Categories
ಬ್ರೇಕಿಂಗ್ ನ್ಯೂಸ್

ಪರಶುರಾಮ ಥೀಮ್ ಪಾರ್ಕ್ ಕಟ್ಟಡದಲ್ಲಿ ತಾಮ್ರದ ಹೊದಿಕೆ ಕಳವು : ಇಬ್ಬರು ಬಂಧನ

ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕು ಎರ್ಲಪಾಡಿ ಗ್ರಾಮದ ಬೈಲೂರು ಉಮ್ಮಿಕಲ್ ಬೆಟ್ಟದಲ್ಲಿರುವ ಪರಶುರಾಮ ಥೀಮ್ ಪಾರ್ಕ್ ಕಟ್ಟಡದಲ್ಲಿ ತಾಮ್ರದ ಹೊದಿಕೆ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಕಳ ನಗರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ಸುಮಾರು ₹2.18 ಲಕ್ಷ ಮೌಲ್ಯದ ಕಳವುಗೊಳಿಸಿದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಗಳನ್ನು ಕಳವಾರು ನಿವಾಸಿ ಆರೀಫ್ @ ಮುನ್ನ (37) ಹಾಗೂ ಕಾವೂರು ನಿವಾಸಿ ಅಬ್ದುಲ್ ಹಮೀದ್ (32) ಎಂದು ಗುರುತಿಸಲಾಗಿದೆ.

ದಿನಾಂಕ 03-01-2026ರಂದು ಪರಶುರಾಮ ಥೀಮ್ ಪಾರ್ಕ್ ಕಟ್ಟಡದ ಮುಖ್ಯ ಬಾಗಿಲನ್ನು ಸಾಧನದ ಸಹಾಯದಿಂದ ಬಲವಂತವಾಗಿ ತೆರೆದು ಒಳಪ್ರವೇಶಿಸಿದ ದುಷ್ಕರ್ಮಿಗಳು, ಕಟ್ಟಡದ ಮೇಲ್ಛಾವಣಿಗೆ ಅಳವಡಿಸಲಾಗಿದ್ದ ತಾಮ್ರದ ಹೊದಿಕೆಯನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದರು. ಈ ಕುರಿತು ದಾಖಲಾಗಿದ್ದ ದೂರಿನ ಮೇರೆಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ 2023ರ ಕಲಂ 331(3), 331(4) ಹಾಗೂ 305ರಡಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಶ್ರೀ ಹರೀರಾಂ ಶಂಕರ ಐಪಿಎಸ್ ಅವರ ನಿರ್ದೇಶನದಂತೆ ಮೂರು ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಈ ತಂಡಗಳು ಉಡುಪಿ, ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಮಂಗಳೂರು ನಗರ ವ್ಯಾಪ್ತಿಯಲ್ಲಿ ತನಿಖೆ ನಡೆಸಿ ಖಚಿತ ಮಾಹಿತಿಯ ಆಧಾರದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿವೆ.

ಬಂಧಿತ ಆರೀಫ್ @ ಮುನ್ನ ವಿರುದ್ಧ ಪಡುಬಿದ್ರೆ, ಉಡುಪಿ ನಗರ, ಬ್ರಹ್ಮಾವರ, ಕಾರ್ಕಳ ಗ್ರಾಮಾಂತರ ಹಾಗೂ ಮೂಲ್ಕಿ–ಮೂಡಬಿದ್ರೆ ಪೊಲೀಸ್ ಠಾಣೆಗಳಲ್ಲಿ 9ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಅಬ್ದುಲ್ ಹಮೀದ್ ವಿರುದ್ಧ ಬಂಟ್ವಾಳ ಹಾಗೂ ಮೂಡಬಿದ್ರೆ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿರುವುದು ತಿಳಿದುಬಂದಿದೆ.

ಬಂಧಿತರಿಂದ 51 ಕೆ.ಜಿ ತೂಕದ ತಾಮ್ರದ ಹೊದಿಕೆ (ಅಂದಾಜು ಮೌಲ್ಯ ₹45,000), ಎರಡು ಸೀಲಿಂಗ್ ಫ್ಯಾನ್‌ಗಳು (₹1,200), ಕೃತ್ಯಕ್ಕೆ ಬಳಸಿದ್ದ KA-35-A-3870 ಸಂಖ್ಯೆಯ ಏಪ್ ಗೂಡ್ಸ್ ಆಟೋ ರಿಕ್ಷಾ (ಅಂದಾಜು ಮೌಲ್ಯ ₹1,00,000) ಹಾಗೂ KA-19-HV-9410 ಸಂಖ್ಯೆಯ ಹೀರೋ ಕಂಪನಿಯ ಮೋಟಾರ್ ಸೈಕಲ್ (ಅಂದಾಜು ಮೌಲ್ಯ ₹70,000) ಸೇರಿ ಒಟ್ಟು ₹2,18,200 ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಇತರ ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ.

