀ ವಾದಿರಾಜ ಗುರುಗಳ ಮೂಲಕವೇ ಚಾಲನೆಗೊಳಿಸಿದಂತಾಗುತ್ತದೆ. ಪರ್ಯಾಯ ಅವಧಿಯಲ್ಲಿ ದಿನಕ್ಕೊಂದು ತಳಿಯ ಅನ್ನವನ್ನು ನೈವೇದ್ಯ ಮಾಡಲಾಗುವುದು. ಅಂತೆಯೇ ಈ ಭಾಗದ ಪ್ರಸಿದ್ಧ ತಳಿಯಾದ ಗುಲ್ವಾಡಿ ಸಣ್ಣಕ್ಕಿ ತಳಿಯ ಸಸಿಗಳನ್ನು ನಾಟಿ ಮಾಡಲಾಗುತ್ತಿದೆ ಎಂಬ ವಿವರಣೆಯನ್ನೂ ಸ್ವಾಮಿಗಳು ನೀಡಿದರು.

ಕೃಷಿ ಪ್ರಯೋಗ ಪರಿವಾರದ ಹಾದಿಗಲ್ಲು ಲಕ್ಷ್ಮೀನಾರಾಯಣ ಮಾತನಾಡಿ, ವಿಷಮುಕ್ತ ಶುದ್ಧ ಆಹಾರದ ಮೂಲಕ ರೋಗಮುಕ್ತ ಸಮಾಜ ನಿರ್ಮಾಣಕ್ಕಾಗಿ ನಾವು ಕೃಷಿ ಪ್ರಯೋಗ ಪರಿವಾರದ ಮೂಲಕ ಆಸಕ್ತ ರೈತರಿಗೆ ವಿವಿಧ ತಳಿಯ ಭತ್ತವನ್ನು ಕೊಟ್ಟು ಬೆಳೆಯುವಂತೆ ಪ್ರೋತ್ಸಾಹಿಸಿದೆವು. ಒಡಿಶಾದ ಪುರಿ ಜಗನ್ನಾಥನಿಗೆ ದಿನಕ್ಕೊಂದು ತಳಿಯ ಅನ್ನ ನೈವೇದ್ಯ ಮಾಡಲಾಗುತ್ತಿದೆ. ಅನ್ನಬ್ರಹ್ಮ ಎಂದೇ ಖ್ಯಾತನಾದ ಉಡುಪಿಯ ಕೃಷ್ಣನಿಗೆ ನಾವ್ಯಾಕೆ ಈ ಪ್ರದೇಶದ ತಳಿಯ ಅಕ್ಕಿಯ ಅನ್ನವನ್ನು ಸಮರ್ಪಿಸಬಾರದು ಎಂದು ಯೋಚಿಸಿದಾಗ, ಸೋದೆ ಸ್ವಾಮಿಗಳು ಒಪ್ಪಿ, ಮುಂಬರುವ ಪರ್ಯಾಯದಿಂದ ಯೋಜನೆಯನ್ನು ಅನುಷ್ಠಾನಿಸಲು ಮುಂದಾಗಿರುವುದು ರೈತರಲ್ಲಿ ಉತ್ಸಾಹ ಮೂಡಿಸಿದೆ ಎಂದರು.

ಶ್ರೀವತ್ಸ ಮಾತನಾಡಿ, ನಮ್ಮಲ್ಲಿ ವೈವಿಧ್ಯಮಯ ಭತ್ತದ ತಳಿಗಳಿವೆ. ಅನ್ನಕ್ಕೆ, ಅವಲಕ್ಕಿಗೆ, ಮುಂಡಕ್ಕಿಗೆ, ಔಷಧಿಗೆ ಹೀಗೆ ಎಲ್ಲಕ್ಕೂ ಸೂಕ್ತವಾಗುವಂತಹವುಗಳಿವೆ. ಇವನ್ನು ಉಳಿಸಿಕೊಳ್ಳದಿದ್ದರೆ ಉಂಟಾಗುವ ನಷ್ಟವನ್ನು ಯಾರೂ ಭರಿಸಲಾಗದು ಎಂದರು.

