ಶುಭ ದಿನದ ಪಂಚಾಂಗ
ಕಲಿಯುಗಾಬ್ದ 5127
ವಿಶ್ವಾವಸು ಸಂವತ್ಸರ
ಉತ್ತರಾಯಣ
ಹೇಮಂತ: ಋತು
ಪುಷ್ಯ: ಮಾಸ
ಕೃಷ್ಣ ಪಕ್ಷ
ದ್ವಾದಶಿ : ತಿಥಿ
ಜ್ಯೇಷ್ಠ : ನಕ್ಷತ್ರ
ಗುರುವಾರ
15.01.2026
ಈ ದಿನ ಎಲ್ಲರಿಗೂ ಶುಭವಾಗಲಿ


ಬೈಂದೂರು : ಠಾಣಾ ವ್ಯಾಪ್ತಿಯ ಅರೆ ಶಿರೂರು ಹೆರಂಜಲು ಇಂದ ಹೊಸರು ಕಡೆಗೆ ಮೋಟಾರ್ ಸೈಕಲ್ KA20HB4869 ನಲ್ಲಿ ರೇಖಾ ಪೂಜಾರಿಯವರು ಹೊರಟಾಗ ದಾರಿ ಮಧ್ಯೆ ಅರೆ ಶಿರೂರು ಎಂಬಲ್ಲಿ ಮೋಟಾರ್ ಸೈಕಲ್ ತಾಂತ್ರಿಕ ದೋಷದಿಂದ ಅಗ್ನಿ ಅವಘಡಕ್ಕೆ ಒಳಗಾಗಿದ್ದು. ಸಂಪೂರ್ಣ ಸುಟ್ಟು ಕರಕಲಾಗಿರುತ್ತದೆ. ರೇಖಾ ಪೂಜಾರಿಯವರಿಗೆ ಯಾವುದೇ ರೀತಿಯ ಪ್ರಾಣ ಹಾನಿ ಆಗಿರುವುದಿಲ್ಲ. ಸ್ಥಳಕ್ಕೆ ಅಗ್ನಿಶಾಮಕ ವಾಹನವನ್ನು ಕರೆದುಕೊಂಡು ಮೋಟಾರ್ ಸೈಕಲ್ ಗೆ ತಗಲಿದ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಿರುತ್ತಾರೆ.
ಸಂಕ್ರಾಂತಿ ಎಂದರೆ ಕೇವಲ ದಿನಾಂಕ ಬದಲಾವಣೆ ಅಲ್ಲ;
ಅದು ಪ್ರಕೃತಿಯ ಲಯಕ್ಕೆ ನಮ್ಮ ಬದುಕನ್ನು ಹೊಂದಿಸುವ ಸಂಸ್ಕೃತಿ.
ಸೂರ್ಯ ಉತ್ತರಾಯಣಕ್ಕೆ ಪ್ರವೇಶಿಸುವ ಈ ಪವಿತ್ರ ಸಮಯದಲ್ಲಿ,
ಮಾನವನ ಮನಸ್ಸು, ದೇಹ ಮತ್ತು ಪ್ರಕೃತಿ — ಮೂರೂ ಒಂದಾಗಿ ನಿಂತಿರುತ್ತವೆ.
ಸಂಕ್ರಾಂತಿ – ಪ್ರಕೃತಿ, ಸಂಸ್ಕೃತಿ ಮತ್ತು ವೈಜ್ಞಾನಿಕ ಜೀವನದ ಸಂಗಮ
ಸಂಕ್ರಾಂತಿ ಭಾರತೀಯ ಸಂಸ್ಕೃತಿಯ ಪ್ರಮುಖ ಹಬ್ಬಗಳಲ್ಲಿ ಒಂದು. ಇದು ಕೇವಲ ಆಚರಣೆಗಾಗಿ ಇರುವ ಹಬ್ಬವಲ್ಲ; ಮಾನವನ ಜೀವನವನ್ನು ಪ್ರಕೃತಿಯ ಋತುಚಕ್ರಕ್ಕೆ ಹೊಂದಿಸುವ ವೈಜ್ಞಾನಿಕ ಹಾಗೂ ತಾತ್ವಿಕ ಸಂಪ್ರದಾಯವಾಗಿದೆ. ಸೂರ್ಯನು ಉತ್ತರಾಯಣಕ್ಕೆ ಪ್ರವೇಶಿಸುವ ಈ ಕಾಲಘಟ್ಟದಲ್ಲಿ, ಕೃಷಿ, ಆಹಾರ, ಆರೋಗ್ಯ, ಸಂಬಂಧಗಳು ಮತ್ತು ಸಂಸ್ಕೃತಿಯೆಲ್ಲವೂ ಪರಸ್ಪರ ಜೋಡಿಸಿಕೊಂಡಿರುತ್ತವೆ.