ಈ ಕಾರ್ಯಾಚರಣೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರೀರಾಂ ಶಂಕರ ಐಪಿಎಸ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ ನಾಯ್ಕ ಅವರ ಮಾರ್ಗದರ್ಶನದಲ್ಲಿ, ಕಾರ್ಕಳ ಉಪವಿಭಾಗದ ಪ್ರಭಾರ ಪೊಲೀಸ್ ಉಪಾಧೀಕ್ಷಕ ಪ್ರಭು ಡಿ.ಟಿ ಅವರ ನೇತೃತ್ವದಲ್ಲಿ ನಡೆಯಿತು. ಕಾರ್ಕಳ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಮಂಜಪ್ಪ ಡಿ.ಆರ್., ಪಿಎಸ್ಐಗಳಾದ ಮುರುಳೀಧರ ನಾಯ್ಕ, ಶಿವಕುಮಾರ್ ಎಸ್.ಆರ್., ಕಾರ್ಕಳ ಗ್ರಾಮಾಂತರ ಪಿಎಸ್ಐ ಪ್ರಸನ್ನಕುಮಾರ್ ಎಂ.ಎಸ್., ಪಿಎಸ್ಐ ಸುಂದರ ಹಾಗೂ ಸಿಬ್ಬಂದಿ ಮತ್ತು ಜಿಲ್ಲಾ ಆರ್ಡಿಸೆಲ್ ವಿಭಾಗದ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Categories
ಕರಾವಳಿ ಸುದ್ದಿ

ಹೋಟೆಲ್ ಮತ್ತು ಹೋಮ್ ಸ್ಟೇಗಳಿಗಾಗಿ ಫೋರ್ಥ್‌ಫೋಕಸ್ ಹೊಸ ಸಮರ್ಪಿತ OTA ಆನ್ ಬೋರ್ಡಿಂಗ್ ಸೇವೆ

ಫೋರ್ಥ್‌ಫೋಕಸ್, ಒಂದು ದಶಕಕ್ಕಿಂತ ಹೆಚ್ಚು ಕಾಲ ಆತಿಥ್ಯ ಕ್ಷೇತ್ರದ ವ್ಯಾಪಕ ಗ್ರಾಹಕರಿಗೆ ಡಿಜಿಟಲ್ ಪರಿಹಾರಗಳನ್ನು ಒದಗಿಸುತ್ತ ಬಂದಿರುವ ಸಂಸ್ಥೆ, ಇದೀಗ ಹೋಟೆಲ್ ಮತ್ತು ಹೋಮ್‌ಸ್ಟೇಗಳ ಹೆಚ್ಚುತ್ತಿರುವ ಡಿಜಿಟಲ್ ವಿತರಣಾ ಅಗತ್ಯಕ್ಕೆ ಪ್ರತಿಕ್ರಿಯೆಯಾಗಿ OTA (ಆನ್‌ಲೈನ್ ಟ್ರಾವೆಲ್ ಅಗ್ರಿಗೇಟರ್‌) ಆನ್‌ಬೋರ್ಡಿಂಗ್‌ಗೆ ಪ್ರತ್ಯೇಕ ಹಾಗೂ ಸಮರ್ಪಿತ ಸೇವೆಯನ್ನು ಅಧಿಕೃತವಾಗಿ ಆರಂಭಿಸಿದೆ.

ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಹೋಟೆಲ್‌ಗಳು ಮತ್ತು ಹೋಮ್‌ಸ್ಟೇಗಳು ತಮ್ಮ ಬುಕ್ಕಿಂಗ್‌ಗಳಿಗೆ OTAs ಮೇಲೆ ಅವಲಂಬಿತವಾಗುತ್ತಿರುವ ಹಿನ್ನೆಲೆಯಲ್ಲಿ, OTAಗಳಲ್ಲಿ ಹೋಟೆಲ್ ಲಿಸ್ಟಿಂಗ್ ಮಾಡುವುದು ಮತ್ತು ಲೈವ್ ಮಾಡುವುದು ಸಂಬಂಧಿಸಿದಂತೆ ಹೋಟೆಲ್ ಮತ್ತು ಹೋಮ್‌ಸ್ಟೇ ಮಾಲೀಕರಿಂದ ವಿಚಾರಣೆಗಳು ನಿರಂತರವಾಗಿ ಹೆಚ್ಚುತ್ತಿರುವುದಾಗಿ ಸಂಸ್ಥೆ ತಿಳಿಸಿದೆ. ಇದುವರೆಗೆ ಅನೌಪಚಾರಿಕವಾಗಿ ನೀಡುತ್ತಿದ್ದ ಸಹಾಯ ಇದೀಗ ಆತಿಥ್ಯ ಕ್ಷೇತ್ರದಲ್ಲಿ ಪುನಃಪುನಃ ಕಾಣಿಸಿಕೊಳ್ಳುವ ಕಾರ್ಯಾಚರಣಾತ್ಮಕ ಅಗತ್ಯವಾಗಿ ರೂಪುಗೊಂಡಿದೆ.

