Categories
ಕರಾವಳಿ ಸುದ್ದಿ

ಆನೆಗುಡ್ಡೆ : ಅಶಕ್ತರಿಗೆ ವೈದ್ಯಕೀಯ ನೆರವು ಹಸ್ತಾಂತರ

ಕೋಟ : ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ 2024-25 ನೇ ಸಾಲಿನಲ್ಲಿ 05 ಲಕ್ಷ ರೂ ವೆಚ್ಚದಲ್ಲಿ 50 ಜನ ಅಶಕ್ತರಿಗೆ ವೈದ್ಯಕೀಯ ನೆರವನ್ನು ಆಡಳಿತ ಧರ್ಮದರ್ಶಿ ಕೆ.ಶ್ರೀರಮಣ ಉಪಾಧ್ಯಾಯ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಧರ್ಮದರ್ಶಿಗಳಾದ ಪದ್ಮನಾಭ ಉಪಾಧ್ಯಾಯ, ಹಾಗೂ ಪರ್ಯಾಯ ಅರ್ಚಕರಾದ ಕೃಷ್ಣಾನಂದ ಉಪಾಧ್ಯಾಯ ಮತ್ತು ದೇಗುಲದ ಸಿಬ್ಬಂಧಿ ವರ್ಗ ಮತ್ತು ಮೆನೇಜರ್‌ ನಟೇಶ್‌ ಕಾರಂತ್‌ ಉಪಸ್ಥಿತರಿದ್ದರು.

Categories
ಕರಾವಳಿ ಸುದ್ದಿ

ಮುತ್ತು ಕೃಷಿ ಪ್ರಾಯೋಗಿಕ ಮಾಹಿತಿ ಕಾರ್ಯಾಗಾರ

ಕೋಟ : ಮೀನುಗಾರಿಕೆ ಇಲಾಖೆ, ಉತ್ತರ ಕನ್ನಡ ಜಿಲ್ಲೆ ಮತ್ತು ಉಡುಪಿ ಕಿನಾರ ಮೀನುಗಾರರ ಉತ್ಪಾದಕ ಕಂಪನಿ ನಿಯಮಿತ ಉಡುಪಿ ಜಿಲ್ಲೆ ಜಂಟಿಯಾಗಿ ಆಯೋಜನೆಯಲ್ಲಿ ಮುತ್ತು ಕೃಷಿ ಪ್ರಾಯೋಗಿಕ ಮಾಹಿತಿ ಕಾರ್ಯಾಗಾರ ಇತ್ತೀಚಿಗೆ ಉತ್ತರ ಕನ್ನಡ ಜಿಲ್ಲೆಯ ಕುಮಟದ ಯಾಣದಲ್ಲಿ ಜರಗಿತು.
ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಬೊಪಣ್ಣ.ಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಆಸಕ್ತ ಮುತ್ತು ಕೃಷಿಕರಿಗೆ ಮುತ್ತು ಕೃಷಿ ಮತ್ತು ಮೀನು ಸಾಕಾಣಿಕೆ ಬಗ್ಗೆ ಮಾಹಿತಿ ನೀಡಿ ಉಡುಪಿ ಕಿನಾರ ಮೀನುಗಾರರ ಉತ್ಪಾದಕ ಕಂಪನಿ ಕಾರ್ಯವನ್ನು ಶ್ಲಾಘಿಸಿದರು. ಹಾಗೇ ಮೀನುಗಾರಿಕೆ ಇಲಾಖೆಯಿಂದ ಸಿಗುವಂತಹ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಉಡುಪಿ ಕಿನಾರ ಉತ್ಪಾದಕ ಕಂಪನಿಯ ನಿರ್ದೇಶಕ ಸುದಿನ ಕೋಡಿ ಮುತ್ತು ಕೃಷಿ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ಮುಂದಿನ ದಿನಗಳಲ್ಲಿ ಉತ್ತರ ಕನ್ನಡ ಜಿಲ್ಲೆಯಾದ್ಯಂತ 30 ಕ್ಕೂ ಆಸಕ್ತ ಮುತ್ತು ಕೃಷಿಕರನ್ನು ಗುರುತಿಸಿ ಮುತ್ತು ಕೃಷಿಯನ್ನು ಮಾದರಿ ಕೃಷಿಯನ್ನಾಗಿ ಮಾಡಲು ಕಾರ್ಯ ನಿರ್ವಹಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಕುಮಟಾ ತಾಲೂಕಿನ ಮೀನುಗಾರಿಕೆ ಸಹಾಯಕ ನಿರ್ದೇಶಕ ಸಚಿನ್ ಪುತ್ರನ್, ಭಟ್ಕಳ ತಾಲೂಕಿನ ಸಹಾಯಕ ನಿರ್ದೇಶಕ ರೇಣುಕಾ ಸ್ವಾಮಿ ಮತ್ತು ಮುತ್ತು ಕೃಷಿಕರಾದ ಪುರುಷೋತ್ತಮ್ ಮರಾಠಿ ಉಪಸ್ಥಿತರಿದ್ದರು

Categories
ಕರಾವಳಿ ಸುದ್ದಿ

ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಜಿಲ್ಲಾ ಬಿಜೆಪಿ ಬೃಹತ್ ಪ್ರತಿಭಟನೆ, ಅಹವಾಲು ಸಲ್ಲಿಕೆ