ರಮೇಶ್ ಹತ್ವಾರ್ ಸ್ವಾಗತಿಸಿ ವಂದಿಸಿದರು. ಶ್ರೀ ವಿಶ್ವ ವಲ್ಲಭತೀರ್ಥ ಸ್ವಾಮಿಯವರು ಗೌರಿ ಗದ್ದೆಗಿಳಿದು ಭತ್ತದ ಸಸಿಗಳನ್ನು ನಾಟಿ ಮಾಡುತ್ತಿದ್ದಂತೆ ಶಿಷ್ಯ ವರ್ಗದವರು, ಪರಿಸರದ ರೈತರು, ಮಹಿಳೆಯರು ಉತ್ಸಾಹದಿಂದ ನಾಟಿ ಮಾಡಿದರು. ರಾಮಚಂದ್ರ ವರ್ಣ, ರಾಘವೇಂದ್ರ ಗುರಿಕಾರ್, ನರಸಿಂಹಮೂರ್ತಿ ಬುಧ್ಯ, ಸೀತಾರಾಮ ಧನ್ಯ, ಭಾಗ್ಯಲಕ್ಷ್ಮೀ ಧನ್ಯ, ಗಣೇಶ್ ಭಟ್, ವಾದಿರಾಜ ಭಟ್, ಶ್ರೀನಿವಾಸ ಹತ್ವಾರ್, ಸುಜಾತ, ವಿಶ್ವನಾಥ ಅಡಿಗ, ಪರಿಮಳ ಅಡಿಗ ಮುಂತಾದವರು ಸಹಕರಿಸಿದರು.

Categories
ಕರಾವಳಿ ಸುದ್ದಿ

ಪಶು ಇಲಾಖೆಗೆ ಚೈತನ್ಯ ತುಂಬುತ್ತಿರುವ ಪಶು ಸಖಿಯರ ಸಮಸ್ಯೆಗಳ ಕುರಿತಾಗಿ ಕ್ಷೇತ್ರ ವ್ಯಾಪ್ತಿಯ ಪಶು ಸಖಿಯರ ಜೊತೆ ಬೈಂದೂರು ಶಾಸಕರಿಂದ ಸಂವಾದ

ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ಗುರುರಾಜ್ ಶೆಟ್ಟಿ ಗಂಟಿಹೊಳೆಯವರು ಬೈಂದೂರು ಪಶು ಆಸ್ಪತ್ರೆಯಲ್ಲಿ ಕ್ಷೇತ್ರದ ಪಶು ಸಖಿಯರೊಂದಿಗೆ ಬೈಂದೂರು ವಿಧಾನ ಸಭಾ ಕ್ಷೇತ್ರ ವಾಪ್ತಿಯಲ್ಲಿ ಪಶು ಸಂಗೋಪನೆ ಇಲಾಖೆಯಡಿ ವಿವಿಧ ಯೋಜನೆಗಳ ಅನುಷ್ಠಾನದಲ್ಲಿನ ವಿಚಾರಗಳು ಹಾಗೂ ಪಶು ಸಖಿಯರು ಕ್ಷೇತ್ರ ಮಟ್ಟದಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಕುರಿತಾಗಿ ಬೈಂದೂರು ಪಶು ಆಸ್ಪತ್ರೆಯಲ್ಲಿ ಸಂವಾದ ನಡೆಸಿದರು. ಸಂವಾದವನ್ನು ಉದ್ದೇಶಿಸಿ ಮಾತನಾಡಿದ ಶಾಸಕರು ತೀವ್ರ ಸಿಬ್ಬಂದಿ ಕೊರತೆಯಿಂದ ನಲುಗುತ್ತಿರುವ ಪಶು ಇಲಾಖೆಗೆ ಎನ್.ಎಲ್.ಆರ್.ಎಂ ಯೋಜನೆಯಡಿ ಆಯ್ಕೆಗೊಂಡ ಪಶು ಸಖಿಯರು ತಮಗೆ ಸಿಗುತ್ತಿರುವ ಸೀಮಿತ ಗೌರವ ಧನದ ಹೊರತಾಗಿಯೂ ಮಾನವೀಯತೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜಾನುವಾರು ಗಣತಿ ಹಾಗೂ ಲಸಿಕಾ ಕಾರ್ಯಕ್ರಮಗಳಲ್ಲಿ ಪಶು ಸಖಿಯವರ ಉತ್ಸಾಹ ಭರಿತ ಪಾಲ್ಗೊಳ್ಳುವಿಕೆಯಿಂದ ಇಲಾಖೆಗೆ ಚೈತನ್ಯ ಬಂದಿದೆ. ಗ್ರಾಮೀಣ ಭಾಗದಲ್ಲಿನ ವಿಷಮ ಪರಿಸ್ಥಿತಿಯಲ್ಲೂ ಅಚ್ಚು ಕಟ್ಟಾದ ಕಾರ್ಯ ನಿರ್ವಹಣೆಗೆ ಪಶು ಸಖಿಯರು ಅಭಿನಂದನಾರ್ಹರು ಎಂದರು. ಹಾಗಾಗಿ ಪಶು ಸಖಿಯರ ನ್ಯಾಯಯುತ ಬೇಡಿಕೆಗಳಿಗೆ ಸಂಬಂಧ ಪಟ್ಟ ಇಲಾಖೆಗಳು ಸ್ಪಂದಿಸಬೇಕು ಎಂದರು.*ಪಶು ಸಖಿಯರು ಕ್ಷೇತ್ರ ಮಟ್ಟದಲ್ಲಿ ಪ್ರಸ್ತುತ ಎದುರಿಸುತ್ತಿರುವ ಸಮಸ್ಯೆಗಳನ್ನು ಶಾಸಕರ ಗಮನಕ್ಕೆ ತಂದರು. ಈ ಹಿಂದೆ ಜಾನುವಾರು ಗಣತಿ ಮಾಡಿದ ಬಗ್ಗೆ ಪ್ರೋತ್ಸಾಹ ಧನ ಪಾವತಿ ಬಾಕಿ, ಪ್ರಯಾಣ ಭತ್ಯೆ ಬಾಕಿ ಬಗ್ಗೆ ಪ್ರಸ್ತಾಪಿಸಿದಾಗ ಈ ಬಗ್ಗೆ ಬಾಕಿ ಪಾವತಿಗೆ ಕ್ರಮ ವಹಿಸಲು ಹಾಜರಿದ್ದ ಇಲಾಖೆಯ ಉಪ ನಿರ್ದೇಶಕರಿಗೆ ಸೂಚನೆ ನೀಡಿದರು.

