ಶುಭ ದಿನದ ಪಂಚಾಂಗ
ಕಲಿಯುಗಾಬ್ದ 5127
ವಿಶ್ವಾವಸು ಸಂವತ್ಸರ
ದಕ್ಷಿಣಾಯನ
ಹೇಮಂತ: ಋತು
ಪುಷ್ಯ: ಮಾಸ
ಕೃಷ್ಣ ಪಕ್ಷ
ಏಕಾದಶಿ : ತಿಥಿ
ಅನೂರಾಧೆ : ನಕ್ಷತ್ರ
ಬುಧವಾರ
14.01.2026
ಈ ದಿನ ಎಲ್ಲರಿಗೂ ಶುಭವಾಗಲಿ


ಬಾಲ್ಯದಲ್ಲಿ ಕಳೆದ ಜೀವನದ ದಿನಗಳು ಕಳೆದುಹೋಗಿವೆ. ಒಟ್ಟಿಗೆ ಜೊತೆಗೆ ಆಡಿದ ಮಿತ್ರರು ಕೆಲಸದಿಂದ ಬಸವಳಿದಿದ್ದಾರೆ. ಕೆಲವರಿಗೆ ಬೊಜ್ಜು ಬಂದರೆ , ಇನ್ನು ಕೆಲವರ ತಲೆ ಕೂದಲ ಬಣ್ಣ ಬೆಳ್ಳಗಾಗಿದೆ, ಎಲ್ಲರಿಗೂ ಅವರದ್ದೇ ಆದಂತಹ ಕೌಟಿಂಬಿಕ ಜವಾಬ್ದಾರಿಗಳಿವೆ. ಎಲ್ಲರಿಗೂ ಚಿಕ್ಕಪುಟ್ಟ ಆರೋಗ್ಯ ಸಮಸ್ಯೆಗಳಿವೆ. ದಿನವಿಡೀ ಪಾದರಸದಂತೆ ಓಡಾಡುತ್ತಿದ್ದ ಆಟವಾಡುತ್ತಿದ್ದ ಗೆಳೆಯರು ಈಗ ಯಾಂತ್ರಿಕ ಬದುಕಿಗೆ ಸಿಕ್ಕಿ ಬಸವಳಿದಿದ್ದಾರೆ. ಕೆಲವರಿಗೆ ಹಣದ ಸಮಸ್ಯೆ ಆದರೆ
ಇನ್ನು ಕೆಲವರಿಗೆ ಬ್ಯಾಂಕ್ ನಲ್ಲಿ ಲೋನ್ ಸಿಗೋದಿಲ್ಲ ಎಂಬ ಸಮಸ್ಯೆ. ಇನ್ನು ಕೆಲವರಿಗೆ ಈ ವಯಸ್ಸಿನಲ್ಲಿ ಆರೋಗ್ಯ ಏನಾಗುವುದು ಎಂಬ ಆತಂಕ. ಎಲ್ಲರೂ ಅವರವರ ಕೆಲಸದಲ್ಲಿ ಅವರವರ ಜೀವನದಲ್ಲಿ ನಿರತರಾಗಿದ್ದಾರೆ. ಚಿಕ್ಕಂದಿನಲ್ಲಿದ್ದ ಕಣ್ಣಿನ ತೇಜಸ್ಸು ಈಗ ಕಡಿಮೆಯಾಗಿದೆ. ಯೌವ್ವನದಲ್ಲಿ ಪ್ರೇಮಪತ್ರ ಬರೆಯುತ್ತಿದ್ದ ಕೈಗಳು ಈಗ ಆಸ್ಪತ್ರೆಯಲ್ಲಿ ಫಾರ್ಮ್ ಭರ್ತಿ ಮಾಡುತ್ತಿವೆ. ಬಾಲ್ಯದ ಯವ್ವನದ ಫೋಟೋಗಳನ್ನು ನೋಡಿದಾಗ ಬಾಲ್ಯದ ತುಂಟಾಟದ ದಿನಗಳು ನೆನಪಾಗುತ್ತವೆ. ಸಮಯ ಹೋಗಿದ್ದೆ ಗೊತ್ತಾಗಿಲ್ಲ ಆದರೆ ನಮಗೆ ಮಾತ್ರ ವಯಸ್ಸು ವರ್ಷದಿಂದ ವರ್ಷಕ್ಕೆ ಜಾಸ್ತಿ ಆಗುತ್ತಾ ಹೋಯಿತು. ಚಿಕ್ಕಂದಿನಲ್ಲಿ ಆಟವಾಡಿದ ಮಿತ್ರರು ಸಮಯವಿಲ್ಲದೆ ಬಸವಳಿದಿದ್ದಾರೆ. ಜೀವನ ಅಂದ್ರೆ ಇದೆ ಅಲ್ವಾ.