ಉಡುಪಿ : ಸಾರ್ವಜನಿಕ ಗುತ್ತಿಗೆಯಲ್ಲಿ ಮುಸ್ಲಿಮರಿಗೆ 4% ಮೀಸಲಾತಿಯನ್ನು ನೀಡುವ ತುಷ್ಟೀಕರಣದ ನಿರ್ಧಾರ ತಳೆದ ರಾಜ್ಯ ಕಾಂಗ್ರೆಸ್ ಸರ್ಕಾರದ ಸಂವಿಧಾನ ವಿರೋಧಿ ನಿಲುವನ್ನು ಖಂಡಿಸಿ ಹಾಗೂ ಈ ವಿಚಾರವನ್ನು ಹನಿಟ್ರ್ಯಾಪ್ ಪ್ರಕರಣದ ಜೊತೆಗೆ ಸದನದಲ್ಲಿ ಪ್ರಶ್ನಿಸಿದ 18 ಮಂದಿ ಬಿಜೆಪಿ ಶಾಸಕರನ್ನು ಅಮಾನತುಗೊಳಿಸಿರುವ ಸ್ಪೀಕರ್ ಕ್ರಮವನ್ನು ಖಂಡಿಸಿ, ಮುಸ್ಲಿಂ ತುಷ್ಟೀಕರಣಕ್ಕಾಗಿ ಅಗತ್ಯ ಬಿದ್ದರೆ ಸಂವಿಧಾನ ಬದಲಾಗುತ್ತದೆ ಎಂಬ ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ದೇಶ ವಿರೋಧಿ ಹೇಳಿಕೆಯನ್ನು ಖಂಡಿಸಿ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಅವರ ನೇತೃತ್ವದಲ್ಲಿ ಉಡುಪಿ ಜಿಲ್ಲಾಧಿಕಾರಿಗಳ ಕಛೇರಿಯ ಮುಂಬಾಗದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.

ಕರ್ನಾಟಕ ವಿಧಾನ ಸಭೆಯಲ್ಲಿ ವಿಧಾನ ಸಭಾಧ್ಯಕ್ಷರು ಬಿಜೆಪಿಯ 18 ಶಾಸಕರನ್ನು 6 ತಿಂಗಳ ಕಾಲ ಅಮಾನತು ಮಾಡಿರುವುದು ಸಂಪೂರ್ಣವಾಗಿ ಕಾನೂನುಬಾಹಿರ, ಅಸಾಂವಿಧಾನಾತ್ಮಕ, ಏಕಪಕ್ಷೀಯ ಹಾಗೂ ಮನಸೋಇಚ್ಛೆಯಿಂದ ತೆಗೆದುಕೊಂಡ ತೀರ್ಮಾನವಾಗಿದೆ. ಈ ನಿರ್ಧಾರ ಜನತೆಯಿಂದ ಆಯ್ಕೆಯಾದ ಶಾಸಕರಿಗೆ ಅಷ್ಟೇ ಅಲ್ಲದೆ ಕ್ಷೇತ್ರದ ಮತದಾರರಿಗೂ ಮಾಡಿದ ಘೋರ ಅವಮಾನವಾಗಿದೆ. ವಿಧಾನಸಭಾ ಸ್ಪೀಕರ್ ಅವರ ಅಸಾಂವಿಧಾನಿಕ, ಸರ್ವಾಧಿಕಾರಿ ಕ್ರಮವನ್ನು ಉಡುಪಿ ಜಿಲ್ಲಾ ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ ಹಾಗೂ ವಿಧಾನ ಸಭಾಧ್ಯಕ್ಷರು ತಮ್ಮ ತೀರ್ಮಾನವನ್ನು ಮರು ಪರಿಶೀಲಿಸಿ ಅಮಾನತು ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದು ಉಡುಪಿ ಜಿಲ್ಲಾ ಬಿಜೆಪಿ ಆಗ್ರಹಪಡಿಸುತ್ತದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ತಿಳಿಸಿದರು.

ಕಾಂಗ್ರೆಸ್ ಮತ್ತೊಮ್ಮೆ ತುಷ್ಟೀಕರಣದ ತನ್ನ ಹಳೇ ಚಾಳಿಯನ್ನು ಮುಂದುವರಿಸಿದೆ. ಸಾರ್ವಜನಿಕ ಗುತ್ತಿಗೆಯಲ್ಲಿ ಶೇ.4ರಷ್ಟು ಮೀಸಲಾತಿಯನ್ನು ಮುಸ್ಲಿಮರಿಗೆ ನೀಡುವುದು, ಹೊರದೇಶಕ್ಕೆ ವಿದ್ಯಾಭ್ಯಾಸಕ್ಕೆ ಹೋಗುವ ಮುಸ್ಲಿಂ ವಿದ್ಯಾರ್ಥಿಗಳಿಗೆ ನೀಡುವ ಸಹಾಯ ಧನವನ್ನು 20 ಲಕ್ಷ ರೂ.ಗಳಿಂದ 30 ಲಕ್ಷ ರೂ.ಗಳಿಗೆ ಹೆಚ್ಚಳ ಮಾಡಿರುವುದು, ಶಾದಿ ಭಾಗ್ಯಕ್ಕೆ ಹಣ ನೀಡುವ ನಿರ್ಧಾರ ತೆಗೆದುಕೊಂಡಿರುವುದು ಮತ್ತು ಮುಸ್ಲಿಂ ಹೆಣ್ಣು ಮಕ್ಕಳಿಗೆ ಮಾತ್ರ ಆತ್ಮರಕ್ಷಣೆಗಾಗಿ ವಿಶೇಷ ಅನುದಾನವನ್ನು ನೀಡುವುದು ಕಾಂಗ್ರೆಸ್‌ನ ಅತಿಯಾದ ತುಷ್ಟೀಕರಣ ರಾಜಕಾರಣದ ಮುಂದುವರಿದ ಭಾಗವಾಗಿದೆ. ರಾಜ್ಯ ಕಾಂಗ್ರೆಸ್ ಸರಕಾರದ ಈ ನಿರ್ಧಾರವನ್ನು ಬಿಜೆಪಿ ಜಿಲ್ಲಾ ಘಟಕವು ತೀವ್ರವಾಗಿ ವಿರೋಧಿಸುತ್ತದೆ ಎಂದು ಅವರು ತಿಳಿಸಿದರು.