ಇಂದಿನ ಕಾಲದಲ್ಲಿ ಸಂಕ್ರಾಂತಿ ಹಬ್ಬದ ಆಚರಣೆಯ ಅಗತ್ಯತೆ
ಆಧುನಿಕ ಜೀವನಶೈಲಿಯಲ್ಲಿ ಮಾನವ ಪ್ರಕೃತಿಯಿಂದ ದೂರವಾಗುತ್ತಿದ್ದಾನೆ. ಋತುಮಾನಕ್ಕೆ ವಿರುದ್ಧವಾದ ಆಹಾರ, ಅತಿಯಾದ ಯಾಂತ್ರಿಕ ಜೀವನ, ಮಾನಸಿಕ ಒತ್ತಡಗಳು ಸಾಮಾನ್ಯವಾಗಿವೆ. ಈ ಸಂದರ್ಭದಲ್ಲಿ ಸಂಕ್ರಾಂತಿ ನಮಗೆ ಋತುಬದಲಾವಣೆಯ ಅರಿವು ನೀಡುತ್ತದೆ. ದೇಹ–ಮನಸ್ಸು–ಪ್ರಕೃತಿ ನಡುವೆ ಸಮತೋಲನ ಕಾಯ್ದುಕೊಳ್ಳಬೇಕೆಂಬ ಸಂದೇಶವನ್ನು ಈ ಹಬ್ಬ ನೀಡುತ್ತದೆ.
ಕೃಷಿ ಮತ್ತು ರೈತ ಸಂಸ್ಕೃತಿಯ ಗೌರವ
ಸಂಕ್ರಾಂತಿ ಕೃಷಿ ಆಧಾರಿತ ಹಬ್ಬ. ಹೊಸ ಬೆಳೆ, ಹೊಸ ಅಕ್ಕಿ, ಕಾಳುಗಳು ಹಬ್ಬದ ಕೇಂದ್ರಬಿಂದುವಾಗಿರುವುದು ರೈತನ ಶ್ರಮಕ್ಕೆ ಸಲ್ಲುವ ಗೌರವವಾಗಿದೆ. ಇಂದಿನ ಪೀಳಿಗೆಗೆ ಆಹಾರವು ಸೂಪರ್‌ಮಾರ್ಕೆಟ್‌ನಿಂದ ಬರುತ್ತದೆ ಎಂಬ ಭ್ರಮೆ ಇದೆ. ಸಂಕ್ರಾಂತಿ ಆ ಭ್ರಮೆಯನ್ನು ಮುರಿದು, ಆಹಾರದ ಮೂಲ ಕೃಷಿಯೆಂಬ ಸತ್ಯವನ್ನು ನೆನಪಿಸುತ್ತದೆ.
ಮುಂದಿನ ಪೀಳಿಗೆಗೆ ಸಂಕ್ರಾಂತಿ ಹಬ್ಬವನ್ನು ತಲುಪಿಸುವ ಮಾರ್ಗಗಳು
ಹಬ್ಬವನ್ನು ಕೇವಲ ರಜೆ ಅಥವಾ ಮನರಂಜನೆಯಂತೆ ಪರಿಚಯಿಸುವ ಬದಲು, ಅದರ ಹಿನ್ನೆಲೆ, ಉದ್ದೇಶ ಮತ್ತು ಮೌಲ್ಯಗಳನ್ನು ಮಕ್ಕಳಿಗೆ ತಿಳಿಸಬೇಕು.
ಹಬ್ಬದ ಹಿಂದೆ ಇರುವ ವೈಜ್ಞಾನಿಕ ಕಾರಣಗಳನ್ನು ಸರಳವಾಗಿ ವಿವರಿಸುವುದು. ಕುಟುಂಬದ ಹಿರಿಯರು ಹಬ್ಬದ ಕಥೆಗಳು, ಸಂಪ್ರದಾಯಗಳ ಅರ್ಥವನ್ನು ವಿವರಿಸಬೇಕು.
ಕುಟುಂಬದ ಜೊತೆ ಕೂಡಿ ಹಬ್ಬ ಆಚರಿಸುವ ಅನುಭವ ನೀಡುವುದು. ಶಾಲಾ ಮಟ್ಟದಲ್ಲಿ ಹಬ್ಬಗಳ ವೈಜ್ಞಾನಿಕ ಹಾಗೂ ಸಾಂಸ್ಕೃತಿಕ ಅಂಶಗಳನ್ನು ಪರಿಚಯಿಸುವುದು ಅಗತ್ಯ.