ಪ್ರದೀಪ್ ಕುಮಾರ್ ಕೋಮುಂಜೆ
ಮಂದಾರ್ತಿ: ಹೆಗ್ಗುಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸರಕಾರಿ ಸ್ಥಳದಲ್ಲಿ ನಿರ್ಮಿಸಲಾದ ಮನೆ ಮತ್ತು ಶೆಡ್ಗಳನ್ನು ತೆರವುಗೊಳಿಸಿದನ್ನು ಪ್ರಶ್ನಿಸಿ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮತ್ತು ಸಂಸದ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ.
ಶುಕ್ರವಾರ ತೆರವು ಕಾರ್ಯಾಚರಣೆಗೆಂದು ಬಂದಿದ್ದ ತಹಶಿಲ್ದಾರರಿಗೆ ಶಾಸಕರು ಮತ್ತು ಸಂಸದರು ಕೆಲವು ದಿನಗಳ ಕಾಲ ಕಾಲಾವಕಾಶ ನೀಡಬೇಕೆಂದು ಮನವಿ ಮಾಡಿದ್ದರು. ಆದರೂ ಏಕಾಎಕಿ ಸೋಮವಾರ ಬೆಳ್ಳಂಬೆಳಿಗ್ಗೆ ಜೆಸಿಬಿ ತಂದು ಅಲ್ಲಿದ್ದ ಎಲ್ಲಾ ಮನೆಗಳನ್ನ ಧ್ವಂಸಗೊಳಿಸಿದ್ದಾರೆ. ಸರಕಾರಿ ಜಾಗದಲ್ಲಿ ಕೋಟಿಗಟ್ಟಲೇ ಮನೆ ಕಟ್ಟಿಕೊಂಡವರಿದ್ದಾರೆ, ಆದರೆ ನಮ್ಮ ಅಧಿಕಾರಿಗಳಿಗೆ ಬಡವರ ಮನೆ ಮೇಲೆ ಕಣ್ಣು.. 20 ವರ್ಷಗಳಿಗೂ ಮಿಕ್ಕಿ ವಾಸ್ತವ್ಯ ಇದ್ದ ಇವರ ಮನೆಗಳನ್ನು ಕೆಡವಿದ್ದು ನಿಜಕ್ಕೂ ಆಕ್ಷೇಪಾರ್ಹ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕೇ ಭೇಟಿ ಸಂತ್ರಸ್ಥ ಕುಟುಂಬದ ಜೊತೆ ಮಾತನಾಡಿದ ಶಾಸಕರು ಮತ್ತು ಸಂಸದರು, ನ್ಯಾಯ ಕೊಡಿಸುವ ಪ್ರಯತ್ನ ಮಾಡುವುದಾಗಿ ಹೇಳಿದರು. ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ನಮ್ಮ ಜಿಲ್ಲೆಯಲ್ಲಿ 48ಸಾವಿರ 94c ಮತ್ತು cc ಅರ್ಜಿಗಳು ಬಾಕಿ ಇದೆ. ಇದರಲ್ಲಿ ಸುಮಾರು 38ಸಾವಿರ ಅರ್ಜಿಗಳು ಇನ್ನೂ ಹಕ್ಕು ಪತ್ರ ನೀಡಿಲ್ಲ. ಬೆಳ್ಳೆ ನಾಯ್ಕ ಮತ್ತು ಶೇಖರ ನಾಯ್ಕರ ಮನೆ ತೆರವುಗೊಳಿಸಿದ್ದು ಈ ಬಾಕಿ ಇರುವ 38ಸಾವಿರ ಅರ್ಜಿಗಳನ್ನೂ ತೆರವುಗೊಳಿಸಿದ ರೀತಿಯೇ ಆಗಿದೆ. ಮನೆ ಕಟ್ಟಿಕೊಳ್ಳಬೇಕೆಂಬುದು ಪ್ರತಿ ಕುಟುಂಬದ ಕನಸು. ಅದನ್ನು ತಹಶಿಲ್ದಾರರು ನುಚ್ಚುನೂರು ಮಾಡಿದ್ದಾರೆ. ಇದಕ್ಕೆ ಮಂಗಳವಾರ ಪ್ರತಿಭಟನೆ ಮೂಲಕ ಉತ್ತರ ನೀಡೋಣ ಎಂದರು.
ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಯಾರ ಆಣತಿ ಮೇರೆಗೆ ಈ ಕ್ರಮ ನಡೆದಿದೆ ಎನ್ನುವುದು ನಮಗೆ ಗೊತ್ತಿದೆ. ಈ ಒತ್ತಡ ಹೇರಿದವರಿಗೆ ಸಂಬಂಧಪಟ್ಟ ಮನೆಗಳೂ ಕೂಡ ಸರಕಾರಿ ಜಾಗದಲ್ಲಿದೆ. ಈ ಕುಟುಂಬಗಳಿಗೆ ನ್ಯಾಯ ದೊರಕುವವರೆಗೂ ಸುಮ್ಮನೆ ಕೂರುವ ಪ್ರಶ್ನೆಯೇ ಇಲ್ಲ. ನಾಳೆ ತಹಶಿಲ್ದಾರರಿಂದ ಸರಿಯಾದ ಉತ್ತರ ಸಿಗುವ ವರೆಗೂ ಬಿಡುವ ಪ್ರಶ್ನೆಯೇ ಇಲ್ಲ ಎಂದರು.ಮಂಗಳವಾರ ಬೆಳಗ್ಗೆ 10:00ಕ್ಕೆ ಬ್ರಹ್ಮಾವರ ತಹಶಿಲ್ದಾರರ ಕಚೇರಿ ಮುಂಭಾಗ ಪ್ರತಿಭಟನೆ ನಡೆಸುವ ಬಗ್ಗೆ ತೀರ್ಮಾನಿಸಲಾಯಿತು. ಈ ಸಂದರ್ಭ ಮುಖಂಡರಾದ ಬಿಲ್ಲಾಡಿ ಪ್ರಥ್ವಿರಾಜ್ ಶೆಟ್ಟಿ,ಗುರುಪ್ರಸಾದ್, ಕಾಡೂರು ಸುರೇಶ್ ಶೆಟ್ಟಿ, ಸ್ಥಳೀಯ ಗ್ರಾಮಪಂಚಾಯತ್ ಸದಸ್ಯರು, ಮೊದಲಾದವರು ಇದ್ದರು.
ಕುಂದಾಪುರ : ಇನ್‌ಸ್ಟಿಟ್ಯೂಟ್ ಆಫ್ ಕಾಸ್ಟ್ ಅಕೌಂಟಿAಗ್ ಆಫ್ ಇಂಡಿಯಾ ನಡೆಸುವ ಸಿಎಂಎ ಫೌಂಡೇಶನ್, ಡಿಸೆಂಬರ್ 2025ರಲ್ಲಿ ನಡೆದ ಪರೀಕ್ಷೆಯಲ್ಲಿ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಉತ್ಕೃಷ್ಟ ಸಾಧನೆಗೈದಿದ್ದಾರೆ.
ಪ್ರಗತಿ, ದೀಕ್ಷಿತಾ, ಐಶ್ವರ್ಯ, ತಿಲಕ್ ಹಾಗೂ ಶಬ್ದಿಕಾ ಪೂಜಾರಿ ಉತ್ತೀರ್ಣರಾಗಿದ್ದಾರೆ. ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಹಾಗೂ ವಿ-ರೀಚ್ ಸಂಸ್ಥೆಯ ಪಠ್ಯ ಪ್ರವಚನ, ಮಧ್ಯಂತರ ಮಾದರಿ ಪರೀಕ್ಷೆ ಹಾಗೂ ನುರಿತ ತರಬೇತುದಾರರಿಂದ ತರಬೇತಿ, ಸಲಹೆ ಮತ್ತು ಮಾರ್ಗದರ್ಶನ ಪಡೆದು ವಿದ್ಯಾರ್ಥಿಗಳು ಈ ಸಾಧನೆಗೈದಿದ್ದಾರೆ.
ಸಾಧಕ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ-ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.