ಡಾ! ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಲ್ಲಿ ಧರ್ಮಾಧಾರಿತ ಮೀಸಲಾತಿಗೆ ಯಾವುದೇ ಅವಕಾಶವಿಲ್ಲ. ಇದಕ್ಕೆ ಸಂಬಂಧ ಪಟ್ಟಂತೆ ಸುಪ್ರೀಂ ಕೋರ್ಟ್ ಸಹಿತ ವಿವಿಧ ಕೋರ್ಟ್‌ಗಳೂ ತೀರ್ಪು ಕೊಟ್ಟಿವೆ. ಆದರೂ ಈ ರೀತಿಯ ಅತಿರೇಕದ ನಿರ್ಧಾರಗಳನ್ನು ತೆಗೆದುಕೊಂಡಿರುವ ಕಾಂಗ್ರೆಸ್‌ನ ನಡೆ ಡಾ! ಅಂಬೇಡ್ಕರ್‌ ಅವರ ಸಂವಿಧಾನಕ್ಕೆ ಕಾಂಗ್ರೆಸ್ ಮಾಡಿರುವ ಘೋರ ಅಪಮಾನವಾಗಿದೆ. ಬಹುಸಂಖ್ಯಾತ ಹಿಂದೂಗಳ ಹಿತಕ್ಕೆ ವಿರುದ್ಧವಾಗಿ ತೆಗೆದುಕೊಂಡಿರುವ ಈ ಸಂವಿಧಾನ ಬಾಹೀರ ನಿರ್ಧಾರಗಳಿಂದ ರಾಜ್ಯ ಕಾಂಗ್ರೆಸ್ ಸರ್ಕಾರ ಕೂಡಲೇ ಹಿಂದಕ್ಕೆ ಸರಿಯಬೇಕು. ಇದಕ್ಕೆ ಪೂರಕವೆಂಬಂತೆ ಮುಸ್ಲಿಂ ತುಷ್ಟೀಕರಣಕ್ಕಾಗಿ ಅಗತ್ಯ ಬಿದ್ದರೆ ಸಂವಿಧಾನ ಬದಲಾಗುತ್ತದೆ ಎಂಬ ಸಂವಿಧಾನ ವಿರೋಧಿ ಹೇಳಿಕೆ ನೀಡಿರುವ ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ರಾಜ್ಯದ ಜನತೆಯ ಕ್ಷಮೆ ಕೋರಬೇಕು ಎಂದು ಕಿಶೋರ್ ಕುಮಾರ್ ಕುಂದಾಪುರ ಅಗ್ರಹಿಸಿದರು.

ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ, ಬಿತ್ತಿ ಪತ್ರಗಳನ್ನು ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು. ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ನೇತೃತ್ವದಲ್ಲಿ ಅಪರ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಅಹವಾಲು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ದಿನಕರ ಶೆಟ್ಟಿ ಹೆರ್ಗ, ರೇಷ್ಮಾ ಉದಯ ಶೆಟ್ಟಿ, ಎಸ್.ಸಿ. ಮೋರ್ಚಾ ರಾಜ್ಯ ಉಪಾಧ್ಯಕ್ಷ ದಿನಕರ ಬಾಬು, ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಪಕ್ಷದ ಮುಖಂಡರುಗಳಾದ ರಾಜೇಶ್ ಕಾವೇರಿ, ಸದಾನಂದ ಉಪ್ಪಿನಕುದ್ರು, ಮಹಾವೀರ ಹೆಗ್ಡೆ, ರತ್ನಾಕರ್ ಇಂದ್ರಾಳಿ, ಶಿವಕುಮಾರ್ ಅಂಬಲಪಾಡಿ, ರಾಘವೇಂದ್ರ ಕುಂದರ್, ಶ್ರೀಕಾಂತ್ ನಾಯಕ್, ಉದಯ ಕೋಟ್ಯಾನ್, ವಿಜಯ ಕುಮಾರ್ ಉದ್ಯಾವರ, ಶ್ರೀನಿಧಿ ಹೆಗ್ಡೆ, ಗಿರೀಶ್ ಎಮ್. ಅಂಚನ್, ಪ್ರಿಯದರ್ಶಿನಿ ದೇವಾಡಿಗ, ವಿಜಯ ಕೊಡವೂರು, ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ಸಂಧ್ಯಾ ರಮೇಶ್, ಕಮಲಾಕ್ಷ ಹೆಬ್ಬಾರ್, ರುಡಾಲ್ಫ್ ಡಿಸೋಜ, ದಿನೇಶ್ ಅಮೀನ್, ಜಿತೇಂದ್ರ ಶೆಟ್ಟಿ, ಸುರೇಶ್ ಶೆಟ್ಟಿ ಗೋಪಾಡಿ, ಜಗದೀಶ್ ಆಚಾರ್ಯ ಕಪ್ಪೆಟ್ಟು, ಶ್ರೀಕಾಂತ್ ಕಾಮತ್, ನಳಿನಿ ಪ್ರದೀಪ್ ರಾವ್, ಪುಷ್ಪರಾಜ್ ಶೆಟ್ಟಿ, ಸುಧೀರ್ ಕೆ.ಎಸ್., ಕೆ. ದಿವಾಕರ್ ಶೆಟ್ಟಿ, ಗೋಪಾಲಕೃಷ್ಣ ರಾವ್, ಗೋಪಾಲ್ ಕಾಂಚನ್, ಶ್ರೀವತ್ಸ, ನಿತಿನ್ ಪೈ ಹಾಗೂ ಉಡುಪಿ ನಗರಸಭಾ ಸದಸ್ಯರು ಮತ್ತು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

Categories
ಕರಾವಳಿ ಸುದ್ದಿ

ಎಂ ಐ ಟಿ ಕುಂದಾಪುರದಲ್ಲಿ ರಾಜ್ಯಮಟ್ಟದ ಸಾವಿಷ್ಕಾರ್ -25

ಮೂಡ್ಲಕಟ್ಟೆ : ಕುಂದಾಪುರದ ಪ್ರತಿಷ್ಟಿತ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ರಾಜ್ಯಮಟ್ಟದ ಅಂತರ್ ಕಾಲೇಜು ತಾಂತ್ರಿಕ ಮತ್ತು ಸಾಂಸ್ಕೃತಿಕ ಸ್ಪರ್ಧಾಕೂಟ “ಸಾವಿಷ್ಕಾರ್ 2025” ಏಪ್ರಿಲ್ 2 ಮತ್ತು 3 ರಂದು ಬಹಳ ವಿಜೃಂಭಣೆಯಿಂದ  ನಡೆಯಲಿದೆ.