ಸ್ವದೇಶಿ ವಸ್ತುಗಳಿಂದ ಸಂಕ್ರಾಂತಿ ಆಚರಣೆ
ಸಂಕ್ರಾಂತಿಯ ನಿಜವಾದ ಅರ್ಥ ಸ್ವದೇಶಿ ಬದುಕು. ಸ್ಥಳೀಯವಾಗಿ ದೊರೆಯುವ ಆಹಾರ, ಕೈಗಳಿಂದ ತಯಾರಿಸಿದ ವಸ್ತುಗಳು, ಮಣ್ಣು, ಬಿದಿರು, ಲೋಹದಿಂದ ತಯಾರಿಸಿದ ಉಪಕರಣಗಳ ಬಳಕೆ ಪರಿಸರ ಸ್ನೇಹಿಯಷ್ಟೇ ಅಲ್ಲ, ದೇಶದ ಆರ್ಥಿಕತೆಗೂ ಬಲ ನೀಡುತ್ತದೆ. ವಿದೇಶಿ ಉತ್ಪನ್ನಗಳ ಅತಿಯಾದ ಬಳಕೆ ನಮ್ಮ ಸ್ವಾವಲಂಬನೆಯನ್ನು ಕುಗ್ಗಿಸುತ್ತದೆ.
ಪ್ಲಾಸ್ಟಿಕ್ ಮುಕ್ತ ಆಚರಣೆಯ ಅಗತ್ಯ
ಹಬ್ಬಗಳ ಸಂದರ್ಭದಲ್ಲಿ ಪ್ಲಾಸ್ಟಿಕ್ ಬಳಕೆ ಹೆಚ್ಚಾಗುತ್ತಿದೆ. ಇದು ಪರಿಸರಕ್ಕೆ ದೀರ್ಘಕಾಲೀನ ಹಾನಿ ಉಂಟುಮಾಡುತ್ತದೆ. ಸಂಕ್ರಾಂತಿಯಂತಹ ಪ್ರಕೃತಿಯೊಂದಿಗೆ ಸಂಬಂಧಿಸಿದ ಹಬ್ಬವನ್ನು ಪ್ಲಾಸ್ಟಿಕ್ ರಹಿತವಾಗಿ ಆಚರಿಸುವುದು ಅತ್ಯಗತ್ಯ. ಎಲೆ, ಕಾಗದ, ಮಣ್ಣಿನ ಪರ್ಯಾಯಗಳ ಬಳಕೆ ಭವಿಷ್ಯದ ಪರಿಸರ ರಕ್ಷಣೆಗೆ ಸಹಕಾರಿಯಾಗುತ್ತದೆ.
ಸಂಕ್ರಾಂತಿಯಂದು ಸೇವಿಸುವ ಖಾದ್ಯಗಳ ವೈಜ್ಞಾನಿಕ ಮಹತ್ವ
ಸಂಕ್ರಾಂತಿಯಲ್ಲಿ ಬಳಸುವ ಎಳ್ಳು, ಬೆಲ್ಲ, ಕಾಳುಗಳು ಋತುಬದಲಾವಣೆಗೆ ದೇಹವನ್ನು ಹೊಂದಿಕೊಳ್ಳಲು ಸಹಾಯ ಮಾಡುತ್ತವೆ. ಎಳ್ಳು ದೇಹದ ಉಷ್ಣತೆಯನ್ನು ಸಮತೋಲನಗೊಳಿಸುತ್ತದೆ, ಬೆಲ್ಲ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಹೊಸ ಅಕ್ಕಿ ಶಕ್ತಿಯನ್ನು ನೀಡುತ್ತದೆ. ಈ ಆಹಾರ ಪದ್ಧತಿ ಪೌಷ್ಟಿಕತೆಯ ಜೊತೆಗೆ ಋತುಮಾನಕ್ಕೆ ತಕ್ಕ ಆರೋಗ್ಯ ರಕ್ಷಣೆಯಾಗಿದೆ.
ಸಂಸ್ಕಾರ ಮತ್ತು ಸಾಮಾಜಿಕ ಸಂಬಂಧಗಳ ಬಲಪಡಿಸುವಿಕೆ
ಸಂಕ್ರಾಂತಿ ಕೇವಲ ವೈಯಕ್ತಿಕ ಹಬ್ಬವಲ್ಲ; ಇದು ಸಮುದಾಯದ ಹಬ್ಬ. ನೆರೆಹೊರೆಯವರೊಂದಿಗೆ ಆಹಾರ ಹಂಚಿಕೊಳ್ಳುವುದು, ಪರಸ್ಪರ ಶುಭಾಶಯ ವಿನಿಮಯವು ಸಾಮಾಜಿಕ ಬಂಧಗಳನ್ನು ಗಟ್ಟಿಗೊಳಿಸುತ್ತದೆ. ಇಂತಹ ಸಂಪ್ರದಾಯಗಳು ಮಾನಸಿಕ ಆರೋಗ್ಯಕ್ಕೂ ಸಹಕಾರಿ.