ಕೋಟೇಶ್ವರ : ಕುಂದಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶ್ರೀ ಮನೋಹರ್ ಉಪ್ಪುಂದ ಅವರು ಮಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ಡಾ. ಸಿ. ಕುಸುಮಾಕರ ಹೆಬ್ಬಾರ್ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ “ಮರ್ಜರ್ ಅಂಡ್ ಆಕ್ವಿಷನ್ ಆಫ್ ಕಮರ್ಷಿಯಲ್ ಬ್ಯಾಂಕ್ಸ್: ಅ ಸ್ಟಡಿ ವಿತ್ ಸ್ಪೆಷಲ್ ರೆಫರೆನ್ಸ್ ಟು ದ ಮರ್ಜರ್ ಆಫ್ ಎಸ್.ಬಿ.ಐ ಅಂಡ್ ಇಟ್ಸ್ ಅಸೋಸಿಯೇಟ್ಸ್” ಎಂಬ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಪಡೆದಿದ್ದಾರೆ.
ಶ್ರೀ ಮನೋಹರ್ ಉಪ್ಪುಂದ ಅವರು ಉಪ್ಪುಂದದ ಮತ್ಸ್ಯೋದ್ಯಮಿ ಶ್ರೀ ಈಶ್ವರ ಬಬ್ರಿ ಹಾಗೂ ಶ್ರೀಮತಿ ಧರ್ಮಾವತಿ ದಂಪತಿಗಳ ಪುತ್ರರಾಗಿದ್ದು, ಹಲವು ಸರ್ಕಾರಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ರ‍್ಯಾಂಕ್ ಪಡೆದು ಉತ್ತೀರ್ಣರಾಗಿದ್ದಾರೆ. ಶೈಕ್ಷಣಿಕ ಸಾಧನೆಯ ಜೊತೆಗೆ ಅವರು ಉತ್ತಮ ಕ್ರೀಡಾಪಟುವಾಗಿಯೂ ಗುರುತಿಸಿಕೊಂಡಿದ್ದಾರೆ.

ಮಂಗಳೂರು: ಸ್ಕೂಟರ್ ಸವಾರನೋರ್ವ ಬೀರಿ ಸಮೀಪ ತಲಪಾಡಿ ಕಡೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಕಾರು ಹಾಗೂ ಸ್ಕೂಟರ್ ಗೆ ನಡುವೆ ಢಿಕ್ಕಿ ಸಂಭವಿಸಿದೆ.ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.ಮೃತಪಟ್ಟವರನ್ನು ಮುಹಮ್ಮದ್ ಮಹಾಝ್ ಬಟ್ಟಪ್ಪಾಡಿ (24) ಎಂದು ಗುರುತಿಸಲಾಗಿದೆ.
ಮುಹಮ್ಮದ್ ಮಹಾಝ್ ಅವರು ಮಂಗಳೂರಿನಲ್ಲಿ ಜನವರಿ 5ರಂದು ರಾತ್ರಿ ಕ್ಯಾಟರಿಂಗ್ ಕೆಲಸ ಮುಗಿಸಿ ತಮ್ಮ ಸ್ಕೂಟರ್‌ನಲ್ಲಿ ಊರಿಗೆ ಮರಳುತ್ತಿದ್ದರು. ಬೀರಿ ಸಮೀಪ ತಲಪಾಡಿ ಕಡೆಗೆ ಹೋಗುತ್ತಿದ್ದ ಕಾರು ಮತ್ತು ಇವರ ಸ್ಕೂಟರ್ ನಡುವೆ ಅಪಘಾತ ಸಂಭವಿಸಿದೆ.