ರಾಜ್ಯಧ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಲಿದ್ದು, ತಾಂತ್ರಿಕ ಮತ್ತು ಸಾಂಸ್ಕೃತಿಕ ಸಂಬಂಧಿಸಿದ ಹಲವು ಸ್ಪರ್ಧೆಗಳಲ್ಲಿ ತಮ್ಮ ಪ್ರತಿಭೆಯನ್ನು ತೋರ್ಪಡಿಸಲಿದ್ದಾರೆ. ಎಲ್ಲಾ ಸ್ಪರ್ಧೆಗಳ ವಿಜೇತರಿಗೆ ನಗದು ಹಣ ಸಹಿತ ಬಹುಮಾನಗಳನ್ನು ನೀಡಿ ಗೌರವಿಸಲಾಗುವುದು. ಸ್ಪರ್ಧಾಕೂಟದ ವಿಶೇಷ ಆಕರ್ಷಣೆಯಾಗಿ ಹಲವು ಆಕರ್ಷಕ ಮಾದರಿಗಳ ಕಾರು ಮತ್ತು ಬೈಕ್ ಗಳ ಪ್ರದರ್ಶನ ನಡೆಯಲ್ಲಿದ್ದು, ಅಲ್ಲದೆ ಅನುಭವಿ ತಜ್ಞರಿಂದ ಬೈಕ್ ಸ್ಟಂಟ್ ಪ್ರದರ್ಶನ ಕೂಡ ನಡೆಯಲಿದೆ.

ಸಂಜೆಯ ಆಕರ್ಷಣೆಯಾಗಿ ಏಪ್ರಿಲ್ 2 ರಂದು, ಖ್ಯಾತ ಗಾಯಕಿ ದಿವ್ಯ ರಾಮಚಂದ್ರ ಮತ್ತು ತಂಡ ದಿಂದ ಮ್ಯೂಸಿಕಲ್ ನೈಟ್, ಕಾರ್ಯಕ್ರಮ ನಡೆಯಲಿದ್ದು , ಹಾಗೆಯೇ ಪ್ರಸಿದ್ಧ ರಾಪ್ ಗಾಯಕ ರಾಹುಲ್ ದಿಟೋ ಪ್ರಥಮ ಬಾರಿಗೆ ಕುಂದಾಪುರದ ಜನರನ್ನು ರಂಜಿಸಲು ಆಗಮಿಸುತ್ತಿದ್ದಾರೆ.

ಎಪ್ರಿಲ್ 3 ರಂದು ಪ್ರಮುಖ ಆಕರ್ಷಣೆಯಾಗಿ ಸವಾರಿ ಮ್ಯುಸಿಕ್ ಬ್ಯಾಂಡ್ ತಂಡದಿಂದ ಕಾರ್ಯಕ್ರಮ ನಡೆಯಲಿಕ್ಕಿದೆ. ಎಪ್ರಿಲ್ 4 ರಂದು ಕಾಲೇಜಿನ ಇಪ್ಪತ್ತನೇ ವರ್ಷದ ಸಂಭ್ರಮಾಚರಣೆಯ ಪ್ರಯುಕ್ತ ಸಾಧಕ ಹಳೆ ವಿದ್ಯಾರ್ಥಿಗಳಿಗೆ ಸನ್ಮಾನ ನಡೆಯಲಿಕ್ಕಿದ್ದು ಅದೇ ದಿನ ಸಂಜೆ ಕಾಲೇಜಿನ ವಾರ್ಷಿಕೋತ್ಸವವನ್ನು ಹಮ್ಮಿಕೊಳ್ಳಲಾಗಿದೆ.

Categories
ಧಾರ್ಮಿಕ

ಕೃಷ್ಣಮಠಕ್ಕೆ ಸಾಹಿತಿ ದುಂಡಿರಾಜ್‌ ಭೇಟಿ

ಉಡುಪಿ : ತಮ್ಮ ಹನಿಗವನದಿಂದ ಅಪಾರ

ಅಭಿಮಾನಿಗಳನ್ನು ಗಳಿಸಿಕೊಂಡಿರುವ ಖ್ಯಾತ

ಸಾಹಿತಿ  ಶ್ರೀಯುತ ದುಂಡಿರಾಜ್ ಅವರು 

ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ

ಪರ್ಯಾಯ ಶ್ರೀಪಾದರಿಂದ ಕೋಟಿಗೀತಾ

ಲೇಖನ ದೀಕ್ಷೆಯನ್ನು ಪಡೆದುಕೊಂಡರು

Categories
ಧಾರ್ಮಿಕ

ವಿಶ್ವಾವಸು ಸಂವತ್ಸರದಲ್ಲಿ ಲೋಕಕಲ್ಯಾಣವಾಗಲಿ

ಉಡುಪಿ : ಯುಗಾದಿಯೊಂದಿಗೆ ನೂತನ ವಿಶ್ವಾವಸು ಸಂವತ್ಸರ  ಆರಂಭವಾಗಲಿದ್ದು, ಶ್ರೀಕೃಷ್ಣ ಭಕ್ತರಿಗೆ ಹಾರ್ದಿಕ ಶುಭಾಶಯಗಳನ್ನು ಉಡುಪಿ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ತಿಳಿಸಿದ್ದಾರೆ

ನೂತನ ಸಂವತ್ಸರ/ವರ್ಷ ಹೊಸ ಹರ್ಷ ತರಲಿ. ಹೊಸ ವರ್ಷದ ಹರ್ಷ ಒಂದು ದಿನಕ್ಕೆ ಸೀಮಿತವಾಗದೆ ವರ್ಷಪೂರ್ತಿ ವ್ಯಾಪ್ತವಾದರೆ ಹೊಸ ಸಂವತ್ಸರದ ಉತ್ಸಾಹಕ್ಕೆ ಅರ್ಥ ಬರಲು ಸಾಧ್ಯ.