ಈ ಮೌಲ್ಯಗಳನ್ನು ಮರೆತರೆ ಆಗುವ ಪರಿಣಾಮಗಳು
ಸಂಕ್ರಾಂತಿಯ ಅರ್ಥವನ್ನು ಮರೆತರೆ, ಹಬ್ಬಗಳು ಕೇವಲ ತೋರಿಕೆ ಆಗುತ್ತವೆ. ಮಕ್ಕಳಲ್ಲಿ ಸಂಸ್ಕೃತಿಯ ಅರಿವು ಕಡಿಮೆಯಾಗುತ್ತದೆ. ಆಹಾರ ಪದ್ಧತಿಯ ವೈಜ್ಞಾನಿಕತೆ ಕಳೆದು, ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತವೆ. ಪರಿಸರದ ಮೇಲಿನ ಹೊಣೆಗಾರಿಕೆ ಮರೆಯಾಗುತ್ತದೆ.
ಜಗಚ್ಚಕ್ಷುವಾದ ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಯನ್ನು ಪ್ರವೇಶಿಸುವ ಸಂಧಿ ಕಾಲವಾದ ಸಂಕ್ರಾಂತಿಯಂದು
ಸೂರ್ಯನ ಪಥದಲ್ಲಿನ ಬದಲಾವಣೆಯು ಪ್ರಕೃತಿಯಲ್ಲೂ ಬದಲಾವಣೆಯನ್ನು ಉಂಟುಮಾಡುತ್ತಾ ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ, ಎಲ್ಲವೂ ಕ್ಷಣಿಕ ಎಂಬ ಸತ್ಯದ ಅರಿವನ್ನುಂಟು ಮಾಡುತ್ತದೆ. ಆದ್ದರಿಂದ ಮನುಷ್ಯರಾದ ನಾವುಗಳು ಅಜ್ಞಾನ ಅಂಧಕಾರಗಳನ್ನು ತೊರೆದು ಎಳ್ಳು ಬೆಲ್ಲ ತಿಂದು ಒಳ್ಳೆ ಮಾತನಾಡೋಣ ಎಂಬಂತೆ, ಬದುಕಿರುವಷ್ಟು ದಿನಗಳಲ್ಲಿ ಎಲ್ಲರೊಂದಿಗೆ ಬೆರೆತು, ನಮ್ಮ ಬದುಕನ್ನು ಸಾರ್ಥಕಗೊಳಿಸೋಣ. ನಮ್ಮ ದೇಶದ ಸಂಸ್ಕೃತಿಯನ್ನು ವಿಶ್ವದಾದ್ಯಂತ ಪಸರಿಸೋಣ.
ಸಂಕ್ರಾಂತಿ ಹಬ್ಬವು ನಮ್ಮ ಸಂಸ್ಕೃತಿಯ ಜೀವಂತ ಪಾಠ. ಪ್ರಗತಿಯ ಹೆಸರಿನಲ್ಲಿ ಬೇರುಗಳನ್ನು ಕತ್ತರಿಸುವ ಬದಲು, ಬೇರುಗಳನ್ನು ಬಲಪಡಿಸಿ ಭವಿಷ್ಯ ಕಟ್ಟುವ ಸಂದೇಶವನ್ನು ಇದು ನೀಡುತ್ತದೆ. ಈ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುವುದೇ ಸಂಸ್ಕೃತಿಗೆ, ಪರಿಸರಕ್ಕೆ ಮತ್ತು ಮುಂದಿನ ಪೀಳಿಗೆಗೆ ನಾವು ನೀಡಬಹುದಾದ ಅತ್ಯುತ್ತಮ ಕೊಡುಗೆ.
ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳೊಂದಿಗೆ,
ಸ್ವರ್ಣ ಕುಂದಾಪುರ
ಉದ್ಯಾವರ : ಟ್ರಿನಿಟಿ ಕೈಗಾರಿಕಾ ತರಬೇತಿ ಸಂಸ್ಥೆ ಉದ್ಯಾವರ ಇದರ ಆಶ್ರಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಉಡುಪಿ ತಾಲೂಕು ಜನ ಜಾಗೃತಿ ವೇದಿಕೆ ಅಂಬಲಪಾಡಿ ವಲಯದ ವತಿಯಿಂದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ನೆರವೇರಿತು.ಟ್ರಿನಿಟಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಜಾನ್ ಎಮ್. ಡಿ’ಸೋಜಾ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟದ ಅಧ್ಯಕ್ಷ ಸುಂದರ್ ಜೆ. ಕಲ್ಮಾಡಿ ಅವರು ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಉಡುಪಿ ಪ್ರಾದೇಶಿಕ ಯೋಜನಾಧಿಕಾರಿ ಗಣೇಶ್ ಆಚಾರ್ಯ ಅವರು ದುಶ್ಚಟಗಳ ದುಷ್ಪರಿಣಾಮಗಳ ಕುರಿತು ವಿಸ್ತೃತ ಮಾಹಿತಿ ನೀಡಿದರು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಉಡುಪಿ ಜಿಲ್ಲಾ ಸಮಿತಿ ಸದಸ್ಯ ಶಿವಕುಮಾರ್ ಅಂಬಲಪಾಡಿ, ತಾಲೂಕು ಸಮಿತಿ ಸದಸ್ಯ ಪ್ರತಾಪ್ ಕುಮಾರ್ ಉದ್ಯಾವರ, ಯೋಜನೆಯ ತಾಲೂಕು ಕೃಷಿ ಅಧಿಕಾರಿ ಮಂಜುನಾಥ್ ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಟ್ರಿನಿಟಿ ಕೈಗಾರಿಕಾ ತರಬೇತಿ ಸಂಸ್ಥೆಯ ಉಪನ್ಯಾಸಕರಾದ ಪ್ರದೀಪ್ ಅವರು ಸ್ವಾಗತಿಸಿ, ಪ್ರಸನ್ನ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಯೋಜನೆಯ ಸೇವಾ ಪ್ರತಿನಿಧಿ ಜಯಶ್ರೀ ವಂದಿಸಿದರು.