ಮಹಾಝ್ ಅವರು ಢಿಕ್ಕಿಯ ರಭಸಕ್ಕೆ ರಸ್ತೆಗೆ ಎಸೆಯಲ್ಪಟ್ಟಿದ್ದು, ನಂತರದಲ್ಲಿ ಅವರಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದವು. ತಕ್ಷಣವೇ ಅವರನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ ಅವರು ಚಿಕಿತ್ಸೆ ಫಲಕರಿಯಾಗದೇ ಮೃತಪಟ್ಟಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು : ಮಂಗಳೂರನ್ನು ಡ್ರಗ್ಸ್ ಸಿಟಿ ಮಾಡಲು ಮುಂದಾಗಿದ್ದ 6 ಮಂದಿ ಡ್ರಗ್ ಪೆಡ್ಲರ್ ಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದು, ಅವರಿಗೆ ಡ್ರಗ್ ಸಪ್ಲೈ ಮಾಡುತ್ತಿದ್ದ ಪ್ರಮುಖ ಡ್ರಗ್ ಸಪ್ಲೈಯರ್ ಉಂಗಾಂಡಾ ಮೂಲದ ಮಹಿಳೆಯನ್ನೂ ಅರೆಸ್ಟ್ ಮಾಡುವ ಮೂಲಕ ಮಂಗಳೂರು ಪೊಲೀಸರು ಪ್ರಮುಖ ಡ್ರಗ್ ರಾಕೆಟ್ ನ್ನು ಭೇದಿಸಿದ್ದಾರೆ.ಬಂಧಿತನ್ನು ಉಂಗಾಂಡಾ ಮೂಲದ ಸದ್ಯ ಬೆಂಗಳೂರಿನಲ್ಲಿರುವ ಮಹಿಳೆ ಜಲೀಯಾ ಜಲ್ವಾಂಗ್ ಎಂದು ಗುರುತಿಸಲಾಗಿದೆ.ಈಕೆಯನ್ನು ಜಿಗಣಿ ಪರಿಸರದಲ್ಲಿ 4 ಕೆಜಿ ಎಂಡಿಎಂಎಯೊಂದಿಗೆ ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಡ್ರಗ್ ಪೆಡ್ಲರ್ ಗಳಾದ ಕುಂದಾಪುರ ನಿವಾಸಿ ಮೊಹಮ್ಮದ್ ಶಿಯಾಬ್ @ ಶಿಯಾಬ್ ( 22), ಉಳ್ಳಾಲ ನಿವಾಸಿ ಮೊಹಮ್ಮದ್ ನೌಷದ್ @ ನೌಷದ್ ಪ್ರಾಯ(29), ಬೆಂಗ್ರೆ ನಿವಾಸಿ ಇಮ್ರಾನ್ @ ಇಂಬ (27), ಬಂಟ್ವಾಳದ ನಿವಾಸಿ ನಿಸಾರ್ ಅಹಮ್ಮದ್( 36) ಎಂಬುವರನ್ನು ಮುಲ್ಕಿ ಪೊಲೀಸರು ಅರೆಸ್ಟ್ ಮಾಡಿದ್ದು, ಅವರಿಂದ 524 ಗ್ರಾಂ ಎಂಡಿಎಂಎ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ.ಇನ್ನೊಂದು ಪ್ರಕರಣದಲ್ಲಿ ಸುರತ್ಕಲ್ ಪೊಲೀಸ್ ಠಾಣೆಯ ಪೊಲೀಸರು ಉಡುಪಿ ಮೂಲದ ಮೊಹಮ್ಮದ್ ಇಕ್ಬಾಲ್ (30), ಶೆಹರಾಜ್ ಶಾರೂಕ್ (25) ಎಂಬ ಇಬ್ಬರನ್ನು ಅರೆಸ್ಟ್ ಮಾಡಿದ್ದು, ಇವರಿಂದ 200 ಗ್ರಾಂ ಎಂಡಿಎಂಎ ಡ್ರಗ್ಸ್ ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರು ಜನರಿಗೂ ಬೆಂಗಳೂರಿನಲ್ಲಿ ಅರೆಸ್ಟ್ ಆಗಿರುವ ಉಂಗಾಂಡಾ ಮೂಲದ ಮಹಿಳೆ ಡ್ರಗ್ಸ್ ಸಪ್ಲೈ ಮಾಡುತ್ತಿದ್ದಳು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಉಂಗಾಂಡಾ ಮಹಿಳೆ ಬಂಧನದೊಂದಿಗೆ ಮಂಗಳೂರಿಗೆ ಸಪ್ಲೈ ಆಗುತ್ತಿದ್ದ ಡ್ರಗ್ಸ್ ನ ನೆಟ್ವರ್ಕ್ ಬಂದ್ ಆಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಅರೆಸ್ಟ್ ಆಗಿರುವ ಉಂಗಾಂಡಾ ಮಹಿಳೆ ತನ್ನೊಂದಿಗೆ ಸುಮಾರು 4 ಕೆಜಿ ಎಂಡಿಎಂಎ ಡ್ರಗ್ಸ್ ನ್ನು ಹೊಂದಿದ್ದು, ಅದರ ಮೌಲ್ಯ ಸುಮಾರು 4 ಕೋಟಿ ಎಂದು ಅಂದಾಜಿಸಲಾಗಿದೆ. ಅಷ್ಟೂ ಡ್ರಗ್ ಈ ಬಂಧಿತ ಆರು ಮಂದಿಯ ಮೂಲಕ ಜಿಲ್ಲೆಗೆ ಬರುವ ಸಾಧ್ಯತೆ ಇತ್ತು. ಮಂಗಳೂರು ಪೊಲೀಸರ ಕಾರ್ಯಾಚರಣೆ ಮೂಲಕ ಅತೀ ದೊಡ್ಡ ಡ್ರಗ್ ರಾಕೆಟ್ ನ್ನು ಭೇದಿಸಿದ್ದಾರೆ.