ಚಾಂದ್ರಮಾನ ಯುಗಾದಿಯ ಬೇವು ಬೆಲ್ಲದ ಸ್ಫೂರ್ತಿ ವರ್ಷಪೂರ್ತಿ ಇರುವಂತೆ ದೇವರು ಅನುಗ್ರಹಿಸಲಿ. ಲೋಕಕ್ಕೆ ಕ್ಷೇಮವಾಗಲಿ, ಜನರಿಗೆ ಒಳಿತಾಗಲೆಂದು ದೇವರನ್ನು ಪ್ರಾರ್ಥಿಸೋಣ. ಯುಗಾದಿಯ ಸಾರ್ಥಕ ಆಚರಣೆಗೆ ಭಗವದನುಗ್ರಹವಿರಲಿ. ಕೋಟಿ ಗೀತಾ ಲೇಖನ ಯಜ್ಞದಲ್ಲಿ ಭಗವದ್ಭಕ್ತರು ಯುಗಾದಿಯ ಮೊದಲ ದಿನವೇ ತೊಡಗಿ ನ.30ರಂದು ನಡೆಯುವ ಗೀತಾ ಜಯಂತಿಗೆ ಮೊದಲು ಶ್ರೀಕೃಷ್ಣನಿಗೆ ಸಮರ್ಪಿಸುವ ಸಂಕಲ್ಪ ಕೈಗೊಳ್ಳಲಿ. ವಿಶ್ವಾವಸು ಸಂವತ್ಸರ ಭಗವದ್ಗೀತಾ ಸಂವತ್ಸರವಾಗಿ ಲೋಕಕ್ಕೆ ಒಳಿತುಮಾಡಲಿ.

ಲೋಕಾಃ ಸಮಸ್ತಾಃ ಸುಖಿನೋ ಭವಂತು

Categories
ಕರಾವಳಿ ಸುದ್ದಿ

65 ಲಕ್ಷ ರೂಪಾಯಿ ಮೊತ್ತದ ಬೈರಂಪಳ್ಳಿ ಉಪ ಆರೋಗ್ಯ ಕೇಂದ್ರ

ಕಾಪು  : ಕಾಪು ವಿಧಾನಸಭಾ ಕ್ಷೇತ್ರದ ಬೈರಂಪಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಉಪ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣಕ್ಕೆ 65 ಲಕ್ಷ ರೂಪಾಯಿ ಅನುದಾನದ ಮಂಜೂರಾಗಿದ್ದು ಇದರ ಗುದ್ದಲಿ ಪೂಜೆಯನ್ನು  ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ನೆರವೇರಿಸಿದರು.

ಈ ಸಂದರ್ಭದಲ್ಲಿ ಬೈರಂಪಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರಸಾದ್ ಮಲ್ಯ, ಉಪಾಧ್ಯಕ್ಷರಾದ ಅಮ್ಮಣ್ಣಿ ಶೆಟ್ಟಿ, ಸದಸ್ಯರಾದ ಜಿಯಾನಂದ ಹೆಗಡೆ, ಹರ್ಷಿತ ಕುಮಾರ್, ರಾಧಿಕಾ ಭಟ್, ತಾಲೂಕು ಆರೋಗ್ಯಾಧಿಕಾರಿಗಳಾದ ವಾಸುದೇವ್ ಉಪಾಧ್ಯಾಯ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಅರ್ಚನಾ ಹಾಗೂ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಸ್ಥಳೀಯರು ಉಪಸ್ಥಿತರಿದ್ದರು.

Categories
ಇತರೆ

ಯುಗ ಯುಗಾದಿ ಕಳೆದರೂ ಯುಗಾದಿ ಮತ್ತೆ ಬರುತಿದೆ

ಭಾರತವು ತನ್ನ ಸಂಸ್ಕೃತಿ ಮತ್ತು ಹಬ್ಬಗಳಿಗೆ ಪ್ರಪಂಚದಾದ್ಯಂತ ಹೆಸರುವಾಸಿಯಾಗಿದೆ. ಭಾರತದ ವಿವಿಧ ಪ್ರದೇಶಗಳಲ್ಲಿ ವಿಭಿನ್ನ ಭಾಷೆಗಳನ್ನು ಮಾತನಾಡುವಂತೆಯೇ, ವಿವಿಧ ಪ್ರದೇಶಗಳಲ್ಲಿ ವಿಶೇಷ ಹಬ್ಬಗಳನ್ನು ಆಚರಿಸಲಾಗುತ್ತದೆ, ಅಂತಹ ಒಂದು ವಿಶೇಷ ಹಬ್ಬವೆಂದರೆ ಯುಗಾದಿ,