ಉಡುಪಿ:ಕೇರಳ ಮೂಲದ ಇಬ್ಬರು ಅಂತರ್ ರಾಜ್ಯ ಬೈಕ್ ಕಳ್ಳರನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ. ಆಶಿಕ್ ಅನ್ಸಾರ್ (19) ಮತ್ತು ಮಹಮ್ಮದ್ ಅಲ್ತಫ್ (23) ಬಂಧಿತರು.
ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ: 215/202025 ಕಲಂ 303(2) ಬಿಎನ್ ಎಸ್ ರಂತೆ ಪ್ರಕರಣ ದಾಖಲಾಗಿದೆ.
ಆರೋಪಿಗಳನ್ನು ಬಂಧಿಸಿರುವ ಉಡುಪಿ ಪೊಲೀಸರು ಅವರ ಬಳಿ ಇದ್ದ ಕಳವು ಮಾಡಿದ ಬೈಕ್ ನ್ನು ವಶಪಡಿಸಿಕೊಂಡಿದ್ದಾರೆ. ಆಶಿಕ್ ಅನ್ಸಾರ್ ವಿರುದ್ಧ ಕೇರಳ ರಾಜ್ಯದಲ್ಲಿ 2 ಪ್ರಕರಣಗಳು ದಾಖಲಾಗಿದ್ದು ಅದರಲ್ಲಿ 1 ಮನೆಕಳ್ಳತನ ಪ್ರಕರಣ, ಇನ್ನೊಂದು ಗಾಂಜಾ ಸೇವನೆ ಪ್ರಕರಣವಾಗಿದೆ. ಮತ್ತೋರ್ವ ಆರೋಪಿ ಮಹಮ್ಮದ್ ಅಲ್ತಫ್ ವಿರುದ್ಧ ಕೇರಳ ರಾಜ್ಯದಲ್ಲಿ ಒಟ್ಟು 5 ಪ್ರಕರಣಗಳು ದಾಖಲಾಗಿದ್ದು ಅದರಲ್ಲಿ 3 ಕಳ್ಳತನ ಪ್ರಕರಣ 2 ಗಾಂಜಾಸೇವನೆ ಪ್ರಕರಣಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಕುಂದಾಪುರ: “ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸು ಪಡೆಯಲು ಧನಾತ್ಮಕ ಮನೋಭಾವ, ಆತ್ಮವಿಶ್ವಾಸ ಮತ್ತು ಕಠಿಣ ಪರಿಶ್ರಮ ಅತ್ಯಗತ್ಯ. ಪ್ರತಿಯೊಬ್ಬರೂ ದೊಡ್ಡ ಕನಸುಗಳನ್ನು ಕಾಣಬೇಕು ಮತ್ತು ಅವುಗಳನ್ನು ನನಸಾಗಿಸುವ ಮೂಲಕ ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು. ಚರಿತ್ರೆಯಲ್ಲಿ ನೂರಕ್ಕೆ ನೂರು ಶೇಖಡಾ ಸಾಧನೆಗಳು ಸಾಧ್ಯವಾದದ್ದು ಪ್ರೇರಣೆ ಹಾಗೂ ಪ್ರೋತ್ಸಾಹದಿಂದ” ಎಂದು ರಾಷ್ಟ್ರ ಮಟ್ಟದ ವ್ಯಕ್ತಿತ್ವ ವಿಕಸನ ತರಬೇತುದಾರ ರಾಜೇಂದ್ರ ಭಟ್ ಹೇಳಿದರು.