ಸ್ಥಳೀಯ ಮಟ್ಟದ ಸಮಸ್ಯೆಗಳಿಗೆ ವ್ಯವಸ್ಥಿತ ಪರಿಹಾರ
ಸ್ವತಂತ್ರ ಹೋಟೆಲ್‌ಗಳು ಮತ್ತು ಹೋಮ್‌ಸ್ಟೇಗಳು OTA ಆನ್‌ಬೋರ್ಡಿಂಗ್ ಸಂದರ್ಭದಲ್ಲಿ ವಿಳಂಬ, ಸ್ಪಷ್ಟವಲ್ಲದ ಸೂಚನೆಗಳು ಮತ್ತು ತಾಂತ್ರಿಕ ಸಂರಚನಾ ದೋಷಗಳನ್ನು ಸಾಮಾನ್ಯವಾಗಿ ಎದುರಿಸುತ್ತಿವೆ. ಇದರ ಪರಿಣಾಮವಾಗಿ ಅನುಮೋದನೆ ಪ್ರಕ್ರಿಯೆ ತಡವಾಗುವುದು ಅಥವಾ ಲೈವ್ ಆದ ನಂತರ ದರ, ಇನ್ವೆಂಟರಿ ಮತ್ತು ನೀತಿಗಳಲ್ಲಿ ಅಸಂಗತತೆ ಉಂಟಾಗುವುದು ಕಂಡುಬರುತ್ತದೆ.

OTA ಪ್ಲಾಟ್‌ಫಾರ್ಮ್‌ಗಳೊಂದಿಗೆ ನೇರವಾಗಿ ಕಾರ್ಯನಿರ್ವಹಿಸುವಾಗ ಹೋಟೆಲ್ ಮಾಲೀಕರು ದಿನನಿತ್ಯ ಎದುರಿಸುವ ನೆಲಮಟ್ಟದ ಗೊಂದಲವನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಸೇವೆಯನ್ನು ಪ್ರತ್ಯೇಕವಾಗಿ ರೂಪಿಸಲಾಗಿದೆ,_ ಎಂದು ಫೋರ್ಥ್‌ಫೋಕಸ್ ಸಂಸ್ಥಾಪಕ ಮತ್ತು ನಿರ್ದೇಶಕರಾದ *ವಿ ಗೌತಮ್ ನಾವಡ* ತಿಳಿಸಿದ್ದಾರೆ.

ಸೇವೆಯ ವ್ಯಾಪ್ತಿ ಮತ್ತು ಸಮಯಾವಧಿ
ಈ OTA ಆನ್‌ಬೋರ್ಡಿಂಗ್ ಸೇವೆಯನ್ನು ಕೇವಲ ಲಿಸ್ಟಿಂಗ್ ಮಾಡುವ ಕೆಲಸವಾಗಿ ಅಲ್ಲ, ಸಂಪೂರ್ಣ ಕಾರ್ಯಾಚರಣಾತ್ಮಕ ಸೆಟ್‌ಅಪ್ ಆಗಿ ರೂಪಿಸಲಾಗಿದೆ. ಖಾತೆ ರಚನೆ, ಪ್ರೊಫೈಲ್ ಸಿದ್ಧತೆ, ಕೊಠಡಿ ಹಾಗೂ ದರ ಸಂರಚನೆ, ನೀತಿ ಮತ್ತು ತೆರಿಗೆ ವಿವರಗಳು, ಅಗತ್ಯ ದಾಖಲೆಗಳ ಸಹಾಯ ಮತ್ತು ಲೈವ್ ಆಗುವವರೆಗೆ ಸಂಯೋಜನೆ ಇದರ ವ್ಯಾಪ್ತಿಯಲ್ಲಿ ಒಳಗೊಂಡಿವೆ.

ಫೋರ್ಥ್‌ಫೋಕಸ್ ತಂಡದ ಪಾಲಿಗೆ ಆನ್‌ಬೋರ್ಡಿಂಗ್ ಪ್ರಕ್ರಿಯೆ ಸಾಮಾನ್ಯವಾಗಿ ಸುಮಾರು 10 ಕೆಲಸದ ದಿನಗಳಲ್ಲಿ ಪೂರ್ಣಗೊಳ್ಳುತ್ತದೆ. ದಾಖಲೆಗಳ ಸಿದ್ಧತೆ ಮತ್ತು OTA ಪ್ಲಾಟ್‌ಫಾರ್ಮ್ ಅವಶ್ಯಕತೆಗಳ ಆಧಾರದಲ್ಲಿ ಈ ಅವಧಿ ಬದಲಾಗಬಹುದು. ಕೆಲವೊಂದು OTA ಗಳು ಒಳಾಂಗಣ ಪರಿಶೀಲನೆ ಮತ್ತು ಅನುಮೋದನೆಗಾಗಿ ಹೆಚ್ಚುವರಿ ಸಮಯ ತೆಗೆದುಕೊಳ್ಳುವ ಸಾಧ್ಯತೆಯಿದೆ.

ಬೆಂಬಲಿತ OTA ಪ್ಲಾಟ್‌ಫಾರ್ಮ್‌ಗಳು
ಈ ಸೇವೆಯ ಮೂಲಕ ಭಾರತ ಮತ್ತು ಅಂತರರಾಷ್ಟ್ರೀಯ ಮಟ್ಟದ ಹಲವಾರು OTA ಪ್ಲಾಟ್‌ಫಾರ್ಮ್‌ಗಳಿಗೆ ಆನ್‌ಬೋರ್ಡಿಂಗ್ ನೆರವು ನೀಡಲಾಗುತ್ತದೆ. ಸಂಸ್ಥೆಯ ಮಾಹಿತಿ ಪ್ರಕಾರ ಈಗಿನ ಬೆಂಬಲಿತ ಪ್ಲಾಟ್‌ಫಾರ್ಮ್‌ಗಳ ಪಟ್ಟಿಯಲ್ಲಿ:
MakeMyTrip, Goibibo, Booking.com, Agoda, EaseMyTrip, Yatra, Cleartrip, Expedia, Airbnb, OneFineRate, HappyEasyGo, Akbar Travels