ಇದು ದಕ್ಷಿಣ ಭಾರತದಲ್ಲಿ ಭವ್ಯ ಉತ್ಸವದ ಸ್ಥಾನಮಾನವನ್ನು ಹೊಂದಿದೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ಯುಗಾದಿ ಹಬ್ಬವನ್ನು ಚೈತ್ರ ಮಾಸದ ಶುಕ್ಲ ಪಕ್ಷದ ಪ್ರತಿಪದದಂದು ಆಚರಿಸಲಾಗುತ್ತದೆ. ಈ  ಹಬ್ಬವನ್ನು ದಕ್ಷಿಣ ಭಾರತದಾದ್ಯಂತ ಬಹಳ ವೈಭವದಿಂದ ಆಚರಿಸಲಾಗುತ್ತದೆ. ಈ ಹಬ್ಬವನ್ನು ಹಿಂದೂ ಹೊಸ ವರ್ಷದ ಆಗಮನದ ಸಂತೋಷವನ್ನು ಗುರುತಿಸಲು ಆಚರಿಸಲಾಗುತ್ತದೆ. ಕರ್ನಾಟಕ, ಕೇರಳ, ತೆಲಂಗಾಣ, ಆಂಧ್ರಪ್ರದೇಶ ಮತ್ತು ಕೊಂಕಣಿ ಸಮುದಾಯದ ಜನರು ಈ ಹಬ್ಬವನ್ನು ಯುಗಾದಿ, ತಮಿಳುನಾಡಿನಲ್ಲಿ ಯುಗಾದಿ, ಮಹಾರಾಷ್ಟ್ರದಲ್ಲಿ ಗುಡಿ ಪಾಡ್ವ, ಗೋವಾದಲ್ಲಿ ಸಂವತ್ಸರ ಪಾಡ್ವ, ರಾಜಸ್ಥಾನದಲ್ಲಿ ಥಾಪನ, ಕಾಶ್ಮೀರದಲ್ಲಿ ನವರೆಹ್, ಮಣಿಪುರದಲ್ಲಿ ಸಜಿಬು ನೊಂಗ್ಮಾ ಪಂಬಾ ಎಂದು ಆಚರಿಸುತ್ತಾರೆ.
ರಾಮ ಮತ್ತು ಯುಧಿಷ್ಠಿರರ ಪಟ್ಟಾಭಿಷೇಕವೂ ಇದೇ ದಿನದಂದು ನಡೆಯಿತು ಎಂದು ಹೇಳಲಾಗುತ್ತದೆ.
ಯುಗಾದಿ ಎಂಬ ಪದವು ಎರಡು ಶ್ರೇಷ್ಠ ಪದಗಳ ಸಂಯೋಜನೆಯಾಗಿದೆ. ಯುಗ ಅಂದರೆ ಅವಧಿ; ಮತ್ತು ಆದಿ ಅಂದರೆ ಆರಂಭ. ಆದ್ದರಿಂದ, ಯುಗಾದಿ ಎಂದರೆ ಅಕ್ಷರಶಃ ಹೊಸ ವರ್ಷದ ಆರಂಭ.
ಯುಗಾದಿ ಸೃಷ್ಟಿಯ ಆರಂಭಕಾಲ. ಯುಗ ಮತ್ತು ಆದಿ ಶಬ್ದಗಳೇ ‘ಯುಗಾದಿ’ .ದಕ್ಷಿಣ ಭಾರತದಲ್ಲಿ ಚಂದ್ರನ ಚಲನೆಯನ್ನು ಗುರುತಿಸಿ ಮಾಡುವ ಯುಗಾದಿ ಚಾಂದ್ರಮಾನ ಯುಗಾದಿ ಆಚರಿಸುತ್ತಾರೆ. ಸೂರ್ಯ ಮೇಷ ರಾಶಿಗೆ ಬಂದಾಗ ಸೌರಮಾನ ಯುಗಾದಿ ಆಚರಿಸುತ್ತಾರೆ ಇದನ್ನು ಉಡುಪಿ ಮಂಗಳೂರು ಕಡೆ ಉತ್ತರ ಭಾರತದ ಹಲವು ಕಡೆಗಳಲ್ಲಿ ಸೌರಮಾನ ಯುಗಾದಿ ಆಚರಿಸುತ್ತಾರೆ.
ಯುಗಾದಿ ಹಬ್ಬವನ್ನು ವಸಂತ ಋತುವಿನ ಆರಂಭದೊಂದಿಗೆ ಆಚರಿಸುತ್ತಾರೆ. ಪ್ರತಿ ಹಬ್ಬ ಹುಣ್ಣಿಮೆಗಳನ್ನು ‘ಪ್ರಕೃತಿ’ ಯನ್ನು ಮೂಲವಾಗಿಟ್ಟುಕೊಂಡು ಆಚರಿಸುವುದರಿಂದ ಹಬ್ಬಗಳು ವಿಶೇಷವಾಗುತ್ತದೆ.

ಯುಗಾದಿ ಹಬ್ಬದ ಪೌರಾಣಿಕ ಹಿನ್ನೆಲೆಯು ಈ ರೀತಿ ಇದೆ. ಬ್ರಹ್ಮನು ಜಗತ್ತನ್ನು ಸೃಷ್ಟಿ ಮಾಡಿದ ದಿನವೆಂದು, ಶ್ರೀರಾಮಚಂದ್ರನು ರಾವಣನ ಮೇಲೆ ಜಯ ಸಾಧಿಸಿ, ಕಷ್ಟದ ದಿನಗಳನ್ನೆಲ್ಲ ಕಳೆದು ಸೀತಾಮಾತೆ, ಲಕ್ಷ್ಮಣನೊಂದಿಗೆ ಸಂತೋಷದಿಂದ ಅಯೋಧ್ಯೆಗೆ ಬಂದ ದಿನವೆಂದು, ಹಾಗೂ ಸೋಮಕಾಸುರ ಎಂಬ ರಾಕ್ಷಸನು ವೇದಗಳನ್ನು ಚಾಪೆಯಂತೆ ಸುತ್ತಿ ಕದ್ದೊಯ್ದು ಸಾಗರದ ಆಳದಲ್ಲಿ ಮುಚ್ಚಿಟ್ಟಿದ್ದರಿಂದ, ಮಹಾ ವಿಷ್ಣು ತನ್ನ ಮೊದಲ ಅವತಾರವಾದ ಮತ್ಸಾ ವತಾರದಲ್ಲಿ ಹೋಗಿ ಆ ವೇದಗಳನ್ನು ತಂದು ಬ್ರಹ್ಮನಿಗೆ ಕೊಟ್ಟ ದಿನವೆಂದು,ಆನಂತರ ಬ್ರಹ್ಮನು ಸೃಷ್ಟಿ ಕಾರ್ಯ ಆರಂಭ ಮಾಡಿದನೆಂದು, ಇಂಥ ಹಲವು ಶುಭಾರಂಭಗಳಿಂದ ‘ಯುಗಾದಿ ಆಚರಣೆ ಬಂದಿದೆ ಎಂದು ತಿಳಿಸಲಾಗಿದೆ.