ವೈಯುಕ್ತಿಕ ವಿಮಾ ಸೌಲಭ್ಯ, ಕನಿಷ್ಠ ವೇತನ, ಸೇರಿದಂತೆ ಶಾಸಕರ ಮುಂದೆ ಸಾಲು ಸಾಲು ಬೇಡಿಕೆ ಸಲ್ಲಿಸಿದ ಪಶು ಸಖಿಯರು

ಪ್ರಸ್ತುತ ಪಶು ಸಖಿಯರು ನಿಗದಿತ ಸಮಯಕ್ಕಿಂತ ಹೆಚ್ಚುವರಿ ಅವಧಿಗೆ ಇಲಾಖಾ ಕಾರ್ಯಗಳನ್ನು ಮಾಡುತ್ತಿದ್ದರೂ ಯಾವುದೇ ಕನಿಷ್ಠ ವೇತನ ವಿಲ್ಲದೇ ಕೇವಲ ಗೌರವ ಧನ ಆಧಾರದಲ್ಲಿ ಕೆಲಸ ನಿರ್ವಹಣೆ ಮಾಡುತ್ತಿದ್ದು ಕನಿಷ್ಠ ವೇತನ ನಿಗದಿ ಮಾಡಲು ಹಾಗೂ ಪಶು ಸಖಿಯರಿಗೆ ಹೆಚ್ಚಿನ ಪ್ರಮಾಣದಲ್ಲಿ ಗ್ರಾಮೀಣ ಭಾಗಗಳಲ್ಲಿ ಓಡಾಟ ಇರುವುದರಿಂದ ಅಪಾಯದ ಸಂದರ್ಭಗಳಿಗೆ ಪೂರಕವಾಗಿ ವೈಯುಕ್ತಿಕ ವಿಮಾ ಸೌಲಭ್ಯ ಒದಗಿಸಲು ಶಾಸಕರ ಮುಂದೆ ಬೇಡಿಕೆ ಪ್ರಸ್ತುತ ಪಡಿಸಿದರು. ಇದಕ್ಕೆ ಉತ್ತರಿಸಿದ ಶಾಸಕರು ಪಶು ಸಖಿಯರ ಎಲ್ಲಾ ನ್ಯಾಯಯುತ ಬೇಡಿಕೆಗಳಿಗೆ ಸರಕಾರದ ಮಟ್ಟದಲ್ಲಿ ಮನವಿ ಹಾಗೂ ಸದನದಲ್ಲಿ ಪ್ರಶ್ನೆ ಎತ್ತುವುದರ ಮೂಲಕ ಪಶು ಸಖಿಯರ ಕುಂದು ಕೊರತೆಗಳಿಗೆ ಸದಾ ಧ್ವನಿಯಾಗುವ ಕೆಲಸ ಮಾಡುವುದಾಗಿ ಭರವಸೆ ನೀಡಿದರು.

ಸಂವಾದ ಕಾರ್ಯಕ್ರಮದಲ್ಲಿ ಬೈಂದೂರು ವಿಧಾನ ಸಭಾ ಕ್ಷೇತ್ರದ 39 ಗ್ರಾಮ ಪಂಚಾಯತ್ ಗಳ ಪಶು ಸಖಿಯರು ಹಾಗೂ ಪಶು ಸಂಗೋಪನೆ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.