ವಾಸ್ತವ್ಯದ ಪ್ರಕಾರ, ಸ್ಥಳ ಮತ್ತು OTA ಅರ್ಹತಾ ಮಾನದಂಡಗಳ ಆಧಾರದಲ್ಲಿ ಇನ್ನಷ್ಟು ಪ್ಲಾಟ್‌ಫಾರ್ಮ್‌ಗಳಿಗೆ ಸಹ ಬೆಂಬಲ ನೀಡಬಹುದು ಎಂದು ಸಂಸ್ಥೆ ತಿಳಿಸಿದೆ.

ಐಚ್ಛಿಕ ಚಾನೆಲ್ ಮ್ಯಾನೇಜರ್ ಸೌಲಭ್ಯ
ಬಹು OTA ಪ್ಲಾಟ್‌ಫಾರ್ಮ್‌ಗಳಲ್ಲಿ ಇನ್ವೆಂಟರಿ ನಿರ್ವಹಿಸುವ ಹೋಟೆಲ್‌ಗಳಿಗೆ ಚಾನೆಲ್ ಮ್ಯಾನೇಜರ್ ಸಾಫ್ಟ್‌ವೇರ್ ಅನ್ನು ಐಚ್ಛಿಕ ಸೇವೆಯಾಗಿ ಒದಗಿಸಲಾಗುತ್ತದೆ. ಈ ಸೌಲಭ್ಯಕ್ಕೆ ಪ್ರತ್ಯೇಕ ಶುಲ್ಕ ವಿಧಿಸಲಾಗುತ್ತದೆ ಮತ್ತು ಇದು ಆನ್‌ಬೋರ್ಡಿಂಗ್ ಸೇವೆಯಲ್ಲಿ ಒಳಗೊಂಡಿಲ್ಲ.

ವ್ಯವಸ್ಥಿತ OTA ಆನ್‌ಬೋರ್ಡಿಂಗ್ ಯಾಕೆ ಮುಖ್ಯ?
ನಿಖರ ಮತ್ತು ಏಕರೂಪವಾದ OTA ಮಾಹಿತಿ ಕೇವಲ ಬುಕ್ಕಿಂಗ್‌ಗಳಿಗೆ ಮಾತ್ರ ಸೀಮಿತವಲ್ಲ. ಹೋಟೆಲ್ ವಿವರಗಳ ಶುದ್ಧತೆ, ಒಂದೇ ರೀತಿಯ ಹೆಸರು ಮತ್ತು ಸರಿಯಾದ ಸಂರಚನೆಗಳು ಹುಡುಕಾಟ ಎಂಜಿನ್‌ಗಳು, ಪ್ರವಾಸ ಅನ್ವೇಷಣಾ ಪ್ಲಾಟ್‌ಫಾರ್ಮ್‌ಗಳು ಮತ್ತು AI ಆಧಾರಿತ ಶಿಫಾರಸು ವ್ಯವಸ್ಥೆಗಳಲ್ಲಿ ಹೋಟೆಲ್‌ಗಳ ಕಂಡುಬರುವಿಕೆ ಮತ್ತು ವಿಶ್ವಾಸಾರ್ಹತೆಗೆ ಸಹಕಾರಿ.

ಈ ಹಿನ್ನೆಲೆಯಲ್ಲಿ OTA ಆನ್‌ಬೋರ್ಡಿಂಗ್ ಅನ್ನು ಪ್ರತ್ಯೇಕ ಸೇವೆಯಾಗಿ ರೂಪಿಸುವ ಮೂಲಕ, ಸಣ್ಣ ಮತ್ತು ಮಧ್ಯಮ ಗಾತ್ರದ ಆತಿಥ್ಯ ಸಂಸ್ಥೆಗಳು ಡಿಜಿಟಲ್ ವೇದಿಕೆಗಳಲ್ಲಿ ಹೆಚ್ಚು ಸ್ಪಷ್ಟ ಮತ್ತು ಸುವ್ಯವಸ್ಥಿತ ಹಾಜರಾತಿ ಸಾಧಿಸಲು ಸಹಕಾರಿಯಾಗಲಿದೆ ಎಂಬ ನಿರೀಕ್ಷೆಯನ್ನು ಫೋರ್ಥ್‌ಫೋಕಸ್ ಹೊಂದಿದೆ.