ಯುಗಾದಿ ಪವಿತ್ರವಾದ ದಿನ, ನಮಗೆ ಎರಡು ಶಕೆಗಳಿವೆ, ಶಾಲಿವಾಹನ ಶಕೆ ವಿಕ್ರಮ ನಾಮಶಕೆ, ಎರಡು ರೀತಿಯ ಶಕೆಗಳನ್ನು ಉಪಾಸನೆ ಮಾಡುತ್ತೇವೆ. ನಮ್ಮ ದಕ್ಷಿಣ ಭಾರತದಲ್ಲಿ ಶಾಲಿವಾಹನ ಶಕೆ ಆಚರಣೆ ಇದ್ದರೆ ಉತ್ತರ ಭಾರತದ ಕಡೆ ವಿಕ್ರಮನಾಮಶಕೆ ಆಚರಿಸುತ್ತಾರೆ. ನಾವು ಸಂಕಲ್ಪ ಮಾಡುವಾಗ, ಪ್ರವರದಲ್ಲಿ, ‘ಶುಭೆ -ಶೋಭನೇ ಮುಹೂರ್ತೇ ಆದ್ಯ ಬ್ರಹ್ಮಣ ದ್ವಿತೀಯ ಪರಾರ್ಧೇ ಶ್ವೇತ ವರಾಹ ಕಲ್ವೇ ವೈವಸ್ವತ ಮನ್ಮಂತರೇ- ಕಲಿಯುಗೇ, ಪ್ರಥಮಪಾದೇ, ಜಂಬೂದ್ವೀಪೇ, ಭಾರತವರ್ಷೇ, ಭರತಖಂಡೇ, ದಂಡ ಕಾರಣ್ಯ, ಗೋದಾವರ್ಯಾ: ದಕ್ಷಿಣ ತೀರೇ, ಶಾಲಿವಾಹನಶಕೇ, ಬೌದ್ಧಾವತಾರೇ, ರಾಮ ಕ್ಷೇತ್ರೇ ಅಸ್ಮಿನ್ ವರ್ತಮಾನೇ ವ್ಯವಹಾರಿಕೇ ಚಾಂದ್ರಮಾನೇನ ಪ್ರಭವಾದಿ ಷಷ್ಠಿಸಂವತ್ಸರೇ, ಈ ರೀತಿ ಸಂಕಲ್ಪ ಪ್ರವರಗಳಲ್ಲಿ, ಪೂಜೆ ಶುಭ ಕಾರ್ಯಗಳಲ್ಲಿ ಹೇಳಿಕೊಂಡೇ ಮಾಡುತ್ತೇವೆ. ಮೊದಲ ಐತಿಹಾಸಿಕ ಸಾಮ್ರಾಜ್ಯದ ಅರಸ ‘ಶಾಲಿವಾಹನ ತನ್ನ ಆಡಳಿತಾವಧಿಯಲ್ಲಿ ಧರ್ಮವನ್ನು ರಕ್ಷಣೆ ಮಾಡಿ ಸನಾತನ ಧರ್ಮವನ್ನು ಸ್ಥಾಪನೆ ಮಾಡಿದಂಥ ಮಹಾಪುರುಷ. ಶಾತ ಎಂದರೆ ಕುದುರೆ ಎಂದು ಕುದುರೆಯನ್ನು ವಾಹನವಾಗಿ ಉಳ್ಳವರೆಂದು ಹೇಳುತ್ತಾರೆ.ಶಾತವಾಹನರು ಬ್ರಾಹ್ಮಣ ಜಾತಿಗೆ ಸೇರಿದ್ದು, ವಿಷ್ಣು ಮತ್ತು ಮತ್ಸ ಪುರಾಣಗಳಲ್ಲಿ ಮಾಹಿತಿ ದೊರೆಯುತ್ತದೆ.

ಯುಗಾದಿಯಂದು ಬೇವು ಬೆಲ್ಲ ಕೊಡುವಾಗ ಸ್ತೋತ್ರವನ್ನು ಹೇಳುತ್ತಾರೆ.
ಶತಾಯುರ್ವಜ್ರ ದೇಹಾಯ ಸರ್ವ ಸಂಪತ್ಕರಾಯ ಚ ಸರ್ವಾರಿಷ್ಟ ವಿನಾಶಾಯ ನಿಂಬಕಂದಲ ಭಕ್ಷಣಮ್
ನೂರು ವರ್ಷಗಳ ಕಾಲ ವಜ್ರದೇಹಿಯಾಗಿರಲು, ಸರ್ವ ಸಂಪತ್ತುಗಳನ್ನು ಪಡೆಯಲು ಮತ್ತು ಸಕಲ ಅನಿಷ್ಠ ನಿವಾರಣೆಗಾಗಿಯೂ ಬೇವಿನ ಹೊಸ ಚಿಗುರನ್ನು ತಿನ್ನಬೇಕು.
ಈ ಹಬ್ಬದ ಸಮಯದಲ್ಲಿ ತಯಾರಿಸಲಾಗುವ ಅತ್ಯಂತ ವಿಶೇಷ ಖಾದ್ಯವೆಂದರೆ ಯುಗಾದಿ ಪಚಡಿ. ಇದನ್ನು ಆರು ವಿಭಿನ್ನ ಪದಾರ್ಥಗಳಿಂದ ತಯಾರಿಸಲಾಗುತ್ತದೆ, ಅವುಗಳೆಂದರೆ – ಹಸಿ ಮಾವು, ಉಪ್ಪು, ಕರಿಮೆಣಸು, ಹುಣಸೆಹಣ್ಣು, ಬೇವಿನ ಹೂವುಗಳು ಮತ್ತು ಬೆಲ್ಲ. ಯುಗಾದಿಯ ಸಂದರ್ಭದಲ್ಲಿ ಈ ಖಾದ್ಯವನ್ನು ತಯಾರಿಸುವ ಮುಖ್ಯ ಉದ್ದೇಶ ಮಾನವ ಜೀವನದಲ್ಲಿನ ಎಲ್ಲಾ ಭಾವನೆಗಳ ಮಿಶ್ರಣದ ಸಂದೇಶವನ್ನು ನೀಡುವುದು.ಸುಖ ದುಃಖ ಗಳನ್ನು ಸಮಾನ ರೀತಿಯಲ್ಲಿ ಸ್ವೀಕರಿಸಿದರೆ ಜೀವನವು ಸುಗಮವಾಗಿ ಸಾಗುವುದೆಂಬ ಸಂದೇಶ ಬೇವು ಬೆಲ್ಲದ ಸೇವನೆಯಲ್ಲಿ ಅಡಕವಾಗಿದೆ. ಪೂಜೆಯ ನಂತರ, ಈ ಕಷಾಯವನ್ನು ಎಲ್ಲರಿಗೂ ನೀಡಲಾಗುತ್ತದೆ. ಇದಲ್ಲದೆ, ಇದನ್ನು ಹತ್ತಿರದ ಜನರಲ್ಲಿಯೂ ವಿತರಿಸಲಾಗುತ್ತದೆ. ಈ ಕಷಾಯವನ್ನು ಕುಡಿಯುವುದರಿಂದ ಹವಾಮಾನ ಬದಲಾವಣೆಗಳಿಂದ ಉಂಟಾಗುವ ರೋಗಗಳನ್ನು ತಡೆಗಟ್ಟಬಹುದು ಎಂದು ನಂಬಲಾಗಿದೆ.
ಹಬ್ಬದ ಆಚರಣೆಗಳಲ್ಲೂ ಆರೋಗ್ಯ ಸೂತ್ರವನ್ನು ಹೊಂದಿದ ಏಕೈಕ ದೇಶ ಭಾರತ. ಸಮಸ್ತ ಬಂಧು ಭಗಿನಿಯರಿಗೆ ಯುಗಾದಿ ಹಬ್ಬದ ಶುಭಾಶಯಗಳು