ಬೆಂಗಳೂರು : ಕಳೆದ ಕೆಲವು ದಿನಗಳ ಹಿಂದೆ ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಶ್ನೆ ಪತ್ರಿಕೆ ಲೀಕ್ ಮಾಡಿದ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಇದೀಗ ಬಂಧಿಸಲಾಗಿದೆ.
ಶಿಕ್ಷಕರು ವಿದ್ಯಾರ್ಥಿಗಳು ಸೇರಿದಂತೆ 8 ಜನರನ್ನು ಪೊಲೀಸರು ಆರೆಸ್ಟ್ ಮಾಡಿದ್ದಾರೆ.ತುಮಕೂರು, ರಾಮನಗರ, ಕಲ್ಬುರ್ಗಿ ಜಿಲ್ಲೆಯ ಶಾಲೆಗಳ ಶಿಕ್ಷಕರು ಹಾಗೂ ಕೆಲವು ವಿದ್ಯಾರ್ಥಿಗಳು ಆರೆಸ್ಟ್ ಆಗಿದ್ದಾರೆ. ಬೆಂಗಳೂರು ಉತ್ತರ ವಿಭಾಗದ ಸೆನ್ ಠಾಣೆಯಲ್ಲಿ ಈ ಒಂದು ಪ್ರಕರಣ ದಾಖಲಾಗಿತ್ತು. ಹಿಂದಿ ವಿಷಯದ ಪ್ರಶ್ನೆ ಪತ್ರಿಕೆ ಯೂಟ್ಯೂಬ್‌ನಲ್ಲಿ ಹರಿದಾಡಿತ್ತು. ಈ ಸಂಬಂಧ ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿ ದೂರು ನೀಡಿದ್ದರು.
ಪೊಲೀಸರ ತನಿಖೆ ವೇಳೆ ಪ್ರಶ್ನೆಪತ್ರಿಕೆ ಲೀಕ್ ಮಾಡಿರುವ ದೊಡ್ಡ ಜಾಲ ಬಯಲಾಗಿದೆ. ತುಮಕೂರಿನ ಶಾಲೆಯೊಂದರ ಮುಖ್ಯೋಪಾಧ್ಯಾಯ ವಿ.ಡಿ. ಗಿರೀಶ್, ರಾಮನಗರದ ಸಹ ಶಿಕ್ಷಕ ಅಮ್ಜದ್ ಖಾನ್, ಕಲಬುರಗಿ ಜಿಲ್ಲೆಯ ಮುಖ್ಯ ಶಿಕ್ಷಕಿ ಶಾಹಿದಾ ಬೇಗಂ, ಶಿಕ್ಷಕ ಮೊಹಮ್ಮದ್ ಸಿರಾಜುದ್ದೀನ್, ಸಹ ಶಿಕ್ಷಕಿ ಫಾಹ್ಮಿದಾ, ಶಿಕ್ಷಕಿ ಫರ್ಜಾನಾ ಬೇಗಂ ಬಂಧಿತರು. ಇವರ ಜೊತೆಗೆ ಇಬ್ಬರು ಅಪ್ರಾಪ್ತ ವಿದ್ಯಾರ್ಥಿಗಳನ್ನೂ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.
ಪ್ರಶ್ನೆ ಪತ್ರಿಕೆ ಸೋರಿಕೆ ಯಾವ ರೀತಿಯಲ್ಲಿ ನಡೆದಿದೆ, ಇನ್ನಿತರರು ಶಾಮೀಲಾಗಿದ್ದಾರೆಯೇ ಎಂಬುದರ ಬಗ್ಗೆ ತನಿಖೆ ಮುಂದುವರಿದಿದೆ. ಶಿಕ್ಷಣ ಕ್ಷೇತ್ರದ ಪಾವಿತ್ರ್ಯಕ್ಕೆ ಧಕ್ಕೆ ತಂದಿರುವ ಈ ಪ್ರಕರಣ ರಾಜ್ಯಾದ್ಯಂತ ಆತಂಕ ಮೂಡಿಸಿದೆ.