ಫೋರ್ಥ್‌ಫೋಕಸ್ ಕುರಿತು
ಫೋರ್ಥ್‌ಫೋಕಸ್ ಅನ್ನು 2015ರಲ್ಲಿ ವಿ ಗೌತಮ್ ನವಡ ಅವರು ಕರ್ನಾಟಕದ ಕುಂದಾಪುರದಲ್ಲಿ ಸ್ಥಾಪಿಸಿದರು. ಸಂಸ್ಥೆ ಬ್ರಾಂಡಿಂಗ್, ವಿನ್ಯಾಸ ಮತ್ತು ಅಭಿವೃದ್ಧಿ, ಆತಿಥ್ಯ ತಂತ್ರಜ್ಞಾನ ಮತ್ತು ಡಿಜಿಟಲ್ ಮಾರ್ಕೆಟಿಂಗ್ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತದೆ. ವೆಬ್‌ಸೈಟ್ ಮತ್ತು ಅಪ್ಲಿಕೇಶನ್ ಅಭಿವೃದ್ಧಿ, OTA ಆನ್‌ಬೋರ್ಡಿಂಗ್, ಬುಕ್ಕಿಂಗ್ ಮತ್ತು ಪಾವತಿ ವ್ಯವಸ್ಥೆಗಳು ಹಾಗೂ ಡಿಜಿಟಲ್ ಸಂವಹನ ಪರಿಹಾರಗಳು ಇದರ ಪ್ರಮುಖ ಸೇವೆಗಳಾಗಿವೆ. 2025ರಲ್ಲಿ, ಬಿಸಿನೆಸ್ ಔಟ್‌ಲೈನ್ ಸಂಸ್ಥೆಯಿಂದ “Best Company to Look For in 2025” ಎಂಬ ಗೌರವವನ್ನು ಫೋರ್ಥ್‌ಫೋಕಸ್ ಪಡೆದುಕೊಂಡಿದೆ.

Categories
ಪಂಚಾಂಗ

ಶುಭ ದಿನದ ಪಂಚಾಂಗ

ಶುಭ ದಿನದ ಪಂಚಾಂಗ

ಕಲಿಯುಗಾಬ್ದ 5127

ವಿಶ್ವಾವಸು ಸಂವತ್ಸರ

ದಕ್ಷಿಣಾಯನ

ಹೇಮಂತ: ಋತು

ಪುಷ್ಯ: ಮಾಸ

ಕೃಷ್ಣ ಪಕ್ಷ

ಅಷ್ಟಮಿ : ತಿಥಿ

ಚಿತ್ರೆ : ನಕ್ಷತ್ರ

ಭಾನುವಾರ

11.01.2026

ಈ ದಿನ ಎಲ್ಲರಿಗೂ ಶುಭವಾಗಲಿ

Categories
ಪಂಚಾಂಗ

ಶುಭ ದಿನದ ಪಂಚಾಂಗ

ಶುಭ ದಿನದ ಪಂಚಾಂಗ

ಕಲಿಯುಗಾಬ್ದ 5127

ವಿಶ್ವಾವಸು ಸಂವತ್ಸರ

ದಕ್ಷಿಣಾಯನ

ಹೇಮಂತ: ಋತು

ಪುಷ್ಯ: ಮಾಸ

ಕೃಷ್ಣ ಪಕ್ಷ

ಸಪ್ತಮಿ : ತಿಥಿ

ಹಸ್ತ : ನಕ್ಷತ್ರ

ಶನಿವಾರ

10.01.2026

ಈ ದಿನ ಎಲ್ಲರಿಗೂ ಶುಭವಾಗಲಿ

Categories
ಬ್ರೇಕಿಂಗ್ ನ್ಯೂಸ್

ಬೈಕ್ ಡಿಕ್ಕಿ : ವೃದ್ಧ ಸಾವು

ಪಡುಬಿದ್ರಿ : ಬೈಕ್ ಡಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟುತ್ತಿದ್ದ ವಯೋವೃದ್ಧರೊಬ್ಬರು ಮೃತಪಟ್ಟ ಘಟನೆ ಉಚ್ಚಿಲ ಬಸ್ಸು ನಿಲ್ದಾಣದ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಭವಿಸಿದೆ.

ಮೃತರನ್ನು ಪಣಿಯೂರು ಸೆಂಟರ್ ನಿವಾಸಿ ಸದಾಶಿವ ಕೋಟ್ಯಾನ್(65) ಎಂದು ಗುರುತಿಸಲಾಗಿದೆ.ಪಡುಬಿದ್ರಿ ಕಡೆಯಿಂದ ಕಾಪು ಕಡೆಗೆ ಹೋಗುತ್ತಿದ್ದಾಗ ಬೈಕ್, ರಸ್ತೆ ದಾಟುತ್ತಿದ್ದ ಸದಾಶಿವ ಅವರಿಗೆ ಡಿಕ್ಕಿ ಹೊಡೆದಿದೆ. ಇದರಿಂದ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಅವರು ಉಡುಪಿ ಜಿಲ್ಲಾಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರೆಂದು ತಿಳಿದುಬಂದಿದೆ.

ಮೃತರು ಮೂಳೂರಿನ ಹೊಟೇಲೊಂದರಲ್ಲಿ ಕೆಲಸ ಮಾಡುತ್ತಿದ್ದು ಮನೆಯಿಂದ ಹೊಟೇಲಿಗೆ ಬರುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Categories
ಕರಾವಳಿ ಸುದ್ದಿ

‘ವಿಕಸಿತ ಭಾರತ ಯಂಗ್ ಲೀಡರ್ಸ್ ಡೈಲಾಗ್ 2026’ರಲ್ಲಿ ಪಾಲ್ಗೊಳ್ಳಲು ಕಾರ್ಕಳದ ಮನು ಶೆಟ್ಟಿ ಇನ್ನಾ ಆಯ್ಕೆ

ಕಾರ್ಕಳ : ಜ.9ರಿಂದ 12ರ ವರೆಗೆ ದೆಹಲಿಯ ಭಾರತ ಮಂಟಪಂ ನಲ್ಲಿ ನಡೆಯುವ ‘ವಿಕಸಿತ ಭಾರತ ಯಂಗ್ ಲೀಡರ್ಸ್ ಡೈಲಾಗ್ 2026’ರಲ್ಲಿ ಭಾಗವಹಿಸಲು ಸತತ ದ್ವಿತೀಯ ಬಾರಿಗೆ ಬೆಂಗಳೂರಿನ ಚಾಣಕ್ಯ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಇನ್ನ ಗ್ರಾಮದ ಮನು ಶೆಟ್ಟಿ ಇನ್ನಾ ಆಯ್ಕೆಯಾಗಿದ್ದಾರೆ.