ಯಡಾಡಿ ಮತ್ಯಾಡಿಯ ವಿದ್ಯಾರಣ್ಯ ಕ್ಯಾಂಪಸ್‌ನಲ್ಲಿರುವ ಸುಜ್ಞಾನ ಎಜುಕೇಶನಲ್ ಟ್ರಸ್ಟ್ ವತಿಯಿಂದ ಸ್ವಾಮಿ ವಿವೇಕಾನಂದರ ಜಯಂತಿಯ ಪ್ರಯುಕ್ತ ದ್ವಿತೀಯ ಪಿಯುಸಿ ಮತ್ತು ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ “ ಹದಿಹರೆಯದವರ ಮನಸ್ಸುಗಳ ಸಬಲೀಕರಣ (ಎಂಪವರಿಂಗ್ ಯಂಗ್ ಮೈಂಡ್ಸ್) ಎಂಬ ವಿಶೇಷ ಕಾರ್ಯಾಗಾರದಲ್ಲಿ ಮಾತನಾಡಿದರು.ಸುಜ್ಞಾನ ಎಜುಕೇಶನಲ್ ಟ್ರಸ್ಟ್‌ನ ಅಧ್ಯಕ್ಷ ಡಾ. ರಮೇಶ್ ಶೆಟ್ಟಿ ಅವರು ಮಾತನಾಡಿ, “ವಿದ್ಯಾರ್ಥಿಗಳಿಗೆ ಕೇವಲ ಪಠ್ಯ ಶಿಕ್ಷಣ ನೀಡಿದರೆ ಸಾಲದು. ಆಧುನಿಕ ಜೀವನದ ಸವಾಲುಗಳನ್ನು ಎದುರಿಸಲು ಮೌಲ್ಯಾಧಾರಿತ ಶಿಕ್ಷಣದ ಅಗತ್ಯವಿದೆ. ಇಂತಹ ಕಾರ್ಯಾಗಾರಗಳ ಮೂಲಕ ವಿದ್ಯಾರ್ಥಿಗಳ ಮಾನಸಿಕ ಸಾಮರ್ಥ್ಯ ವೃದ್ಧಿಸಲು ನಮ್ಮ ಸಂಸ್ಥೆ ಸದಾ ಬದ್ಧವಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು,” ಎಂದರು.
ಈ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಗೌರವ ನಮನ ಸಲ್ಲಿಸಲಾಯಿತು.ಸುಜ್ಞಾನ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ರಂಜನ್ ಬಿ. ಶೆಟ್ಟಿ, ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಪ್ರದೀಪ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆಂಗ್ಲ ಭಾಷಾ ವಿಭಾಗದ ಮುಖ್ಯಸ್ಥ ವಿನಯ ಕುಮಾರ್ ಕೆ. ನಿರೂಪಿಸಿದರು.
ಉಡುಪಿ: ಉಡುಪಿ ಜಿಲ್ಲೆಯ ಪುಟ್ಟ ಊರು ಮರ್ಣೆ ಕಲಾವಿದರ ಊರು ಅಂತಲೇ ಪ್ರಸಿದ್ಧಿ. ಇಲ್ಲಿನ ಪ್ರಸಿದ್ಧ ಕಲಾವಿದ ಮಹೇಶ್ ಮರ್ಣೆ ತನ್ನ ಮಗಳ ಆರನೇ ವರ್ಷದ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದರು. ಊರಿನಲ್ಲಿದ್ದ ಪಾಳು ಬಿದ್ದ ಬಸ್ ನಿಲ್ದಾಣಕ್ಕೆ ಹೊಸ ಮೆರುಗು ನೀಡಿದರು.
ತನ್ನ ಅಪೂರ್ವ ಪ್ರತಿಭೆಯಿಂದ ಬಸ್ ನಿಲ್ದಾಣವನ್ನು ಅಲಂಕರಿಸಿದರು. ಬಣ್ಣ ಬಣ್ಣದ ಚಿತ್ತಾರ ಬಿಡಿಸಿ ಆಕರ್ಷಕವಾಗಿಸಿದರು. ಈಗ ಬಸ್ ನಿಲ್ದಾಣದಲ್ಲಿ ನಿಂತರೆ ವಿಶಿಷ್ಟ ಅನುಭವ ಆಗುತ್ತದೆ. ಈ ಕಲರ್ ಫುಲ್ ಬಸ್ ನಿಲ್ದಾಣ ಈಗ ಎಲ್ಲರನ್ನೂ ಆಕರ್ಷಿಸುತ್ತಿದೆ.
ಉಡುಪಿ: ಕಾಪು ತಾಲೂಕು ನಡ್ಸಾಲು ಗ್ರಾಮದ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ಮಲ್ಲಿಕಾ (34) ಎಂಬ ಮಹಿಳೆಯು ಜನವರಿ 05 ರಂದು ತನ್ನ ತಾಯಿ ಮನೆಯಾದ ರಾಮನಗರಕ್ಕೆ ಹೋಗುವುದಾಗಿ ಹೇಳಿ ಹೋದವರು, ತಾಯಿಯ ಮನೆಗೂ ಹೋಗದೇ, ವಾಪಾಸು ಮನೆಗೂ ಬಾರದೇ ನಾಪತ್ತೆಯಾಗಿರುತ್ತಾರೆ.