ಸ್ವರ್ಣಾ ಕುಂದಾಪುರ 

Categories
ರಾಜ್ಯ ಸುದ್ದಿ

ಆರೆಸ್ಸೆಸ್ ಕಚೇರಿಗೆ ಮೋದಿ ಭೇಟಿ : ಸಾಹಿತಿ ಎಸ್.ಎಲ್.ಭೈರಪ್ಪ ಹರ್ಷ

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರು ಮಹಾರಾಷ್ಟ್ರದ ನಾಗ್ಪುರದಲ್ಲಿರುವ ಆರ್‌ಎಸ್‌ಎಸ್ ಕಚೇರಿಗೆ ಭಾನುವಾರ ಭೇಟಿ ನೀಡುತ್ತಿರುವುದಕ್ಕೆ ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ ಸಂತಸ ವ್ಯಕ್ತಪಡಿಸಿದ್ದಾರೆ.

ಶನಿವಾರ ಪ್ರತಿಕ್ರಿಯೆ ನೀಡಿರುವ ಭೈರಪ್ಪ ಅವರು, ಮೋದಿ ಆರ್ ಎಎಸ್ ಕಚೇರಿಗೆ ತೆರಳುತ್ತಿರುವುದನ್ನು ತಿಳಿದು ಸಂತೋಷವಾಯಿತು. ಕೆಲ ತಿಂಗಳುಗಳ ಹಿಂದೆ ನಾನು ನಾಗ್ಪುರದಲ್ಲಿರುವ ಸಂಘದ ಕಚೇರಿಗೆ ಭೇಟಿ ನೀಡಿದ್ದೆ. ಈತನಕ ಮೋದಿ ಬಂದಿಲ್ಲ ಎಂದು ಅಲ್ಲಿಯವರು ಹೇಳಿದಾಗ ಏಕೆ ಎಂಬ ಪ್ರಶ್ನೆ ಮೂಡಿತ್ತು. ಈಗ ಸಮಾಧಾನವೆನಿಸುತ್ತಿದೆ ಎಂದಿದ್ದಾರೆ. ಮೋದಿ ತಮ್ಮ ಸಾಮಾಜಿಕ ಜೀವನವನ್ನು ಆರಂಭಿಸಿದ್ದೇ ಸ್ವಯಂಸೇವಕನಾಗಿ. ಅವರ ಈ ಭೇಟಿ ಯುವಕರಿಗೆ, ಸ್ವಯಂಸೇವಕರಿಗೆ ಸ್ಫೂರ್ತಿ ನೀಡುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.

Categories
ರಾಷ್ಟ್ರೀಯ ಸುದ್ದಿ

ಇಂದು ಸಂಘದ ಕೇಂದ್ರ ಕಚೇರಿಗೆ ಮೋದಿ ಭೇಟಿ

ಮುಂಬೈ : ಪ್ರಧಾನಿ ನರೇಂದ್ರ ಮೋದಿ ನಾಗ್ಪುರದಲ್ಲಿರುವ ಆರ್‌ಎಸ್‌ಎಸ್ ಮುಖ್ಯ ಕಚೇರಿಗೆ ಭಾನುವಾರ ಭೇಟಿ ನೀಡ ಲಿದ್ದಾರೆ. ಪ್ರಧಾನಿಯೊಬ್ಬರು ಸಂಘದ ಕಚೇರಿಗೆ ಭೇಟಿ ನೀಡುತ್ತಿರುವುದು ಇದೇ ಮೊದಲು.

ಈ ವೇಳೆ ಅಲ್ಲಿನ ಸ್ಮೃತಿ ಮಂದಿರದಲ್ಲಿ ಆರ್‌ಎಸ್‌ಎಸ್ ಸಂಸ್ಥಾಪಕ  ಡಾ.ಕೆ.ಬಿ.ಹೆಡಗೇವಾ‌ರ್ ಹಾಗೂ 2ನೇ ಸರಸಂಘಚಾಲಕ ಗುರೂಜಿ ಗೋಳವಲಕರ್ ಅವರ ಸ್ಮಾರಕಕ್ಕೆ ಗೌರವ ಸಲ್ಲಿಸಲಿದ್ದಾರೆ. ಅಂದೇ ಆರ್‌ಎಸ್‌ಎಸ್‌ನ ಬಹುಮುಖ್ಯ ಯುಗಾದಿ ಉತ್ಸವ ನಡೆಯಲಿದ್ದು, ಅದರಲ್ಲಿ ಭಾಗಿಯಾಗಲಿದ್ದಾರೆ.