‘ವಿಕಸಿತ ಭಾರತ 2047’ ಗುರಿಯನ್ನು ತಲುಪುವಲ್ಲಿ ಯುವಕರ ಭೂಮಿಕೆಯನ್ನು ಉತ್ತೇಜಿಸುವ ಮತ್ತು ಅವರ ಯೋಚನೆಗಳನ್ನು ಹಂಚಿಕೊಳ್ಳಲು ಉದ್ದೇಶಿಸಿರುವ ಈ ಕಾರ್ಯಕ್ರಮದಲ್ಲಿ ಸ್ಟಾರ್ಟ್ಅಪ್ ಇಂಡಿಯಾ ಮಹಿಳಾ ನೇತೃತ್ವ, ಪಾರದರ್ಶಕ ಆಡಳಿತ, ಸಾಂಸ್ಕೃತಿಕ ಪ್ರಭಾವ ಮತ್ತು ಅವಿಷ್ಕಾರ ಮೊದಲಾದ ವಿವಿಧ ಮಹತ್ವದ ಥೀಮ್ ಆಧಾರಿತ ಚರ್ಚೆಗಳು ನಡೆಯಲಿವೆ.

ಗುಂಪು ಚರ್ಚೆಗಳಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಭಾರತದ ಮಹಿಳಾ ಕ್ರಿಕೆಟ್ ನಾಯಕಿ ಹರ್ಮನ್ ಪ್ರೀತ್ ಕೌರ್, ಬ್ಯಾಡ್ಮಿಂಟನ್ ಆಟಗಾರ ಪುಲ್ಲಿಲ ಗೋಪಿಚಂದ್, ಖ್ಯಾತ ಸಂವಹನ ತಜ್ಞೆ ಪಲ್ಕಿ ಶರ್ಮಾ ಮೊದಲಾದ ಗಣ್ಯರು ಭಾಗವಹಿಸಲಿದ್ದಾರೆ.

ಜ.12ರಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಅನುಭವ ಮತ್ತು ಮಾರ್ಗದರ್ಶನ ಹಂಚಿಕೊಳ್ಳಲಿದ್ದಾರೆ. ಈ ಸಂವಾದವು ಯುವ ಪೀಳಿಗೆಗೆ ರಾಷ್ಟ್ರದ ಗುರಿಗಳನ್ನು ರೂಪಿಸಲು ಪ್ರೇರಣೆ ನೀಡಲಿದೆ.

Categories
ಬ್ರೇಕಿಂಗ್ ನ್ಯೂಸ್

ಸಬ್ಲಾಡಿ ಸ್ಟೀಲ್ ಬ್ರಿಜ್ ಬಳಿ ರೈಲು ಡಿಕ್ಕಿ

ಹಟ್ಟಿಯಂಗಡಿ :  ಗ್ರಾಮದ ಸಬ್ಲಾಡಿ ಸ್ಟೀಲ್ ಬ್ರಿಜ್ ಬಳಿಯಲ್ಲಿ 6.00 ಗಂಟೆ ಸುಮಾರಿಗೆ ಕೇರಳದಿಂದ ಗೋವಾ ಕಡೆಗೆ ಹೋಗುವ ದುರಂತ್ ಎಕ್ಸ್ ಪ್ರೆಸ್  ರೈಲು ಒಂದು ರೈಲು ಹಳಿ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದೆ ಯುವಕನಿಗೆ ಡಿಕ್ಕಿಯಾಗಿದ್ದು ಹಟ್ಟಿಯಂಗಡಿ ಗ್ರಾಮದ ನಿವಾಸಿ ಜನಾರ್ದನ (39) ಮೃತಪಟ್ಟವರು ಇವರು ಬೆಂಗಳೂರಿನ ಕಂಪೆನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದು, 10 ದಿನಗಳ ಹಿಂದೆ ಊರಿಗೆ ಬಂದಿದ್ದರು . ತಲ್ಲೂರು ದೊಡ್ಡಮ್ಮನ ಪುತ್ರ ಗಣೇಶ ಅವನು ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Categories
ಪಂಚಾಂಗ

ಶುಭ ದಿನದ ಪಂಚಾಂಗ

ಶುಭ ದಿನದ ಪಂಚಾಂಗ

ಕಲಿಯುಗಾಬ್ದ 5127

ವಿಶ್ವಾವಸು ಸಂವತ್ಸರ

ದಕ್ಷಿಣಾಯನ

ಹೇಮಂತ: ಋತು

ಪುಷ್ಯ: ಮಾಸ

ಕೃಷ್ಣ ಪಕ್ಷ

ಷಷ್ಠಿ : ತಿಥಿ

ಉತ್ತರೆ : ನಕ್ಷತ್ರ

ಶುಕ್ರವಾರ

09.01.2026

ಈ ದಿನ ಎಲ್ಲರಿಗೂ ಶುಭವಾಗಲಿ

Categories
ಧಾರ್ಮಿಕ

ಅಂಗಾರಿಕೆ ಸಂಕಷ್ಟಹರ ಚತುರ್ಥಿಯ ವಿಜೃಂಭಣೆಯಿಂದ ನಡೆಯಿತು.