5 ಅಡಿ ಎತ್ತರ, ಬಿಳಿ ಮೈಬಣ್ಣ, ಸಪೂರ ಶರೀರ ಹೊಂದಿದ್ದು, ಕನ್ನಡ, ತುಳು, ಮರಾಠ ಹಾಗೂ ಮಲಯಾಳಂ ಭಾಷೆ ಮಾತನಾಡುತ್ತಾರೆ.ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಪಡುಬಿದ್ರಿ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರು ಮೊ.ನಂ: 0820-2555452, ಮೊ.ನಂ: 9480805450, ಕಾಪು ಪೊಲೀಸ್ ವೃತ್ತ ನಿರೀಕ್ಷಕರು ದೂ.ಸಂಖ್ಯೆ: 0820-2552133, ಮೊ.ನಂ: 9480805431 ಹಾಗೂ ಪೊಲೀಸ್ ಕಂಟ್ರೋಲ್ ರೂಂ ದೂ.ಸಂಖ್ಯೆ;0820-2525444 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಪಡುಬಿದ್ರಿ ಪೊಲೀಸ್ ಠಾಣೆಯ ಉಪನಿರೀಕ್ಷಕರ ಕಚೇರಿ ಪ್ರಕಟಣೆ ತಿಳಿಸಿದೆ.
ವಕ್ವಾಡಿ : ಬಾಂಡ್ಯಾ ಎಜುಕೇಶನಲ್ ಟ್ರಸ್ಟ್ ನ ಅಧೀನ ಸಂಸ್ಥೆಯಾದ ಗುರುಕುಲ ಪಬ್ಲಿಕ್ ಸ್ಕೂಲ್ ನಲ್ಲಿ ಸಂಸ್ಥಾಪನಾ ದಿನಾಚರಣೆ ಹಾಗೂ ಸಂಕ್ರಾಂತಿ ಹಬ್ಬವನ್ನು ಸಡಗರದಿಂದ ಆಚರಿಸಲಾಯಿತು.
ಬಾಂಡ್ಯ ಎಜುಕೇಶನಲ್ ಟ್ರಸ್ಟ್ ನ ಜಂಟಿ ಕಾರ್ಯನಿರ್ವಾಹಕರಾದ ಶ್ರೀಮತಿ ಅನುಪಮಾ ಎಸ್ ಶೆಟ್ಟಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ನಮ್ಮೀ ಸಂಸ್ಥೆಯು ಗ್ರಾಮೀಣ ಪರಿಸರದಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ಉತ್ತಮ ಶೈಕ್ಷಣಿಕ ವಾತಾವರಣವನ್ನು ನಿರ್ಮಿಸಿಕೊಂಡು ಬಂದಿದೆ. ದೇಸಿ ಸಂಸ್ಕೃತಿಯನ್ನು ಪೋಷಿಸುವುದರೊಂದಿಗೆ ವರ್ತಮಾನಕ್ಕೆ ಬೇಕಾದ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವುದನ್ನು ಬದ್ಧತೆಯಿಂದ ಕಾಯ್ದುಕೊಂಡು ಬಂದಿದ್ದೇವೆ.
ಬದುಕಿನ ಕಹಿಗಳೆಲ್ಲಾ ಸಹಿಯಾಗಿ ಯಶಸ್ಸು ನಿಮ್ಮಪಾಲಿಗಿರಲಿ ಎಂದು ಸಂಕ್ರಾಂತಿ ಹಬ್ಬಕ್ಕೆ ಶುಭ ಹಾರೈಸಿದರು. ಪ್ರಾಂಶುಪಾಲರಾದ ಡಾ. ರೂಪ ಶಣೈ ರವರು ಸಂಕ್ರಾಂತಿ ಹಬ್ಬದ ವಿಶೇಷತೆಯನ್ನು ತಿಳಿಸಿ ಸರ್ವರಿಗೂ ಶುಭ ಕೋರಿದರು. ಶಿಕ್ಷಕಿ ಸುಲಕ್ಷಣ ರವರು ಸಂಸ್ಥಾಪನಾ ದಿನಾಚರಣೆಯ ಮಹತ್ವವನ್ನು ತಿಳಿಸಿದರು. ವಿದ್ಯಾರ್ಥಿ ಅವನಿ ಸಂಕ್ರಾಂತಿ ಹಬ್ಬದ ಕುರಿತು ತನ್ನ ಅನಿಸಿಕೆಯನ್ನು ವ್ಯಕ್ತಪಡಿಸಿದರು. ವಿದ್ಯಾರ್ಥಿ ಹಿಮಾಂಷು ಕಾರ್ಯಕ್ರಮವನ್ನು ನಿರೂಪಿಸಿ ಅಂತಿಮವಾಗಿ ವಂದಿಸಿದರು.