ಆನೆಗುಡ್ಡೆ : ಮಂಗಳವಾರದಂದು ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಅಂಗಾರಿಕೆ ಸಂಕಷ್ಟಹರ ಚತುರ್ಥಿಯ ಪರ್ವ ದಿನವು ಬಹಳ ವಿಜೃಂಭಣೆಯಿಂದ ನಡೆಯಿತು.

ಸಹಸ್ರಾರು ಸಂಖ್ಯೆಯಲ್ಲಿ ಬಂದಿದ್ದ ಭಕ್ತರ ಸಮ್ಮುಖದಲ್ಲಿ ಸಹಸ್ರ ನಾರಿಕೆಳ ಗಣಯಾಗ, ಮಧ್ಯಾಹ್ನ ಮಹಾಪೂಜೆ ಹಾಗೂ ಮಹಾ ಅನ್ನಸಂತರ್ಪಣೆ ನಡೆಯಿತು.ರಾತ್ರಿ 8 ಗಂಟೆಗೆ ಸಾಮೂಹಿಕ ಮಹಾ ಪೂಜೆಯೊಂದಿಗೆ ಸುವರ್ಣ ಪಲ್ಲಕ್ಕಿ ಉತ್ಸವ ರಜತ ರಥೋತ್ಸವ, ಓಲಗಮಂಟಪ ಪೂಜೆ, ಶಯನೋತ್ಸವದೊಂದಿಗೆ ರಾತ್ರಿ ಪೂಜೆ ಸಂಪನ್ನಗೊಂಡಿತು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ವಿಶ್ವೇಶ್ವರ ಮಹಿಳಾ ಭಜನಾ ಮಂಡಳಿ ಆನೆಗುಡ್ಡೆ ಕುಂಭಾಸಿ ಇವರಿಂದ ಭಜನಾ ಕಾರ್ಯಕ್ರಮ ಹಾಗೂ ನಾಗರಾಜ್ ಶೇಟ್ ಹಾಗೂ ಬಳಗ ಉಡುಪಿ ಇವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಿತು.

ಆಡಳಿತ ಧರ್ಮದರ್ಶಿಗಳಾದ ಕೆ. ಶ್ರೀ ರಮಣ ಉಪಾಧ್ಯಾಯ, ಧರ್ಮದರ್ಶಿಗಳಾದ ಕೆ. ಪದ್ಮನಾಭ ಉಪಾಧ್ಯಾಯ, ಕೆ. ನಿರಂಜನ ಉಪಾಧ್ಯಾಯ ಪರ್ಯಾಯ ಅರ್ಚಕರಾದ ಕೆ ವ್ಯಾಸ ಉಪಾಧ್ಯಾಯ ಮತ್ತು ಸಹೋದರರು, ದೇವಸ್ಥಾನದ ಮ್ಯಾನೇಜರ್ ನಟೇಶ್ ಕಾರಂತ್ ಹಾಗೂ ದೇವಳದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ವಿಗೆ ಕಾರಣರಾದರು.

Categories
ಕರಾವಳಿ ಸುದ್ದಿ

ಉಡುಪಿ ಪರ್ಯಾಯೋತ್ಸವಕ್ಕೆ ರಾಜ್ಯ ಸರಕಾರ ಯಾವುದೇ ಅನುದಾನ ನೀಡದೆ ಕಡೆಗಣಿಸಿರುವುದು ಖಂಡನೀಯ : ಕುತ್ಯಾರು

ಉಡುಪಿ : ದೇಶ ವಿದೇಶಗಳಿಂದ ಸಾವಿರಾರು ಪ್ರವಾಸಿಗರು ಹಾಗೂ ಭಕ್ತರನ್ನು ಆಕರ್ಷಿಸುವ ಕರಾವಳಿ ಕರ್ನಾಟಕದ ನಾಡ ಹಬ್ಬ ಎಂದೇ ಪ್ರಸಿದ್ಧಿ ಪಡೆದಿರುವ ಉಡುಪಿ ಪರ್ಯಾಯೋತ್ಸವದ ಹಿನ್ನೆಲೆಯಲ್ಲಿ ನಗರದ ರಸ್ತೆ ಅಭಿವೃದ್ಧಿ ಸಹಿತ ಮೂಲ ಸೌಕರ್ಯ ವೃದ್ಧಿಗೆ ರಾಜ್ಯ ಸರಕಾರ ಯಾವುದೇ ಅನುದಾನ ನೀಡದೆ ಪರ್ಯಾಯೋತ್ಸವವನ್ನು ಕಡೆಗಣಿಸಿರುವುದು ಖಂಡನೀಯ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ತಿಳಿಸಿದ್ದಾರೆ.

ಕಳೆದ ಪರ್ಯಾಯೋತ್ಸವದ ಸಂದರ್ಭದಲ್ಲಿಯೂ ಮೂಲ ಸೌಕರ್ಯ ಅಭಿವೃದ್ಧಿಗಾಗಿ ರಾಜ್ಯ ಸರಕಾರದಿಂದ ರೂ.10 ಕೋಟಿ ಅನುದಾನವನ್ನು ಮಂಜೂರು ಮಾಡಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಘೋಷಣೆ ಮಾಡಿದ್ದು, ಇದೀಗ 2 ವರ್ಷ ಸಂದರೂ ಚಿಕ್ಕಾಸೂ ಬಿಡುಗಡೆಯಾಗದಿರುವುದು ವಿಶಾದನೀಯವಾಗಿದೆ.

ಇದೀಗ ಜಿಲ್ಲೆಯ ಎಲ್ಲಾ ಐದು ಶಾಸಕರುಗಳ ಸಂಘಟಿತ ಪ್ರಯತ್ನದ ಫಲವಾಗಿ ಜಿಲ್ಲಾ ವ್ಯಾಪ್ತಿಯ ಗಣಿ ಇಲಾಖೆಯಲ್ಲಿ ಸಂಗ್ರಹವಾಗಿರುವ ರಾಜಧನದಲ್ಲಿ ಸುಮಾರು ರೂ.6 ಕೋಟಿ ಮೊತ್ತವನ್ನು ಉಡುಪಿ ನಗರದ ಮೂಲ ಸೌಕರ್ಯ ಅಭಿವೃದ್ಧಿಗೆ ಮೀಸಲಿಟ್ಟಿರುವುದನ್ನು ತನ್ನದೇ ಸಾಧನೆ ಎಂದು ಬೀಗುತ್ತಾ ರಾಜ್ಯ ಸರಕಾರದ ಅನುದಾನ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಕಾಂಗ್ರೆಸ್ ನಾಯಕರು ತಪ್ಪು ಮಾಹಿತಿ ನೀಡುತ್ತಾ ಜನರ ದಾರಿ ತಪ್ಪಿಸಲು ಪ್ರಯತ್ನಿಸುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.

ಗಣಿ ಇಲಾಖೆಗೆ ಸಂಬಂಧಿಸಿದಂತೆ ಜಿಲ್ಲೆಯ ಜನತೆ ಮರಳು, ಕೆಂಪು ಕಲ್ಲು, ಶಿಲೆ ಕಲ್ಲುಗಳ ಬಳಕೆಗೆ ಪಾವತಿಸಿರುವ ತೆರಿಗೆ ಮೊತ್ತ ಜಿಲ್ಲೆಯ ಅಭಿವೃದ್ಧಿ ಕೆಲಸ ಕಾರ್ಯಗಳಿಗೇ ವಿನಿಯೋಗವಾಗಬೇಕೆಂಬ ನೆಲೆಯಲ್ಲಿ ಜಿಲ್ಲೆಯ ಶಾಸಕರು ತೋರಿದ ಒಗ್ಗಟ್ಟು ಜಿಲ್ಲೆಯ ಮುಂದಿನ ಅಭಿವೃದ್ಧಿಗೆ ಹೊಸ ನಾಂದಿ ಹಾಡಿದೆ.

ಈ ನಿಟ್ಟಿನಲ್ಲಿ ಗಣಿ ಇಲಾಖೆಯ ರಾಜಧನ ಸಂಗ್ರಹದ ನಿಗದಿತ ಮೊತ್ತವನ್ನು ಪರ್ಯಾಯೋತ್ಸವದ ಪ್ರಯುಕ್ತ ಉಡುಪಿ ನಗರದ ಮೂಲ ಸೌಕರ್ಯ ಅಭಿವೃದ್ಧಿಗೆ ಬಳಸಲು ಸಂಘಟಿತರಾಗಿ ಕೈಜೋಡಿಸಿದ ಜಿಲ್ಲೆಯ ಕ್ರಿಯಾಶೀಲ ಶಾಸಕರುಗಳಾದ ಯಶ್ಪಾಲ್ ಎ.ಸುವರ್ಣ, ವಿ.ಸುನೀಲ್ ಕುಮಾರ್, ಗುರ್ಮೆ ಸುರೇಶ್ ಶೆಟ್ಟಿ, ಕಿರಣ್ ಕುಮಾರ್ ಕೊಡ್ಗಿ ಮತ್ತು ಗುರುರಾಜ್ ಗಂಟಿಹೊಳೆ ಅವರಿಗೆ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಹೃತ್ಪೂರ್ವಕ ಅಭಿನಂದನೆ ಸಲ್ಲಿಸುವ ಜೊತೆಗೆ ಕರಾವಳಿಯ ನಾಡ ಹಬ್ಬವಾಗಿರುವ ಉಡುಪಿ ಪರ್ಯಾಯೋತ್ಸವ ರಾಜ್ಯದ ನಾಡ ಹಬ್ಬವಾಗಿ ಮೂಡಿ ಬರುವಂತಾಗಲಿ ಎಂದು ಆಶಿಸುವುದಾಗಿ ಕುತ್ಯಾರು ನವೀನ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.