ಕುಂದಾಪುರ : ಮೂಡ್ಲಕಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MITK) ಕಾಲೇಜಿನ ವಿದ್ಯಾರ್ಥಿನಿ ಗೀತಾಂಜಲಿ ಶಿವಗೊಂಡ ಚೌಗಲಾ ಅವರು ಮಲೇಷ್ಯಾದ ಕೌಲಾಲಂಪುರ್ ನಗರದಲ್ಲಿ ಅದ್ಧೂರಿಯಾಗಿ ನಡೆದ ಅತಿ ದೊಡ್ಡ ಯುವ ನಾಯಕತ್ವ ಸಮ್ಮೇಳನಗಳಲ್ಲಿ ಒಂದಾದ AYIMUN–2025 ನಲ್ಲಿ ಭಾರತವನ್ನು ಪ್ರತಿನಿಧಿಸಿದರು.
ಈ ಸಮ್ಮೇಳನಕ್ಕೆ ಭಾರತದಿಂದ ಕೇವಲ ಏಳು ವಿದ್ಯಾರ್ಥಿಗಳು ಮಾತ್ರ ಆಯ್ಕೆಗೊಂಡಿದ್ದು, ಅವರಲ್ಲಿ ಕರ್ನಾಟಕ ರಾಜ್ಯದಿಂದ ಆಯ್ಕೆಯಾದ ಏಕೈಕ ವಿದ್ಯಾರ್ಥಿನಿ ಎಂಬ ಗೌರವ ಗೀತಾಂಜಲಿಗೆ ದೊರಕಿದೆ. ಅವರ ಆಯ್ಕೆ ಶೈಕ್ಷಣಿಕ ಸಾಮರ್ಥ್ಯ ಹಾಗೂ ಸಂಶೋಧನಾ ಲೇಖನ ಆಧಾರದ ಮೇಲೆ ನಡೆಯಿತು.
ಸಮ್ಮೇಳನದ ವೇಳೆ ಅವರು ಚುರುಕಿನ ಪಾತ್ರವಹಿಸಿ, ಜಾಗತಿಕ ಆರ್ಥಿಕತೆ, ತಾಂತ್ರಿಕ ಅಭಿವೃದ್ಧಿ ಹಾಗೂ ವಿಜ್ಞಾನ–ಆಧಾರಿತ ಸಂಶೋಧನೆಯ ಪ್ರಾಮುಖ್ಯತೆ ಕುರಿತ ವಿಚಾರಗಳನ್ನು ವಿಶ್ಲೇಷಣೆಮಾಡಿ ಮಂಡಿಸಿದರು. ಈ ಮಂಡಳಿಯ ಚರ್ಚೆಯಲ್ಲಿ ಅತ್ಯುತ್ತಮ ಪ್ರಸ್ತುತಿ ಹಾಗೂ ವಾದ–ವಿವಾದದ ಕೌಶಲ್ಯ ಪ್ರದರ್ಶಿಸಿದಕ್ಕಾಗಿ ಅವರಿಗೆ “ಬೆಸ್ಟ್ ಡೆಲಿಗೇಟ್” ಪ್ರಶಸ್ತಿ ಪ್ರದಾನ ಮಾಡಲಾಯಿತು.
ಅವರ ವಿಜ್ಞಾನಾಧಾರಿತ ಚಿಂತನೆ, ತಾರ್ಕಿಕ ವಿಶ್ಲೇಷಣೆ ಮತ್ತು ನವೀನ ಆವಿಷ್ಕಾರಗಳತ್ತ ಇರುವ ಆಸಕ್ತಿ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾದವು. ಅವರು ವಿಶ್ವದ ವಿವಿಧ ರಾಷ್ಟ್ರಗಳ ಪ್ರತಿನಿಧಿಗಳೊಂದಿಗೆ ಭವಿಷ್ಯದ ವಿಜ್ಞಾನ, ಸಂಶೋಧನೆ ಹಾಗೂ ತಾಂತ್ರಿಕ ನವೀಕರಣಗಳ ಕುರಿತು ಅಭಿಪ್ರಾಯ ವಿನಿಮಯ ನಡೆಸಿದರು.
ಮೂಡ್ಲಕಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯ ಛೇರ್ಮನ್ ರಾದ ಶ್ರೀ ಸಿದ್ಧಾರ್ಥ ಜೆ ಶೆಟ್ಟಿಯವರು, ಪ್ರಾಂಶುಪಾಲರು, ಪ್ರಾಚಾರ್ಯರು ಅವರ ಈ ಸಾಧನೆಯನ್ನು ಶ್ಲಾಘಿಸಿ ಅಭಿನಂದಿಸಿದರು.
“ನಮ್ಮ ವಿದ್ಯಾರ್ಥಿನಿಯು ಅಂತರರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ಬೌದ್ಧಿಕ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ. ಇದು ಕಾಲೇಜಿನ ಹೆಮ್ಮೆಯ ಕ್ಷಣ” ಎಂದು ಅಭಿನಂದಿಸಿದರು.